ADVERTISEMENT

ಚಂದ್ರಶೇಖರ್‌ಗೆ ಜೀವಮಾನ ಸಾಧನೆ ಗೌರವ

ಸ್ವಾಬ್ ವಾರ್ಷಿಕ ಪ್ರಶಸ್ತಿ: ಬಿಎಫ್‌ಸಿ, ರಾಹುಲ್‌, ಅದಿತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಪ್ರಶಸ್ತಿ ಪಡೆದವರು  ಪ್ರಜಾವಾಣಿ ಚಿತ್ರ
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಪ್ರಶಸ್ತಿ ಪಡೆದವರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಬೌಲರ್ ಬಿ.ಎಸ್. ಚಂದ್ರಶೇಖರ್ ಅವರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘವು (ಸ್ವಾಬ್) ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಿತು.

ಭಾನುವಾರ  ನಡೆದ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಐಸಿಸಿ ರೆಫರಿ ಜಾವಗಲ್ ಶ್ರೀನಾಥ್ ಅವರು  ಚಂದ್ರಶೇಖರ್ ಅವರಿಗೆ ಪುರಸ್ಕಾರ ನೀಡಿದರು.

ಪುರುಷರ ವಿಭಾಗದಲ್ಲಿ ವರ್ಷದ ಕ್ರೀಡಾಪಟು ಗೌರವಕ್ಕೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮತ್ತು ಮಹಿಳೆಯರ ವಿಭಾಗದಲ್ಲಿ ಒಲಿಂಪಿಯನ್ ಗಾಲ್ಫರ್‌ ಅದಿತಿ ಅಶೋಕ್ ಅವರು ಪಾತ್ರರಾದರು.

ADVERTISEMENT

ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ವರ್ಷದ ಅತ್ಯುತ್ತಮ ಸಾಧನೆ ಮಾಡಿದ ತಂಡ  ಗೌರವಕ್ಕೆ ಪಾತ್ರವಾಯಿತು. ಈ ತಂಡವು ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ ಯಲ್ಲಿ ರನ್ನರ್ಸ್‌ ಅಪ್ ಆಗಿತ್ತು.

ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಮತ್ತು ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್   ಕ್ರಮವಾಗಿ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗಗಳ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು.

ಐ ಲೀಗ್ ಫುಟ್‌ಬಾಲ್ ಟೂರ್ನಿ ಚಾಂಪಿಯನ್ ತಂಡ ಬಿಎಫ್‌ಸಿಯ ಮಾಜಿ ಕೋಚ್ ಆ್ಯಷ್ಲೆ ವೆಸ್ಟ್‌ವುಡ್ ಅವರು ಉತ್ತಮ ಕೋಚ್ ಮತ್ತು ರಾಜ್ಯ ಚೆಸ್ ಸಂಸ್ಥೆಗೆ ಉತ್ತಮ ಕ್ರೀಡಾ ಸಂಸ್ಥೆ ಪ್ರಶಸ್ತಿ ನೀಡಲಾಯಿತು. 

ಪ್ರಶಸ್ತಿ ಪ್ರದಾನ ಮಾಡಿದ ಜಾವಗಲ್ ಶ್ರೀನಾಥ್, ‘ತಂತ್ರಜ್ಞಾನದ ಬೆಳವಣಿಗೆ ಯಿಂದಾಗಿ ಈಗ ಕ್ರೀಡಾ ವರದಿಗಾರರ ಮುಂದೆ ಸವಾಲುಗಳು ಹೆಚ್ಚಾಗಿವೆ.  ಪೈಪೋಟಿಯ ಯುಗದಲ್ಲಿ ಹೊಸತನ್ನು ನೀಡುವ ಒತ್ತಡ ಹೆಚ್ಚಿದೆ. ಪತ್ರಕರ್ತರ ಕೆಲಸ ಸುಲಭವಲ್ಲ. ಅದೊಂದು ಮಹತ್ತರ ಜವಾಬ್ದಾರಿಯುತವಾದ ಕಾರ್ಯವೂ ಹೌದು’ ಎಂದರು.

ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ಸ್ವಾಬ್ ಅಧ್ಯಕ್ಷೆ ಮನುಜಾ ವೀರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.