ADVERTISEMENT

ಜೊಕೊವಿಚ್‌ ಜಯಭೇರಿ

ಅಮೆರಿಕ ಓಪನ್ ಟೆನಿಸ್‌: ಮರ್ರೆ, ಶರಪೋವಾ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದ ರಷ್ಯಾದ ಮರಿಯಾ ಶರಪೋವಾ ಚೆಂಡನ್ನು ಹಿಂದಿರುಗಿಸಲು ಮುಂದಾದ ಕ್ಷಣ	 –ಎಎಫ್‌ಪಿ ಚಿತ್ರ
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದ ರಷ್ಯಾದ ಮರಿಯಾ ಶರಪೋವಾ ಚೆಂಡನ್ನು ಹಿಂದಿರುಗಿಸಲು ಮುಂದಾದ ಕ್ಷಣ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌ (ರಾಯಿಟರ್ಸ್‌): ಮಾಜಿ ಚಾಂಪಿಯನ್ನರಾದ ನೊವಾಕ್‌ ಜೊಕೊವಿಚ್‌ ಮತ್ತು ಮರಿಯಾ ಶರಪೋವಾ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಫ್ಲಶಿಂಗ್‌ ಮಿಡೋಸ್‌ನ ಅರ್ಥರ್‌ ಆ್ಯಶ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಜೊಕೊವಿಚ್‌ 6–1, 6–2, 6–4 ರಲ್ಲಿ ಅರ್ಜೆಂಟೀನಾದ ಡಿಯಾಗೊ ಶ್ವಾರ್ಟ್ಸ್‌ಮನ್‌ ವಿರುದ್ಧ ಸುಲಭ ಗೆಲುವು ಪಡೆದರು.

ಅಗ್ರಶ್ರೇಯಾಂಕದ ಆಟಗಾರ ಜೊಕೊವಿಚ್‌ 24 ವಿನ್ನರ್‌ಗಳು ಹಾಗೂ ಏಳು ಏಸ್‌ಗಳನ್ನು ಸಿಡಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ‘ಅಮೆರಿಕ ಓಪನ್‌ ಟೂರ್ನಿಯ ಮೊದಲ ಪಂದ್ಯ ವನ್ನು ನಿರಾಯಾಸವಾಗಿ ಗೆಲ್ಲುವುದು ಸುಲಭವಲ್ಲ. ಈ ಪ್ರದರ್ಶನ ನನಗೆ ತೃಪ್ತಿ ನೀಡಿದೆ’ ಎಂದು ಜೊಕೊವಿಚ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಬ್ರಿಟನ್‌ನ ಆ್ಯಂಡಿ ಮರ್ರೆ ಪ್ರಯಾಸದ ಗೆಲುವಿನ ಮೂಲಕ ಎರಡನೇ ಸುತ್ತು ಪ್ರವೇಶಿಸಿದರು. ಅವರು 6–3, 7–6, 1–6, 7–5 ರಲ್ಲಿ ಹಾಲೆಂಡ್‌ನ ರಾಬಿನ್‌ ಹಾಸ್‌ ಅವರನ್ನು ಮಣಿಸಿದರು.

ವೇಗದ ಸರ್ವ್‌ಗಳಿಗೆ ಹೆಸರು ಪಡೆದಿರುವ ಆಟಗಾರ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೊಸ್‌ 7–5, 7–6, 2–6, 7–6 ರಲ್ಲಿ ರಷ್ಯಾದ ಮಿಖಾಯಿಲ್‌ ಯೂಜ್ನಿ ಅವರಿಗೆ ಆಘಾತ ನೀಡಿದರು. ಆಸೀಸ್‌ ಆಟಗಾರನ ರ್‍್ಯಾಕೆಟ್‌ನಿಂದ ಸಿಡಿದ 26 ಏಸ್‌ಗಳು ಯೂಜ್ನಿ ಅವರನ್ನು ತಬ್ಬಿಬ್ಬುಗೊಳಿಸಿತು.

19ರ ಹರೆಯದ ಕಿರ್ಗಿಯೊಸ್‌ ವಿಂಬಲ್ಡನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ವಿರುದ್ಧ ಗೆದ್ದು ಸುದ್ದಿ ಮಾಡಿದ್ದರು.

ಮೊದಲ ದಿನದ ಇತರ ಪ್ರಮುಖ ಪಂದ್ಯಗಳಲ್ಲಿ ಫ್ರಾನ್ಸ್‌ನ ಜೋ ವಿಲ್ಫ್ರೆಡ್‌ ಸೋಂಗಾ 6–3, 4–6, 7–6, 6–1 ರಲ್ಲಿ ಅರ್ಜೆಂಟೀನಾದ ಜುವಾನ್‌ ಮೊನಾಕೊ ಎದುರೂ, ಸ್ವಿಟ್ಜರ್‌ ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ 6–2, 7–6, 7–6 ರಲ್ಲಿ ಜೆಕ್‌ ಗಣರಾಜ್ಯದ ಜಿರಿ ವೆಸೆಲಿ ಮೇಲೂ, ಕೆನಡಾದ ಮಿಲೊಸ್ ರಾವೊನಿಕ್‌      6–3, 6–2, 7–6 ರಲ್ಲಿ ಜಪಾನ್‌ನ ಟಾರೊ ಡೇನಿಯಲ್‌ ವಿರುದ್ಧವೂ ಗೆಲುವು ಪಡೆದರು.

ಶರಪೋವಾಗೆ ಜಯ: ರಷ್ಯಾದ ಮರಿಯಾ ಶರಪೋವಾ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು.

ಫ್ರೆಂಚ್‌ ಓಪನ್‌ ಚಾಂಪಿಯನ್‌ ಶರಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ 6–4, 6–0 ರಲ್ಲಿ ತಮ್ಮದೇ ದೇಶದ ಮರಿಯಾ ಕಿರಿಲೆಂಕೊ ಅವರನ್ನು ಮಣಿಸಿದರು.

2006 ರಲ್ಲಿ ಇಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಶರಪೋವಾ ಮೊದಲ ಸೆಟ್‌ನಲ್ಲಿ 2–4 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ಬಳಿಕ ಅಮೋಘ ಪ್ರದರ್ಶನ ತೋರಿ ಸತತ 10 ಗೇಮ್‌ಗಳನ್ನು ಗೆದ್ದುಕೊಂಡು ಪಂದ್ಯ ತಮ್ಮದಾಗಿಸಿಕೊಂಡರು.

ವೀನಸ್‌ ಶುಭಾರಂಭ: ಪ್ರಸಕ್ತ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇಬ್ಬರು ಹಿರಿಯ ಆಟಗಾರ್ತಿಯರ ನಡುವಿನ ಹೋರಾಟದಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಗೆಲುವು ಪಡೆದರು.

34ರ ಹರೆಯದ ವೀನಸ್‌ 2–6, 6–3, 6–3 ರಲ್ಲಿ ಜಪಾನ್‌ನ ಕಿಮಿಕೊ ಡಾಟೆ ಕ್ರುಮ್‌ ಅವರನ್ನು ಸೋಲಿಸಿ ದರು. 43ರ ಹರೆಯದ ಕಿಮಿಕೊ ಮೊದಲ ಸೆಟ್‌ ಗೆದ್ದುಕೊಂಡು ಅಚ್ಚ ರಿಯ ಫಲಿತಾಂಶದ ಸೂಚನೆ ನೀಡ ಿದ್ದರು. ಆದರೆ ಅಮೆರಿಕದ ಆಟಗಾರ್ತಿ ಮುಂದಿನ ಎರಡು ಸೆಟ್‌ ಗೆದ್ದುಕೊಂಡು ಪಂದ್ಯ ತಮ್ಮದಾಗಿಸಿಕೊಂಡರು.

ಈ ಪಂದ್ಯದ ವೇಳೆ ಅಂಗಳದಲ್ಲಿ ಕಾಣಿಸಿಕೊಂಡ ಜೇನು ನೊಣಗಳು ಇಬ್ಬರು ಆಟಗಾರ್ತಿಯರಿಗೆ ತೊಂದರೆ ಉಂಟುಮಾಡಿತು.

ಜರ್ಮನಿಯ ಸಬಿನ್‌ ಲಿಸಿಕಿ 6–3, 7–5 ರಲ್ಲಿ ಕೆನಡಾದ ಫ್ರಾಂಕೋಸ್‌ ಅಬಂಡಾ ಅವರನ್ನು ಮಣಿಸಿದರೆ, ಇಟಲಿಯ ಸಾರಾ ಎರಾನಿ 6–1, 7–5 ರಲ್ಲಿ ಬೆಲ್ಜಿಯಂನ ಕ್ರಿಸ್ಟೆನ್‌ ಫ್ಲಿಪ್‌ಕೆನ್ಸ್‌ ವಿರುದ್ಧ ಜಯ ಪಡೆದರು. ಜೆಕ್‌ ಗಣರಾಜ್ಯದ ಲೂಸಿ ಸಫರೋವಾ 6–4, 7–5 ರಲ್ಲಿ ಹಂಗರಿಯ ಟಿಮಿಯಾ ಬಾಬೋಸ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.