ADVERTISEMENT

ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ರದ್ದು

ಪಿಟಿಐ
Published 25 ಏಪ್ರಿಲ್ 2018, 19:36 IST
Last Updated 25 ಏಪ್ರಿಲ್ 2018, 19:36 IST

ಚಂಡಿಗಡ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮವನ್ನು ಹರಿಯಾಣ ಸರ್ಕಾರ ದಿಢೀರ್ ರದ್ದುಗೊಳಿಸಿದೆ. ಬಹುಮಾನ ಮೊತ್ತಕ್ಕೆ ಸಂಬಂಧಿಸಿ ಕೆಲ ಕ್ರೀಡಾಪಟುಗಳು ಕಾರ್ಯಕ್ರಮ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದೇ ಇದಕ್ಕೆ ಕಾರಣ.

ಪಂಚಕುಲದಲ್ಲಿ ಗುರುವಾರ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ರೈಲ್ವೆ ಮತ್ತು ಸರ್ವಿಸಸ್‌ನಲ್ಲಿ ಉದ್ಯೋಗಿಯಾಗಿರುವವರಿಗೆ ಕಡಿಮೆ ಬಹುಮಾನ ಮೊತ್ತ ವಿತರಿಸಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಕುಸ್ತಿಪಟು ವಿನೇಶಾ ಪೋಗಟ್‌, ಜಾವೆಲಿನ್‌ ಥ್ರೋ ಅಥ್ಲೀಟ್‌ ನೀರಜ್ ಚೋಪ್ರಾ ಮತ್ತು ಬಾಕ್ಸರ್ ಮನೋಜ್ ಕುಮಾರ್‌ ವಿರೋಧ ವ್ಯಕ್ತಪಡಿಸಿದ್ದರು.

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವಿನೇಶಾ ಮತ್ತು ನೀರಜ್‌ ಚಿನ್ನ ಗೆದ್ದಿದ್ದರು. ಮನೋಜ್ ಕುಮಾರ್ ಕಂಚು ಗಳಿಸಿದ್ದರು. ರಾಜ್ಯದ ಕ್ರೀಡಾನೀತಿ ಪ್ರಕಾರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದವರಿಗೆ ₹ 1.5 ಕೋಟಿ, ಬೆಳ್ಳಿ ಗೆದ್ದವರಿಗೆ ₹ 75 ಲಕ್ಷ ಮತ್ತು ಕಂಚು ಗೆದ್ದವರಿಗೆ ₹ 50 ಲಕ್ಷ ಮೊತ್ತ ನೀಡಲಾಗುತ್ತದೆ.

ADVERTISEMENT

‘ಈಗ ಇರುವ ಕ್ರೀಡಾ ನೀತಿಯ ಪ್ರಕಾರ ಬಹುಮಾನ ಮೊತ್ತ ಘೋಷಿಸಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸದ್ಯದಲ್ಲೇ ಸಭೆ ಸೇರಿ ನೀತಿಯನ್ನು ಮರುಪರಿಶೀಲನೆ ಮಾಡುವ ಸಂಬಂಧ ಚರ್ಚಿಸಲಾಗುವುದು’ ಎಂದು ಕ್ರೀಡಾ ಸಚಿವ ಅನಿಲ್ ವಿಜ್‌ ಸುದ್ದಿಸಂಸ್ಥೆಗೆ ತಿಳಿಸಿದರು.

‘ಹರಿಯಾಣ ಸರ್ಕಾರ ಕ್ರೀಡಾಪಟುಗಳಿಗೆ ಗರಿಷ್ಠ ಬಹುಮಾನ ಮೊತ್ತ ನೀಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ರೈಲ್ವೆ, ಸರ್ವಿಸಸ್ ಮುಂತಾದ ಸಂಸ್ಥೆಗಳನ್ನು ಪ್ರತಿನಿಧಿಸುವ ರಾಜ್ಯದ ಕ್ರೀಡಾಪಟುಗಳಿಗೂ ಬಹುಮಾನ ನೀಡಲಾಗುತ್ತಿದೆ. ಅವರಿಗೆ ಸಂಬಂಧಪಟ್ಟ ಸಂಸ್ಥೆಗಳಿಂದಲೂ ಬಹುಮಾನ ಮೊತ್ತ ಲಭಿಸುತ್ತದೆ. ಅವರಿಗೆ ಕಡಿಮೆ ಮೊತ್ತ ನೀಡದಿದ್ದರೆ ರಾಜ್ಯವನ್ನು ಪ್ರತಿನಿಧಿಸಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ವಿಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.