ADVERTISEMENT

ಟೆಸ್ಟ್‌ ಸರಣಿಗೆ ಅಸೆಲಾ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಗಾಲ್‌: ಶ್ರೀಲಂಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಸೆಲಾ ಗುಣರತ್ನೆ ಅವರು ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ.

ಪ್ರಥಮ ಟೆಸ್ಟ್‌ ಪಂದ್ಯದ ಬುಧವಾರದ ಆಟದ ವೇಳೆ ಫೀಲ್ಡಿಂಗ್‌ ಮಾಡುವಾಗ ಗುಣರತ್ನೆ ಅವರು ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ಲಾಹಿರು ಕುಮಾರ ಬೌಲ್‌ ಮಾಡಿದ  14ನೇ ಓವರ್‌ನ ಕೊನೆಯ ಎಸೆತವನ್ನು ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಕವರ್ಸ್‌ನತ್ತ ಬಾರಿಸಲು ಮುಂದಾದರು. ಅವರ ಬ್ಯಾಟಿನ ಮೇಲಂಚನ್ನು ಸವರಿಕೊಂಡು ಬಂದ ಚೆಂಡನ್ನು ಎರಡನೇ ಸ್ಲಿಪ್‌ನಲ್ಲಿದ್ದ ಗುಣರತ್ನೆ ಹಿಡಿಯುವಾಗ  ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂಡಲೇ ಅವರು ನೋವು ತಾಳಲಾರದೆ ಅಂಗಳದಲ್ಲಿ ಕುಸಿದುಬಿದ್ದರು. ಸ್ಥಳಕ್ಕೆ ಧಾವಿಸಿದ ತಂಡದ ಫಿಸಿಯೊ, ಅಸೆಲಾಗೆ ಪ್ರಥಮ ಚಿಕಿತ್ಸೆ ನೀಡಿ ಅಂಗಳದಿಂದ ಹೊರಗೆ ಕರೆದೊಯ್ದರು.

ADVERTISEMENT

ಗುಣರತ್ನೆ ಅವರ ಹೆಬ್ಬೆರಳಿಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಾಗಿದ್ದು, ಅವರು ಶಸ್ತ್ರ ಚಿಕಿತ್ಸೆಗಾಗಿ ಕೊಲಂಬೊಗೆ ತೆರಳಲಿದ್ದಾರೆ.

ಗುಣರತ್ನೆ ಅವರು ಪಂದ್ಯದಿಂದ ಹೊರ ಬಿದ್ದಿರುವುದರಿಂದ ಶ್ರೀಲಂಕಾ ತಂಡ ಎರಡೂ ಇನಿಂಗ್ಸ್‌ಗಳಲ್ಲಿ 10 ಮಂದಿಯೊಂದಿಗೆ ಬ್ಯಾಟಿಂಗ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.