ADVERTISEMENT

ಕೌರ್ ಚಿನ್ನಕ್ಕೆ ಉದ್ದೀಪನ ಮದ್ದಿನ ಕಳಂಕ

ವಿಶ್ವ ಚಾಂಪಿಯನ್‌ಷಿಪ್ ಅವಕಾಶ ಕೈತಪ್ಪುವ ಸಾಧ್ಯತೆ: ‘ಬಿ’ ವರದಿಯಲ್ಲಿಯೂ ಮದ್ದಿನ ಅಂಶ

ಪಿಟಿಐ
Published 19 ಜುಲೈ 2017, 17:20 IST
Last Updated 19 ಜುಲೈ 2017, 17:20 IST
ಮನ್‌ಪ್ರೀತ್ ಕೌರ್
ಮನ್‌ಪ್ರೀತ್ ಕೌರ್   

ನವದೆಹಲಿ: ಹೋದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಹಿಳಾ ಶಾಟ್‌ಪಟ್ ಅಥ್ಲೀಟ್‌ ಮನ್‌ಪ್ರೀತ್ ಕೌರ್ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ.

ಇದರಿಂದಾಗಿ ಮನಪ್ರೀತ್ ಅವರು ಚಿನ್ನದ ಪದಕ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಕೂಟದ ಆತಿಥ್ಯ ವಹಿಸಿದ್ದ ಭಾರತಕ್ಕೆ ತೀವ್ರ ಮುಖಭಂಗವಾಗಿದೆ.

ಹೋದ ಜೂನ್ 1 ರಿಂದ 4ರವರೆಗೆ  ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್ ಕಪ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ 21 ವರ್ಷದ ಮನ್‌ಪ್ರೀತ್ ಅವರಿಂದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ವು ಮೂತ್ರದ ಮಾದರಿ ಸಂಗ್ರಹಿಸಿತ್ತು.

ADVERTISEMENT

‘ಬಿ’ ಪರೀಕ್ಷೆಯ ನಂತರ ಅವರು ನಿಷೇಧಿತ  ಡಿಮೆಥೈಲ್‌ಬುಟೈಲ್‌ಮೈನ್ ಸೇವಿಸಿರುವುದು ಸಾಬೀತಾಗಿದೆ. ಈ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಮೊದಲ ಅಥ್ಲೀಟ್ ಮನ್‌ಪ್ರಿತ್ ಆಗಿದ್ದಾರೆ. ಮೆಥೈಲೆಕ್ಸ್‌ನೈಮನ್ ಮಾದರಿಯ ಮದ್ದು ಇದಾಗಿದೆ. ಮೆಥೈಲೆಕ್ಸ್‌ನೈಮನ್ ಮದ್ದು  2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಳಕೆಯಾಗಿತ್ತು.

‘ಮನ್‌ಪ್ರೀತ್ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದರ ಬಗ್ಗೆ ಮಂಗಳವಾರ ರಾತ್ರಿ ನಾಡಾ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರು ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್  ಚಾಂಪಿಯನ್‌ಷಿಪ್‌ಗೆ ಅರ್ಹತೆ  ಗಿಟ್ಟಿಸಿದ್ದರು. ಈ ಪ್ರಕರಣದಿಂದಾಗಿ ಅವರು ಅವಕಾಶ ಕಳೆದುಕೊಳ್ಳಬಹುದು.

‘ಮನ್‌ಪ್ರೀತ್ ಅವರನ್ನು ವಿಶ್ವ ಚಾಂಪಿಯನ್‌ಷಿಪ್‌ಗೆ ಕಳಿಸುವ ಕುರಿತು ಇನ್ನೂ ಯೋಚಿಸಿಲ್ಲ. ಅಲ್ಲಿ ನಮ್ಮ ದೇಶಕ್ಕೆ ಅವಮಾನವಾಗುವುದು ಬೇಡ ಎಂಬ ಅಭಿಪ್ರಾಯ ಕೆಲವರದ್ದಾಗಿದೆ. ಆದ್ದರಿಂದ ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಫೆಡರೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭುವನೇಶ್ವರದ ಕೂಟದಲ್ಲಿ ಮನ್‌ಪ್ರೀತ್ ಅವರು 18.28 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ಚಿನ್ನದ  ಪದಕ ಜಯಿಸಿದ್ದರು.

‘ನಮಗಿನ್ನೂ ಈ ಪ್ರಕರಣದ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ’ ಎಂದು ಮನ್‌ಪ್ರೀತ್ ಅವರ ಕೋಚ್ ಕೂಡ ಆಗಿರುವ ಪತಿ ಕರಮ್‌ಜೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಗುಂಟೂರಿನಲ್ಲಿ ಮುಕ್ತಾಯವಾದ ಅಂತರರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿಯೂ ಅವರು ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.