ADVERTISEMENT

ಕ್ವಾರ್ಟರ್ ಫೈನಲ್‌ಗೆ ವಾವ್ರಿಂಕ

ಫ್ರೆಂಚ್ ಓಪನ್‌ ಟೆನಿಸ್‌: ಮುಗುರುಜಾ ಜಯದ ಓಟ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ವಿರುದ್ಧ ಗೆಲುವು ಗಳಿಸಿದ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ ಚೆಂಡನ್ನು ರಿಟರ್ನ್‌ ಮಾಡಲು ಮುಂದಾದ ರೀತಿ  ರಾಯಿಟರ್ಸ್‌ ಚಿತ್ರ
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ವಿರುದ್ಧ ಗೆಲುವು ಗಳಿಸಿದ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ ಚೆಂಡನ್ನು ರಿಟರ್ನ್‌ ಮಾಡಲು ಮುಂದಾದ ರೀತಿ ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌, (ರಾಯಿಟರ್ಸ್‌/ ಪಿಟಿಐ/ ಎಎಫ್‌ಪಿ):  ಹಾಲಿ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ಮತ್ತು ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಇಲ್ಲಿನ ರೋಲಂಡ್ ಗ್ಯಾರೊಸ್‌ ಅಂಗಳದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ವಾವ್ರಿಂಕ 7–6, 6–7, 6–3, 6–2ರಲ್ಲಿ ಸರ್ಬಿಯಾದ  ವಿಕ್ಟರ್‌ ಟ್ರೊಯಿಕಿ ಎದುರು ಗೆಲುವು ಪಡೆದರು.

31 ವರ್ಷದ ವಾವ್ರಿಂಕ ಸಿಂಗಲ್ಸ್‌ ವಿಭಾಗದಲ್ಲಿ ಎರಡು ಗ್ರ್ಯಾಂಡ್ ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 2014ರ ಆಸ್ಟ್ರೇಲಿಯಾ ಓಪನ್‌ ಮತ್ತು 2015ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ವಾವ್ರಿಂಕ ಮತ್ತು ಟ್ರೊಯಿಕಿ ಒಟ್ಟು ಐದು ಸಲ ಮುಖಾಮುಖಿಯಾಗಿದ್ದಾರೆ.  ಎಲ್ಲಾ ಪಂದ್ಯಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಆಟಗಾರ ಗೆಲುವು ಪಡೆದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಅಲ್ಬರ್ಟ್‌ ರಾಮಸ್‌ 6–2, 6–4, 6–4ರ ನೇರ ಸೆಟ್‌ಗಳಿಂದ ಕೆನಡಾದ ಮಿಲೊಸ್‌ ರಾಯೊನಿಕ್‌ ಎದುರು ಜಯ ಪಡೆದರು.

ಎಂಟರ ಘಟ್ಟಕ್ಕೆ ಮುಗುರುಜಾ: ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯ ಲ್ಲಿರುವ ಗಾರ್ಬೈನ್‌ ಮುಗುರುಜಾ 6–3, 6–4ರಲ್ಲಿ  ರಷ್ಯಾದ ಸ್ವೆಟ್ಲೆನಾ ಕುಜ್ನೆತ್ಸೋವಾ ಎದುರು ಗೆಲುವು ಸಾಧಿಸಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ನಾಲ್ಕನೇ ಸುತ್ತಿಗೆ ನೊವಾಕ್‌: ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿ ಎನಿಸಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ 6–2, 6–3, 6–3ರಲ್ಲಿ ಬ್ರಿಟನ್‌ನ ಅಜಿಜ್‌ ಬೆಡನ್‌ ಎದುರು ಜಯ ಪಡೆದರು.

ಕ್ವಾರ್ಟರ್ ಫೈನಲ್‌ಗೆ ಬೋಪಣ್ಣ –ಪೇಸ್‌ ಜೋಡಿ:  ಭಾರತದ ರೋಹನ್‌ ಬೋಪಣ್ಣ ಮತ್ತು ರುಮೇನಿಯಾದ ಫ್ಲೋರಿನ್‌ ಮಾರ್ಗೆಯಾ ಅವರು  ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಈ ಜೋಡಿ 6–2, 6–7, 6–1ರಲ್ಲಿ  ಮಾರ್ಕಸ್‌ ಡೇನಿಯಲ್‌ ಹಾಗೂ  ಬಾಕೆರ್ ಎದುರು ಜಯ ಸಾಧಿಸಿತು. ಭಾರತದ ಲಿಯಾಂಡರ್ ಪೇಸ್‌ ಹಾಗೂ ಪೋಲೆಂಡ್‌ನ ಮಾರ್ಸಿನ್‌ ಮಕಿವೊಸ್ಕಿ 7––6, 7–6ರಲ್ಲಿ   ಬ್ರೊನೊ ಸೊಯರಸ್‌–ಜಾಮಿಯೆ ಮರ್ರೆ ವಿರುದ್ಧ ಜಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.