ADVERTISEMENT

ಡ್ರೆಸ್ಸಿಂಗ್ ಕೋಣೆಯ ಗೌಪ್ಯತೆ ಮುಖ್ಯ: ಕೊಹ್ಲಿ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ವಿರಾಟ್ ಕೊಹ್ಲಿ (ಎಡ) ಹಾಗೂ ಅನಿಲ್ ಕುಂಬ್ಳೆ
ವಿರಾಟ್ ಕೊಹ್ಲಿ (ಎಡ) ಹಾಗೂ ಅನಿಲ್ ಕುಂಬ್ಳೆ   

ಪೋರ್ಟ್ ಆಫ್ ಸ್ಪೇನ್:  ‘ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ನಡೆಯುವ ವಿದ್ಯಮಾನಗಳ ಗೌಪ್ಯತೆ ಕಾಪಾಡಿಕೊಳ್ಳುವುದು ಅತ್ಯಂತ ಪವಿತ್ರ ಕರ್ತವ್ಯದಂತೆ ನಿರ್ವಹಿಸಿಕೊಂಡು ಬಂದಿದ್ದೇವೆ.  ಮುಂದೆಯೂ ಅದೇ ರೀತಿ ನಡೆದುಕೊಳ್ಳುತ್ತೇವೆ’–

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಸ್ಪಷ್ಟ ನುಡಿಗಳಿವು. ಗುರುವಾರ ಇಲ್ಲಿ ಅಭ್ಯಾಸ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರು ದಿನಗಳ ಹಿಂದೆ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅನಿಲ್ ಕುಂಬ್ಳೆ ಅವರು ಟ್ವಿಟರ್‌ನಲ್ಲಿ ರಾಜೀನಾಮೆ ಪತ್ರ ಪ್ರಕಟಿಸಿದ್ದರು. ಆ ಘಟನೆಯ ನಂತರ    ಮೊದಲ ಬಾರಿ ವಿರಾಟ್  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು.

ADVERTISEMENT

ಪತ್ರಕರ್ತರ  ಪ್ರಶ್ನೆಗಳಿಗೆ ಪ್ರಜ್ಞಾಪೂರ್ವಕವಾಗಿ ಉತ್ತರಿಸಿದರು.  ಯಾವುದೇ ಹಂತದಲ್ಲಿಯೂ ಕುಂಬ್ಳೆ ಅವರ ವ್ಯಕ್ತಿತ್ವ ಮತ್ತು  ನಡೆಯನ್ನು ಟೀಕಿಸಲಿಲ್ಲ. ಅಲ್ಲದೇ ತಮ್ಮಿಬ್ಬರ ನಡುವೆ ತಲೆದೋರಿದ್ದ ‘ಭಿನ್ನಾಭಿಪ್ರಾಯ’ಗಳನ್ನೂ ಬಹಿರಂಗಪಡಿಸಲಿಲ್ಲ.

‘ಒಬ್ಬ ಕ್ರಿಕೆಟಿಗನಾಗಿ ಕುಂಬ್ಳೆ ಅವರನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ.  ಕುಂಬ್ಳೆ ಅವರು ತಮ್ಮ ಆಟದ ಮೂಲಕ ದೇಶಕ್ಕೆ ನೀಡಿರುವ ಕೊಡುಗೆಯು ಅಮೂಲ್ಯವಾದದ್ದು. ಅದಕ್ಕಾಗಿ ಅವರ ಬಗ್ಗೆ ನಮಗೆ ಅಭಿಮಾನವಿದೆ. ಅವರ ನಿರ್ಧಾರವನ್ನೂ ಗೌರವಿಸುತ್ತೇನೆ’ ಎಂದು ಹೇಳಿದರು.

ಆದರೆ, ಕುಂಬ್ಳೆ ಅವರು  ಪತ್ರ ಬಹಿರಂಗಪಡಿಸಿರುವುದು ತಪ್ಪು ಎಂಬುದನ್ನು ಪರೋಕ್ಷವಾಗಿ ಬಿಂಬಿಸಿದರು.

‘ಡ್ರೆಸಿಂಗ್‌ ರೂಮ್‌ನಲ್ಲಿ ನಡೆಯುವ ವಿಷಯಗಳು ಹೊರಜಗತ್ತಿಗೆ ತಿಳಿಯದಂತೆ   ಕಾಪಾಡಿಕೊಂಡು ಬರುವ ಸಂಸ್ಕೃತಿಯು   ಕಳೆದ 3–4 ವರ್ಷಗಳಿಂದ ತಂಡದಲ್ಲಿದೆ.  ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಒಟ್ಟು 11 ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ್ದೆ.   ಆದರೆ ಎಲ್ಲಿಯೂ ತಂಡದ ಆಂತರಿಕ ವಿಷಯಗಳನ್ನು ಹೇಳಿರಲಿಲ್ಲ’ ಎಂದರು.

‘ಕುಂಬ್ಳೆ ಅವರ ಕಾರ್ಯಶೈಲಿ  ಮತ್ತು ತರಬೇತಿ ನೀಡುವ ವಿಧಾನದ ಬಗ್ಗೆ ನಿಮಗೆ ಆಕ್ಷೇಪವಿತ್ತೇ’ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಶಾಂತರೀತಿಯಿಂದಲೇ ಪ್ರತಿಕ್ರಿಯಿಸಿದರು.

‘ನಾನು ಮೊದಲೇ ಹೇಳಿದಂತೆ ಡ್ರೆಸ್ಸಿಂಗ್ ಕೋಣೆಯ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅಲ್ಲಿ ನಡೆಯುವ ವಿಷಯಗಳು ಅತ್ಯಂತ ಖಾಸಗಿ ಮತ್ತು ಪಾವಿತ್ರ್ಯವುಳ್ಳದ್ದು’ ಎಂದರು.

ಸ್ವಾಗತದ ಟ್ವೀಟ್ ಅಳಿಸಿಹಾಕಿದ ಕೊಹ್ಲಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ  ವಿರಾಟ್ ಕೊಹ್ಲಿ ಅವರು ಒಂದು ವರ್ಷದ ಹಿಂದೆ ಅನಿಲ್ ಕುಂಬ್ಳೆಯವರನ್ನು ತಂಡಕ್ಕೆ ಸ್ವಾಗತಿಸಲು ಟ್ವಿಟರ್‌ನಲ್ಲಿ ಹಾಕಿದ್ದ ಸಂದೇಶವನ್ನು ಬುಧವಾರ ಅಳಿಸಿ ಹಾಕಿದ್ದಾರೆ.

ಅದರೊಂದಿಗೆ ಕೊಹ್ಲಿ ಮತ್ತು ಕುಂಬ್ಳೆ ನಡುವಣ ವಿವಾದ ಮತ್ತಷ್ಟು ರಂಗೇರಿದೆ.

‘ನಿಮಗೆ ಹಾರ್ದಿಕ ಸ್ವಾಗತ ಅನಿಲ್ ಕುಂಬ್ಳೆ ಸರ್. ಮುಂದಿನ ಒಂದು ವರ್ಷದ ಅವಧಿಯಲ್ಲಿ  ಭಾರತ ಕ್ರಿಕೆಟ್ ತಂಡದಲ್ಲಿ ಅದ್ಭುತಗಳು ದಾಖಲಾಗಲಿವೆ?’ ಎಂದು  ಕೊಹ್ಲಿ ಟ್ವೀಟ್‌ ಮಾಡಿದ್ದರು.  ವೆಸ್ಟ್ ಇಂಡೀಸ್‌ನಲ್ಲಿರುವ ಕೊಹ್ಲಿ ಅವರು ಬುಧವಾರ ಈ ಸಂದೇಶವನ್ನು ಅಳಿಸಿ ಹಾಕಿದ್ದಾರೆ.  ಕುಂಬ್ಳೆ ಅವರು ಒಂದು ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಅವರ ಒಪ್ಪಂದವು ಜೂನ್ 18ರಂದು ಮುಗಿದಿತ್ತು.  ಅವರನ್ನು ವಿಂಡೀಸ್ ಸರಣಿಯ ಮುಕ್ತಾಯದವರೆಗೂ ಮುಂದುವರಿಸಲಾಗಿತ್ತು. ಆದರೆ ಕುಂಬ್ಳೆ ಅವರು 20ರಂದು ರಾಜೀನಾಮೆ ನೀಡಿದ್ದರು. ವಿರಾಟ್ ಕೊಹ್ಲಿ ಅವರ ಭಿನ್ನಾಭಿಪ್ರಾಯದಿಂದಾಗಿ ತಾವು ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದಾಗಿ  ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು.

ಅದರಿಂದಾಗಿ ಕೊಹ್ಲಿ ಅವರನ್ನು ಹಿರಿಯ  ಕ್ರಿಕೆಟಿಗರು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.