ADVERTISEMENT

ಗುಜರಾತ್‌ ಅಗ್ರಸ್ಥಾನ ಮತ್ತಷ್ಟು ಭದ್ರ

ಕೈಗೂಡದ ಪುಣೇರಿ ತಂಡದ ಹ್ಯಾಟ್ರಿಕ್‌ ಜಯದ ಆಸೆ

ಪ್ರಮೋದ ಜಿ.ಕೆ
Published 22 ಆಗಸ್ಟ್ 2017, 19:56 IST
Last Updated 22 ಆಗಸ್ಟ್ 2017, 19:56 IST
ಪುಣೇರಿ ಪಲ್ಟನ್ ಮತ್ತು ಗುಜರಾತ್‌ ಸೂಪರ್‌ಜೈಂಟ್ಸ್ ನಡುವಣ ಪಂದ್ಯ
ಪುಣೇರಿ ಪಲ್ಟನ್ ಮತ್ತು ಗುಜರಾತ್‌ ಸೂಪರ್‌ಜೈಂಟ್ಸ್ ನಡುವಣ ಪಂದ್ಯ   

ಲಖನೌ: ತವರಿನಲ್ಲಿ ಅಜೇಯ ಸಾಧನೆ ಮಾಡಿ ನವಾಬರ ನಾಡಿಗೆ ಬಂದಿರುವ ಗುಜರಾತ್‌ ಸೂಪರ್‌ಜೈಂಟ್ಸ್ ತಂಡ ಪ್ರೊ ಕಬಡ್ಡಿ ಟೂರ್ನಿಯ ಲಖನೌ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿದೆ. ಈ ಮೂಲಕ ತಂಡ ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ.

ಬಾಬು ಬನಾರಸಿ ದಾಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಂಘಟಿತ ಹೋರಾಟ ಮಾಡಿದ ಗುಜರಾತ್‌ ತಂಡ 35–21 ಪಾಯಿಂಟ್ಸ್‌ನಿಂದ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು. ಕರ್ನಾಟಕದ ಬಿ.ಸಿ. ರಮೇಶ್ ಕೋಚ್‌ ಆಗಿರುವ ಪುಣೇರಿ ತಂಡ ಹಿಂದಿನ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಮತ್ತು ಬಂಗಾಳ ವಾರಿಯರ್ಸ್‌ ಎದುರು ಜಯಿಸಿತ್ತು. ಆದರೆ ರಕ್ಷಣಾ ವಿಭಾಗ ಮತ್ತು ರೈಡಿಂಗ್‌ನಲ್ಲಿ ಪದೇ ಪದೇ ತಪ್ಪು ಮಾಡಿದ್ದರಿಂದ ಮೂರನೇ ಪಂದ್ಯವನ್ನು ಗೆಲ್ಲುವ ಗುರಿ ಈಡೇರಲಿಲ್ಲ.

ಹತ್ತು ಪಂದ್ಯಗಳನ್ನಾಡಿರುವ ಗುಜರಾತ್‌ ಏಳರಲ್ಲಿ ಗೆದ್ದು, ಎರಡು ಟೈ ಮಾಡಿಕೊಂಡಿದೆ. ಒಂದರಲ್ಲಷ್ಟೇ ಸೋತಿದ್ದು 41 ಪಾಯಿಂಟ್ಸ್‌ ಹೊಂದಿದೆ. ಇದೇ ಗುಂಪಿನಲ್ಲಿರುವ ಪುಣೇರಿ 21 ಪಾಯಿಂಟ್ಸ್‌ನಿಂದ ಎರಡನೇ ಸ್ಥಾನದಲ್ಲಿದೆ.

ADVERTISEMENT

ಬೋನಸ್‌ ಪಾಯಿಂಟ್‌ ಮೂಲಕ ಖಾತೆ ಆರಂಭಿಸಿದ ಗುಜರಾತ್‌ ತಂಡ ಪಂದ್ಯದ ಆರಂಭದಿಂದಲೇ ಮುನ್ನಡೆ ಸಾಧಿಸಿತ್ತು. ಈ ತಂಡದವರು ರಕ್ಷಣಾ ವಿಭಾಗದಲ್ಲಿ ಅತ್ಯುತ್ತಮ ತಂತ್ರ ಹೆಣೆದರು. ಇದರಿಂದ ಪುಣೇರಿ ತಂಡಕ್ಕೆ ರೈಡಿಂಗ್‌ನಲ್ಲಿ ಹೆಚ್ಚು ಪಾಯಿಂಟ್‌ ಗಳಿಸಲು ಸಾಧ್ಯವಾಗಲಿಲ್ಲ.

ಏಳನೇ ನಿಮಿಷದಲ್ಲಿ ಎರಡು ರೈಡಿಂಗ್ ಪಾಯಿಂಟ್‌ ಗಳಿಸಿದ ಪುಣೇರಿ ತಂಡದ ನಾಯಕ ದೀಪಕ್‌ ಹೂಡಾ 5–5ರಲ್ಲಿ ಸಮಬಲಕ್ಕೆ ಕಾರಣರಾದರು. ಆಗ ಎಂಟು ನಿಮಿಷಗಳ ಪಂದ್ಯ ಮುಗಿದಿತ್ತು. ನಂತರದ ಅವಧಿಯಲ್ಲಿ ಗುಜರಾತ್‌ ತಂಡವೇ ಪ್ರಾಬಲ್ಯ ಮೆರೆಯಿತು.

ಮಹಾರಾಷ್ಟ್ರದ ತಂಡವನ್ನು 14ನೇ ನಿಮಿಷದಲ್ಲಿ ಆಲೌಟ್‌ ಮಾಡಿದ ಗುಜರಾತ್‌ ಎರಡು ಲೋನಾ ಪಾಯಿಂಟ್ಸ್ ಪಡೆದುಕೊಂಡಿತು. ಇದರಿಂದ ತಂಡ 16–6, 18–8, 19–11, 20–11ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡು ಸಾಗಿತು. ಕರ್ನಾಟಕದ ಸುಕೇಶ್‌ ಹೆಗ್ಡೆ ನಾಯಕರಾಗಿರುವ ಗುಜರಾತ್ ತಂಡ ಮೊದಲರ್ಧದಲ್ಲಿ 16–7ರಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಅವಧಿಯಲ್ಲಿ ಪುಣೇರಿ ಆಟಗಾರರು ಅಂತರ ಕಡಿಮೆ ಮಾಡಿಕೊಡಲು ಯತ್ನಿಸಿ ಪದೇ ಪದೇ ಪಾಯಿಂಟ್‌ ಕೈಚೆಲ್ಲಿದರು.

ಪಂದ್ಯದ ಕೊನೆಯ ಐದು ನಿಮಿಷ ಬಾಕಿಯಿದ್ದಾಗ ಪುಣೇರಿ 18–24ರಲ್ಲಿ ಹಿನ್ನಡೆಯಲ್ಲಿತ್ತು. ಪಾಯಿಂಟ್‌ ಗಳಿಸುವ ಒತ್ತಡಕ್ಕೆ ಸಿಲುಕಿದ ಆಟಗಾರರು ಔಟಾದರು. ಕೊನೆಯ ನಿಮಿಷದಲ್ಲಿಯೂ ತಂಡ ಆಲೌಟ್ ಆಯಿತು. ಇದು ಗುಜರಾತ್‌ ತಂಡದ ಬಲಿಷ್ಠ ರಕ್ಷಣಾ ವಿಭಾಗದ ಸಾಮರ್ಥ್ಯಕ್ಕೆ ಸಾಕ್ಷಿ.

ಇಂದಿನ ಪಂದ್ಯಗಳು

ಹರಿಯಾಣ ಸ್ಟೀಲರ್ಸ್‌–ದಬಾಂಗ್‌ ಡೆಲ್ಲಿ
ಆರಂಭ: ರಾತ್ರಿ 8ಕ್ಕೆ

ಯು.ಪಿ. ಯೋಧಾ–ತಮಿಳ್‌ ತಲೈವಾಸ್‌
ಆರಂಭ: ರಾತ್ರಿ 9ಕ್ಕೆ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.