ADVERTISEMENT

ಗುಜರಾತ್ ಲಯನ್ಸ್‌ ಗೆಲುವಿನ ಓಟ

ಸೂಪರ್‌ ಜೈಂಟ್ಸ್‌ಗೆ ಕೈಕೊಟ್ಟ ಬೌಲರ್‌ಗಳು; ಸ್ಮಿತ್‌ ಶತಕ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಗುಜರಾತ್‌ ಲಯನ್ಸ್‌ ವಿರುದ್ಧ ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದ ಸ್ಟೀವನ್‌ ಸ್ಮಿತ್‌ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ.  -ಎಎಫ್‌ಪಿ ಚಿತ್ರ
ಗುಜರಾತ್‌ ಲಯನ್ಸ್‌ ವಿರುದ್ಧ ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದ ಸ್ಟೀವನ್‌ ಸ್ಮಿತ್‌ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ. -ಎಎಫ್‌ಪಿ ಚಿತ್ರ   

ಪುಣೆ (ಪಿಟಿಐ): ಚೊಚ್ಚಲ ಐಪಿಎಲ್‌ ಟೂರ್ನಿ ಆಡುತ್ತಿರುವ ಗುಜರಾತ್‌ ಲಯನ್ಸ್‌ ತಂಡದ ಗೆಲುವಿನ ಓಟ ಮುಂದುವರಿದಿದೆ. 

ಆರಂಭಿಕ ಆಟಗಾರರಾದ ಡ್ವೇನ್‌ ಸ್ಮಿತ್‌ (63; 37ಎ, 9ಬೌಂ, 1ಸಿ) ಮತ್ತು ಬ್ರೆಂಡನ್‌ ಮೆಕ್ಲಮ್‌ (43; 22ಎ, 5ಬೌಂ, 2ಸಿ) ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಲಯನ್ಸ್‌ ತಂಡ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ವಿರೋಚಿತ ಗೆಲುವು ಗಳಿಸಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. 

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂ ಗಣದಲ್ಲಿ ಶುಕ್ರವಾರ  ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪುಣೆ ತಂಡ 20 ಓವರ್‌ ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 195 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಲಯನ್ಸ್‌ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಅಮೋಘ ಆರಂಭ: ಗುರಿ ಬೆನ್ನಟ್ಟಿದ ಲಯನ್ಸ್‌ ತಂಡಕ್ಕೆ ಮೆಕ್ಲಮ್‌ ಮತ್ತು ಡ್ವೇನ್‌ ಸ್ಮಿತ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ  8.1 ಓವರ್‌ಗಳಲ್ಲಿ 93ರನ್‌ ಕಲೆಹಾಕಿ ಪ್ರವಾಸಿ ತಂಡದ ಗೆಲುವಿನ ಹಾದಿಯನ್ನು ಸುಗಮವಾಗಿಸಿತು.

ಇವರಿಬ್ಬರು ಔಟಾದ ಬಳಿಕ ಬಂದ ನಾಯಕ ರೈನಾ (34; 28ಎ, 2ಬೌಂ) ಮತ್ತು ದಿನೇಶ್‌ ಕಾರ್ತಿಕ್‌ (33; 20ಎ, 4ಬೌಂ) ಸೂಪರ್‌ಜೈಂಟ್ಸ್‌ ಬೌಲರ್‌ಗ ಳನ್ನು ದಿಟ್ಟತನದಿಂದ ಎದುರಿಸಿ ಲಯನ್ಸ್‌ ರನ್‌ ಗಳಿಕೆಗೆ ವೇಗ ತುಂಬಿದರು. ಆದರೆ ಡ್ವೇನ್‌ ಬ್ರಾವೊ (7), ರವೀಂದ್ರ ಜಡೇಜ (0) ಮತ್ತು ಇಶಾನ್‌ ಕಿಶನ್‌ (0) ವಿಫಲರಾದರು. ಹೀಗಾಗಿ ತಂಡ ಸಂಕಷ್ಟಕ್ಕೊಳಗಾಗಿತ್ತು.

ಅಂತಿಮ ಓವರ್‌ನ ರೋಚಕತೆ: ಲಯನ್ಸ್‌ ಗೆಲುವಿಗೆ ಅಂತಿಮ ಓವರ್‌ನಲ್ಲಿ 9ರನ್‌ಗಳ ಅಗತ್ಯವಿತ್ತು. ತಿಸಾರ ಪೆರೆರಾ ಎಸೆದ ಓವರ್‌ನ ಮೊದಲ ಎಸೆತದಲ್ಲಿ ಜೇಮ್ಸ್‌ ಫಾಕ್ನರ್‌ ಬೌಂಡರಿ ಬಾರಿಸಿದರು.

ಎರಡನೇ ಎಸೆತ ವೈಡ್‌ ಆದರೆ ಮರು ಎಸೆತದಲ್ಲಿ ಫಾಕ್ನರ್‌ ಒಂದು ರನ್‌ ಗಳಿಸಿದರು. ಮೂರನೇ ಎಸೆತದಲ್ಲಿ ರೈನಾ ಔಟಾದರು. ಇದರ ಬೆನ್ನಲ್ಲೇ ಇಶಾನ್‌ ಕಿಶನ್‌ ಕೂಡಾ ರನ್‌ಔಟ್‌ ಆದರು. ಹೀಗಾಗಿ ಪುಣೆ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು.

ಆದರೆ ಫಾಕ್ನರ್‌ ಅಂತಿಮ ಎಸೆತದಲ್ಲಿ ಒಂದು ರನ್‌ ಕಲೆ ಹಾಕಿ ಸೂಪರ್‌ಜೈಂಟ್ಸ್‌ ಜಯದ ಕನಸನ್ನು ನುಚ್ಚುನೂರು ಮಾಡಿದರು. ಲಯನ್ಸ್ ತಂಡದಲ್ಲಿರುವ ಕರ್ನಾಟಕದ ಶಿವಿಲ್‌ ಕೌಶಿಕ್‌ ಈ ಪಂದ್ಯದಲ್ಲಿ ಆಡಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

ಶತಕದ ಅಬ್ಬರ: ಮೂರನೇ ಓವರ್‌ನಲ್ಲಿ ಸೌರಭ್‌ ತಿವಾರಿ ವಿಕೆಟ್‌ ಕಳೆದುಕೊಂಡ ಪುಣೆ ತಂಡಕ್ಕೆ ಹೆಚ್ಚು ಹೊತ್ತು ಈ ಆಘಾತ ಕಾಡಲಿಲ್ಲ. ಏಕೆಂದರೆ ರಹಾನೆ ಮತ್ತು ಸ್ಮಿತ್‌ ಹರಿಸಿದ ರನ್‌ ಹೊಳೆಯಲ್ಲಿ ಲಯನ್ಸ್ ತಂಡದ ಬೌಲರ್‌ಗಳು ಕೊಚ್ಚಿ ಹೋದರು.

54 ಎಸೆತಗಳನ್ನು ಎದುರಿಸಿದ ಸ್ಮಿತ್‌ ಎಂಟು ಬೌಂಡರಿ ಮತ್ತು ಐದು ಸಿಕ್ಸರ್‌ಗಳು ಸೇರಿದಂತೆ 101 ರನ್ ಗಳಿಸಿದರು. ಇವರ ಆಟಕ್ಕೆ ಅಮೋಘ ಬೆಂಬಲ ನೀಡಿದ ರಹಾನೆ 45 ಎಸೆತಗಳಲ್ಲಿ 53 ರನ್ ಬಾರಿಸಿದರು.   ಟ್ವೆಂಟಿ–20 ಮಾದರಿಯಲ್ಲಿ ಸ್ಮಿತ್ ಬಾರಿಸಿದ ಚೊಚ್ಚಲ ಶತಕವಿದು.

'ಸ್ಕೋರ್‌ಕಾರ್ಡ್‌':
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌  3 ಕ್ಕೆ 195 (20 ಓವರ್‌ಗಳಲ್ಲಿ)

ಅಜಿಂಕ್ಯ ರಹಾನೆ ರನ್ ಔಟ್‌ (ಡ್ವೇನ್ ಬ್ರಾವೊ)  53
ಸೌರಭ್‌ ತಿವಾರಿ ರನ್ ಔಟ್‌ (ಸುರೇಶ್ ರೈನಾ)  01
ಸ್ಟೀವನ್‌ ಸ್ಮಿತ್‌ ಬಿ. ಡ್ವೇನ್‌ ಬ್ರಾವೊ  101
ಮಹೇಂದ್ರ ಸಿಂಗ್ ದೋನಿ ಔಟಾಗದೆ  30
ತಿಸಾರ ಪೆರೆರಾ ಔಟಾಗದೆ  03

ಇತರೆ: (ಲೆಗ್ ಬೈ–2, ವೈಡ್‌–4, ನೋ ಬಾಲ್‌–1)   07

ವಿಕೆಟ್‌ ಪತನ: 1–13 (ತಿವಾರಿ; 2.3), 2–124 (ರಹಾನೆ; 13.4), 3–188 (ಸ್ಮಿತ್‌; 19.3).

ಬೌಲಿಂಗ್‌: ಪ್ರವೀಣ್‌ ಕುಮಾರ್‌ 4–0–37–0, ಧವಳ್‌ ಕುಲಕರ್ಣಿ 3–0–25–0, ರವೀಂದ್ರ ಜಡೇಜ 4–0–37–0, ಶಿವಿಲ್‌ ಕೌಶಿಕ್‌ 3–0–32–0, ಜೇಮ್ಸ್ ಫಾಕ್ನರ್‌ 2–0–22–0, ಡ್ವೇನ್ ಬ್ರಾವೊ 4–0–40–1.

ಗುಜರಾತ್‌ ಲಯನ್ಸ್‌  7 ಕ್ಕೆ 196  (20 ಓವರ್‌ಗಳಲ್ಲಿ)
ಡ್ವೇನ್‌ ಸ್ಮಿತ್‌ ಬಿ ತಿಸಾರ ಪೆರೆರಾ  63
ಬ್ರೆಂಡನ್‌ ಮೆಕ್ಲಮ್‌ ಸಿ ಅಲ್ಬಿ ಮಾರ್ಕೆಲ್‌ ಬಿ ರಜತ್‌ ಭಾಟಿಯಾ  43
ಸುರೇಶ್‌ ರೈನಾ ಬಿ ತಿಸಾರ ಪೆರೆರಾ  34
ದಿನೇಶ್‌ ಕಾರ್ತಿಕ್‌ ಸಿ ರಹಾನೆ ಬಿ ಅಶೋಕ್‌ ದಿಂಡಾ  33
ಡ್ವೇನ್‌ ಬ್ರಾವೊ ಸಿ ದೋನಿ ಬಿ ಅಶೋಕ್‌ ದಿಂಡಾ  07
ರವೀಂದ್ರ ಜಡೇಜ ರನ್‌ಔಟ್‌ (ದೋನಿ)  00
ಜೇಮ್ಸ್‌ ಫಾಕ್ನರ್‌ ಔಟಾಗದೆ  09
ಇಶಾನ್‌ ಕಿಶನ್‌ ರನ್‌ಔಟ್‌ (ಸೌರಭ್‌ ತಿವಾರಿ)  00
ಪ್ರವೀಣ್‌ ಕುಮಾರ್‌ ಔಟಾಗದೆ 00

ADVERTISEMENT

ಇತರೆ: ( ವೈಡ್‌ 7 )  07

ವಿಕೆಟ್‌ ಪತನ: 1–93 (ಮೆಕ್ಲಮ್‌; 8.1), 2–115 (ಸ್ಮಿತ್‌; 10.5), 3–166 (ಕಾರ್ತಿಕ್‌; 16.2), 4–180 (ಬ್ರಾವೊ; 18.2), 5–180 (ಜಡೇಜ; 18.3), 6–193 (ರೈನಾ; 19.3), 7–193 (ಕಿಶನ್‌; 19.4).

ಬೌಲಿಂಗ್‌: ಅಲ್ಬಿ ಮಾರ್ಕೆಲ್‌ 2–0–30–0, ಅಶೋಕ್‌ ದಿಂಡಾ 4–0–40–2, ತಿಸಾರ ಪೆರೆರಾ 4–0–41–2, ಆರ್‌.ಅಶ್ವಿನ್‌ 4–0–37–0, ರಜತ್‌ ಭಾಟಿಯಾ 3–0–26–1,  ಮುರುಗನ್‌ ಅಶ್ವಿನ್‌ 3–0–22–0.
             
ಫಲಿತಾಂಶ: ಗುಜರಾತ್ ಲಯನ್ಸ್‌ಗೆ 3 ವಿಕೆಟ್‌ ಗೆಲುವು.

ಪಂದ್ಯಶ್ರೇಷ್ಠ: ಸ್ಟೀವನ್‌ ಸ್ಮಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.