ADVERTISEMENT

ಗೆದ್ದರೂ ಖುಷಿ ನೀಡದ ಸಾಧನೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಒತ್ರಾವ, ಜೆಕ್‌ ಗಣರಾಜ್ಯ (ಐಎಎನ್‌ಎಸ್‌): ಒಲಿಂಪಿಕ್ಸ್‌ನಲ್ಲಿ ಆರು ಸಲ ಚಿನ್ನದ ಪದಕ ಗೆದ್ದ ದಾಖಲೆ ಹೊಂದಿರುವ  ಜಮೈಕಾದ ಉಸೇನ್‌ ಬೋಲ್ಟ್‌‌ ಇಲ್ಲಿ ನಡೆದ ಗೋಲ್ಡನ್‌ ಸ್ಪೇಕ್‌ ಕ್ರೀಡಾಕೂಟದ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಅದರೆ, ಅವರಿಗೆ 20 ಸೆಕೆಂಡುಗಳ ಒಳಗೆ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಮುಂಬರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಸಜ್ಜುಗೊ ಳ್ಳುತ್ತಿರುವ ಬೋಲ್ಟ್‌ ಇಲ್ಲಿ 20.13 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ತಮ್ಮ ಹಿಂದಿನ ದಾಖಲೆ (19.19ಸೆ.) ಉತ್ತಮ ಪಡಿಸಿಕೊಳ್ಳಲು ಆಗಲಿಲ್ಲ.

‘20 ಸೆಕೆಂಡುಗಳ ಒಳಗೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಸಾಮರ್ಥ್ಯ ತೃಪ್ತಿ ನೀಡಿಲ್ಲ. ವೇಗದಲ್ಲಿ ಚುರುಕುತನ ಕಂಡುಕೊಳ್ಳುವುದು ಮತ್ತು 20 ಸೆಕೆಂಡುಗಳ ಒಳಗೆ ಗುರಿ ಮುಟ್ಟುವುದು ನನ್ನ ಆಸೆ. ಗಾಯದ ಸಮಸ್ಯೆಯಿಂದ ಈಚೆಗಷ್ಟೇ ಚೇತರಿಸಿಕೊಂಡಿದ್ದೇನೆ. ಆದ್ದರಿಂದ ಪೂರ್ಣ ಸಾಮರ್ಥ್ಯ ಹಾಕಲು ಕೆಲ ಸಮಯ ಬೇಕಾಗುತ್ತದೆ’ ಎಂದು ಬೋಲ್ಟ್‌ ನುಡಿದರು.

ಬೋಲ್ಟ್ 2008ರ ಬೀಜಿಂಗ್‌ ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ನ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದ್ದರು. ಎರಡು ವರ್ಷಗಳ ಹಿಂದೆ ಮಾಸ್ಕೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100ಮೀ., 200ಮೀ., ಮತ್ತು 4XX100ಮೀ. ರಿಲೇಯಲ್ಲಿ ಸ್ವರ್ಣ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.