ADVERTISEMENT

ತಂಡಕ್ಕೆ ಮರಳಿದ ಆ್ಯಂಡರ್ಸನ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ಲಂಡನ್‌ (ಎಎಫ್‌ಪಿ): ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು ವೇಗಿ ಜೇಮ್ಸ್‌ ಆ್ಯಂಡರ್ಸನ್‌, ಆಲ್‌ರೌಂಡರ್‌  ಬೆನ್‌ ಸ್ಟೋಕ್ಸ್‌ ಮತ್ತು ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಅವರಿಗೆ ಸ್ಥಾನ ಲಭಿಸಿದೆ. ಇವರು ಲಾರ್ಡ್ಸ್‌ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು.

ದ್ವಿತೀಯ ಟೆಸ್ಟ್‌ ಶುಕ್ರವಾರ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆಯೋಜನೆಯಾಗಿದೆ. ಆ್ಯಂಡರ್ಸನ್‌ ಮತ್ತು ಬೆನ್‌ ಸ್ಟೋಕ್ಸ್ ಅವರು ಕ್ರಮವಾಗಿ ಭುಜನೋವು ಹಾಗೂ ಸ್ನಾಯುಸೆಳೆತದಿಂದ ಬಳಲುತ್ತಿದ್ದರು.

‘ದೇಶಿ ಚಾಂಪಿಯನ್‌ಷಿಪ್‌ನಲ್ಲಿ ಆ್ಯಂಡರ್ಸನ್‌ ಮತ್ತು ಸ್ಟೋಕ್ಸ್ ಇಬ್ಬರೂ ಆಡಿ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬಲಗೈನ ಭುಜದ ನೋವಿನಿಂದ ಆ್ಯಂಡರ್ಸನ್‌ ಚೇತರಿಸಿಕೊಂಡಿದ್ದು ಪಂದ್ಯದಲ್ಲಿ ಒಟ್ಟು 22 ಓವರ್‌ ಬೌಲಿಂಗ್ ಮಾಡಿ 58 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದಾರೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಇದೇ ವರ್ಷದ ಮೇನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಸ್ಟೋಕ್ಸ್‌ ಯಾವ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಆಡಿಲ್ಲ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಈಗ ಚೇತರಿಸಿಕೊಂಡಿದ್ದಾರೆ’ ಎಂದೂ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.