ADVERTISEMENT

ಟೆನಿಸ್‌: ಫೈನಲ್‌ಗೆ ಶರಪೋವಾ

ಪ್ರಶಸ್ತಿ ಸುತ್ತಿಗೆ ಆ್ಯಂಡಿ ಮರ್ರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಮೆಲ್ಬರ್ನ್‌ (ರಾಯಿಟರ್ಸ್‌): ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ರಷ್ಯಾದ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಅಗ್ರ ಶ್ರೇಯಾಂಕದ ಆಟಗಾರ್ತಿ ಸೆರೆನಾ ಗುರುವಾರ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ 7–6, 6–2 ರಲ್ಲಿ ತಮ್ಮದೇ ದೇಶದ ಮ್ಯಾಡಿಸನ್‌ ಕೀಸ್‌ ವಿರುದ್ಧ ಗೆದ್ದರು. ರಾಡ್‌ ಲೇವರ್‌ ಅರೆನಾದಲ್ಲಿ ನಡೆದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಶರಪೋವಾ 6–2, 6–2 ರಲ್ಲಿ ತಮ್ಮದೇ ದೇಶದ ಏಕ್ತರೀನಾ ಮಕರೋವಾ ಅವರನ್ನು ಮಣಿಸಿದರು.

ಮ್ಯಾಡಿಸನ್‌ ವಿರುದ್ಧದ ಪಂದ್ಯದ ಮೊದಲ ಸೆಟ್‌ನಲ್ಲಿ ಗೆಲುವು ಪಡೆ ಯಲು ಸೆರೆನಾ ಸಾಕಷ್ಟು ಶ್ರಮ ಪಟ್ಟರು. ಪಂದ್ಯದ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದ ಮ್ಯಾಡಿಸನ್‌ ಉತ್ತಮ ಆರಂಭ ಪಡೆದರು. ತಿರುಗೇಟು ನೀಡಿದ ಸೆರೆನಾ ಸೆಟ್‌ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದು ಜಯ ಒಲಿಸಿಕೊಂಡರು.

33ರ ಹರೆಯದ ಸೆರೆನಾ ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಹೋರಾಟದ ಬಳಿಕ ಗೆಲುವು ತಮ್ಮದಾಗಿಸಿಕೊಂಡರು.

ಶರಪೋವಾ ಮತ್ತು ಮಕರೋವಾ ನಡುವಿನ ಪಂದ್ಯ ಏಕಪಕ್ಷೀಯವಾಗಿತ್ತು. 28ರ ಹರೆಯದ ಆಟಗಾರ್ತಿ ಕೇವಲ ನಾಲ್ಕು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.   ಮೆಲ್ಬರ್ನ್‌ ಪಾರ್ಕ್‌ನಲ್ಲಿ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಯನ್ನು ಶರಪೋವಾ ಮಾಡಿದ್ದಾರೆ.

ಫೈನಲ್‌ಗೆ ಮರ್ರೆ: ಬ್ರಿಟನ್‌ನ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಅವರು 6–7, 6–0, 6–3, 7–5 ರಲ್ಲಿ ಜೆಕ್‌ ಗಣರಾಜ್ಯದ ಥಾಮಸ್‌ ಬರ್ಡಿಕ್‌ ವಿರುದ್ಧ ಜಯ ಸಾಧಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದ ಬರ್ಡಿಕ್‌ ಸೆಮಿಫೈನಲ್‌ನ ಮೊದಲ ಸೆಟ್‌ಅನ್ನು 7–6 ರಲ್ಲಿ ತಮ್ಮದಾಗಿಸಿ ಕೊಂಡರು. ಆ ಬಳಿಕ ಮರ್ರೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮುಂದಿನ ಮೂರು ಸೆಟ್‌ಗಳಲ್ಲಿ ಕೇವಲ ಎಂಟು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು ಪ್ರಶಸ್ತಿ ಸುತ್ತು ತಲುಪಿದರು. ಬ್ರಿಟನ್‌ನ ಆಟಗಾರ ಇಲ್ಲಿ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸೆಮಿಫೈನಲ್‌ ಪಂದ್ಯ ಶುಕ್ರವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.