ADVERTISEMENT

ಟೆನಿಸ್: ಮೂರನೇ ಸುತ್ತಿಗೆ ನಡಾಲ್‌

ಏಜೆನ್ಸೀಸ್
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಸ್ಟಾನಿಸ್ಲಾಸ್ ವಾವ್ರಿಂಕಾ 
ಸ್ಟಾನಿಸ್ಲಾಸ್ ವಾವ್ರಿಂಕಾ    

ರೋಮ್‌: ರಫೆಲ್ ನಡಾಲ್ ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಸ್ಪೇನ್‌ನ ನಿಕೊಲಸ್ ಅಮ್‌ಮಾರ್ಗೊ ಎಡಭಾಗದ ಮೊಣಕಾಲು ನೋವಿನಿಂದಾಗಿ ಪಂದ್ಯದಿಂದ ಹಿಂದೆ ಸರಿದರು. ಆಡಿದ ಮೂರು ಸೆಟ್‌ಗಳಲ್ಲಿ ಅವರು ಸೋಲು ಕಂಡರು. ಆದ್ದರಿಂದ ನಡಾಲ್‌ 3–0ರಲ್ಲಿ ಸುಲಭವಾಗಿ ಮೂರನೇ ಸುತ್ತು ತಲುಪಿದರು.

ಈ ಪಂದ್ಯ ಕೇವಲ 24 ನಿಮಿಷ ನಡೆಯಿತು. ರೋಮ್‌ನಲ್ಲಿ ನಡಾಲ್‌ಗೆ ಇದು 50ನೇ ಗೆಲುವು ಎನಿಸಿದೆ. ಮಾಂಟೆ ಕಾರ್ಲೊ, ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್ ಓಪನ್ ಟೂರ್ನಿಗಳ ಬಳಿಕ ನಡಾಲ್ ಇಲ್ಲಿ ಕೂಡ ಗೆಲುವಿನ ಓಟ ಮುಂದುವರಿಸಿದ್ದಾರೆ.
‘ಸತತ ಗೆಲುವು ಹಾಗೂ ನನ್ನ ಫಾರ್ಮ್‌ ಖುಷಿಕೊಟ್ಟಿದೆ. ಈ ವರ್ಷ ನನ್ನ ಪಾಲಿಗೆ ಉತ್ತಮವಾಗಿದೆ. ಸಾಕಷ್ಟು ಪಂದ್ಯಗಳನ್ನು ಗೆದ್ದುಕೊಂಡಿದ್ದೇನೆ’ ಎಂದು ನಾಲ್ಕನೇ ಶ್ರೇಯಾಂಕದ ನಡಾಲ್ ಹೇಳಿದ್ದಾರೆ.

ADVERTISEMENT

ಮುಂದಿನ ಪಂದ್ಯದಲ್ಲಿ ಅವರು ಜಾಕ್ ಸಾಕ್ ವಿರುದ್ಧ ಆಡಲಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಮೂರನೇ ಶ್ರೇಯಾಂಕ ದ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕಾ 6–3, 1–6, 6–3ರಲ್ಲಿ ಬೆನೊಟ್ ಪೇರ್‌ ಅವರನ್ನು ಮಣಿಸಿದರು.

ಕೆನಡಾದ ಐದನೇ ಶ್ರೇಯಾಂಕದ ಮಿಲೊಸ್ ರಾನಿಕ್ 6–4, 6–3ರಲ್ಲಿ ನೇರ ಸೆಟ್‌ಗಳಿಂದ 39 ವರ್ಷದ ರೋಮ್‌ನ ಆಟಗಾರ ಟಾಮಿ ಹಾಸ್ ಅವರನ್ನು ಮಣಿಸಿದರು.

ಜಪಾನ್‌ನ ಏಳನೇ ಶ್ರೇಯಾಂಕದ ಆಟಗಾರ ಕೀ ನಿಶಿಕೊರಿ 7–5, 6–2ರಲ್ಲಿ ಡೇವಿಡ್ ಫೆರರ್‌ಗೆ ಆಘಾತ ನೀಡಿದರು.
ಮ್ಯಾಡ್ರಿಡ್ ಓಪನ್‌ನಲ್ಲಿ ಫೈನಲ್ ತಲುಪಿದ್ದ ಡೊಮಿನಿಕ್ ಥೀಮ್ 7–6, 6–4ರಲ್ಲಿ ಪ್ಯಾಬ್ಲೊ ಕ್ಯುವಾಸ್ ಎದುರು ಗೆದ್ದರು. ಸಾಕ್‌ 6–4, 3–6, 7–6ರಲ್ಲಿ ಜಿರಿ ವೆಸ್ಲಿ ಮೇಲೆ ಜಯಸಾಧಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಏಂಜಲಿಕ್ ಕೆರ್ಬರ್‌ 6–4, 6–0ರಲ್ಲಿ ಈಸ್ಟೊನಿಯಾದ ಆಂಟೆ ಕೊಂಟವಿಟ್ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.