ADVERTISEMENT

ತವರಿನಲ್ಲಿ ಆರ್‌ಸಿಬಿಗೆ ಮತ್ತೆ ಮುಖಭಂಗ

ನೈಟ್‌ ರೈಡರ್ಸ್‌ ತಂಡಕ್ಕೆ 5 ವಿಕೆಟ್‌ ಗೆಲುವು, ಯೂಸುಫ್‌ ಅಬ್ಬರಕ್ಕೆ ಬೌಲರ್‌ಗಳು ಕಂಗಾಲು

ಪ್ರಮೋದ ಜಿ.ಕೆ
Published 2 ಮೇ 2016, 19:50 IST
Last Updated 2 ಮೇ 2016, 19:50 IST
ತವರಿನಲ್ಲಿ ಆರ್‌ಸಿಬಿಗೆ ಮತ್ತೆ ಮುಖಭಂಗ
ತವರಿನಲ್ಲಿ ಆರ್‌ಸಿಬಿಗೆ ಮತ್ತೆ ಮುಖಭಂಗ   

ಬೆಂಗಳೂರು: ದುರದೃಷ್ಟ, ಕಳಪೆ ಫೀಲ್ಡಿಂಗ್ ಮತ್ತು ದುರ್ಬಲ ಬೌಲಿಂಗ್‌.

ಕೋಲ್ಕತ್ತ ನೈಟ್‌ ರೈಡರ್ಸ್ ಎದುರಿನ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಅನುಭವಿಸಲು ಈ ಮೂರು ಅಂಶಗಳಿಗಿಂತ ಬೇರೆ ಯಾವ ಕಾರಣಗಳೂ ಇರಲಿಲ್ಲ.

ಕೈಗೆ ಬಂದ ಗೆಲುವಿನ ಅವಕಾಶ ವನ್ನು ಹಾಳು ಮಾಡಿಕೊಳ್ಳುವುದು ಎಂದರೆ ಇದೇ ಇರಬೇಕು. ಆರಂಭದಲ್ಲಿ ಬಿಗುವಿನ ದಾಳಿ ನಡೆಸಿ ರೈಡರ್ಸ್ ತಂಡ ವನ್ನು ನಿಯಂತ್ರಿಸಿದ್ದ ಆರ್‌ಸಿಬಿ ಬೌಲರ್‌ ಗಳು ನಂತರ ಮನಬಂದಂತೆ ರನ್ ಕೊಟ್ಟರು.

ಯೂಸುಫ್‌ ಪಠಾಣ್‌ ಮತ್ತು ಆ್ಯಂಡ್ರೆ ರಸೆಲ್ ಅವರ ಅಪೂರ್ವ  ಬ್ಯಾಟಿಂಗ್‌ನಿಂದಾಗಿ ನೈಟ್‌ ರೈಡರ್ಸ್ ತಂಡ ಐದು ವಿಕೆಟ್‌ಗಳ ಗೆಲುವು ಪಡೆಯಿತು. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.

ಟಿಕೆಟ್‌ ಬೆಲೆ ಕಡಿಮೆ ಮಾಡಿರುವ ಕಾರಣ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಿತ್ತು. ಒಟ್ಟು 40 ಓವರ್‌ಗಳ ಪಂದ್ಯದಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸಿತು. ಟಾಸ್‌ ಗೆದ್ದ ನೈಟ್‌ ರೈಡರ್ಸ್ ತಂಡದ ನಾಯಕ ಗಂಭೀರ್‌ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಬೆಂಗಳೂರಿನ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದು ಕೊಂಡು 185 ರನ್ ಗಳಿಸಿತ್ತು.

ಸವಾಲಿನ ಗುರಿಯನ್ನು ರೈಡರ್ಸ್‌ ಐದು ವಿಕೆಟ್‌ ಕಳೆದುಕೊಂಡು 19.1 ಓವರ್‌ಗಳಲ್ಲಿ ತಲುಪಿತು. ಗೆಲುವಿನ ಅವ ಕಾಶವನ್ನು ಹಾಳು ಮಾಡಿಕೊಂಡ ಆರ್‌ಸಿಬಿ ತಾನೇ ಮಾಡಿದ ತಪ್ಪಿಗೆ ಕೈಕೈ ಹಿಸುಕಿಕೊಂಡಿತು.

ಸವಾಲಿನ ಗುರಿ: ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ  ಕ್ರಿಸ್‌ ಗೇಲ್‌ ಅಬ್ಬರಿಸಲಿಲ್ಲ. ಆದರೆ ಸ್ಥಿರ ಪ್ರದರ್ಶನ ತೋರುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ನಾಯಕ ವಿರಾಟ್‌ ಕೊಹ್ಲಿ ಸೊಗಸಾದ ಇನಿಂಗ್ಸ್ ಕಟ್ಟಿದರು.

ಎರಡನೇ ಓವರ್‌ನ ಮೂರನೇ ಎಸೆ ತದಲ್ಲಿಯೇ ಗೇಲ್ ಔಟಾದರೂ ಅಭಿ ಮಾನಿಗಳಿಗೆ ನಿರಾಸೆಯಾಗದ ರೀತಿಯಲ್ಲಿ ಸೊಗಸಾಗಿ ಬ್ಯಾಟ್‌ ಮಾಡಿದ್ದು ರಾಹುಲ್‌. ಟೂರ್ನಿಯ ಆರಂಭದ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ರಾಹುಲ್‌ ಹಿಂದಿನ ಎರಡು ಪಂದ್ಯಗಳಲ್ಲಿ ತಲಾ 51 ರನ್ ಗಳಿಸಿದ್ದರು. ಅವರ ಕೌಶಲಯುತ ಬ್ಯಾಟಿಂಗ್‌ ಗಮನ ಸೆಳೆಯಿತು. 32 ಎಸೆತ ಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ ಮನ್ ರಾಹುಲ್‌ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 52 ರನ್ ಗಳಿಸಿದರು.

ರಾಹುಲ್‌ ಆಟಕ್ಕೆ ಉತ್ತಮ ಬೆಂಬಲ ನೀಡಿದ ಕೊಹ್ಲಿ ಕೂಡ ಅರ್ಧಶತಕ ಬಾರಿಸಿದರು. 44 ಎಸೆತಗಳಲ್ಲಿ 52 ರನ್ ಗಳಿಸಿ ಕೊಹ್ಲಿ ಆಸರೆಯಾದರು. ಆದರೆ ಕೊಹ್ಲಿ ಅವರಿಂದ ಅಬ್ಬರದ ಆಟ ಕಂಡು ಬರಲಿಲ್ಲ. ಒಂದು, ಎರಡು ರನ್ ಗಳಿಸ ಲಷ್ಟೇ ಹೆಚ್ಚು ಗಮನ ಕೊಟ್ಟ ಅವರು ಬಾರಿಸಿದ್ದು ನಾಲ್ಕು ಬೌಂಡರಿ ಮಾತ್ರ.
ಈ ಜೋಡಿ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 9.4 ಓವರ್‌ಗಳಲ್ಲಿ 84 ರನ್ ಕಲೆ ಹಾಕಿತು. ರೈಡರ್ಸ್ ತಂಡ ಆರಂಭದಲ್ಲಿ ಬಿಗುವಿನ ದಾಳಿ ನಡೆಸಿ

ಆರ್‌ಸಿಬಿಗೆ ಹೆಚ್ಚು ರನ್ ಗಳಿಸಲು ಅವ ಕಾಶ ಕೊಡಲಿಲ್ಲ. ಮೊದಲ ಹತ್ತು ಓವರ್‌ ಗಳು ಪೂರ್ಣಗೊಂಡಾಗ ಆರ್‌ಸಿಬಿ 79 ರನ್ ಗಳಿಸಿತ್ತು. ಆದರೆ ಕೊನೆಯ ಐದು ಓವರ್‌ಗಳಲ್ಲಿ ಬೆಂಗಳೂರಿನ ತಂಡ ರನ್ ಹೊಳೆಯನ್ನೇ ಹರಿಸಿತು. 30 ಎಸೆತಗಳಲ್ಲಿ ಕಲೆ ಹಾಕಿದ 73 ರನ್ ಬಂದವು.
ಇದಕ್ಕೆ ಕಾರಣವಾಗಿದ್ದು ಶೇನ್‌ ವ್ಯಾಟ್ಸನ್‌ ಅಬ್ಬರ.

21 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್‌ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು.  19ನೇ ಓವರ್‌ನಲ್ಲಿ ರಸೆಲ್ ಬೌಲಿಂಗ್‌ನಲ್ಲಂತೂ ವ್ಯಾಟ್ಸನ್‌ ಹ್ಯಾಟ್ರಿಕ್‌ ಬೌಂಡರಿ ಬಾರಿಸಿದರು. ಇವರ ಆಟಕ್ಕೆ ಸಚಿನ್ ಬೇಬಿ (16) ನೆರವಾ ದರು. ಈ ಜೋಡಿ ಜೊತೆಯಾಟದಲ್ಲಿ 14 ಎಸೆತಗಳಲ್ಲಿ ಬಂದ 38 ರನ್‌ಗಳು ಆರ್‌ಸಿಬಿ ತಂಡದ ರನ್ ವೇಗಕ್ಕೆ ಬಲ ನೀಡಿದವು.

ಕೊನೆಯಲ್ಲಿ ಬಂದ ಕರ್ನಾಟಕದ ಸ್ಟುವರ್ಟ್‌ ಬಿನ್ನಿ ಅಬ್ಬರಿಸಿದರು. ಬಿನ್ನಿ ಕ್ರೀಸ್‌ನಲ್ಲಿ ಇದ್ದದ್ದು ಕಡಿಮೆ ಸಮಯ. ಆದರೆ ಇದ್ದಷ್ಟು ಹೊತ್ತು ಭಾರಿ ಖುಷಿ ನೀಡಿದರು. ತಾವು ಎದುರಿಸಿದ ನಾಲ್ಕು ಎಸೆತಗಳಲ್ಲಿ 16 ರನ್ ಬಾರಿಸಿದರು. ಎರಡು ಬೌಂಡರಿ ಮತ್ತು ಲಾಂಗ್ ಆನ್‌ ಬಳಿ ಒಂದು ಸೊಗಸಾದ ಸಿಕ್ಸರ್ ಸಿಡಿಸಿದರು.

ಭರ್ಜರಿ ತಿರುಗೇಟು: ಉತ್ತಮ ಫಾರ್ಮ್‌ ನಲ್ಲಿದ್ದ ರಾಬಿನ್ ಉತ್ತಪ್ಪ, ಕ್ರಿಸ್‌ ಲ್ಯಾನ್‌ ಮತ್ತು ಗಾಯದಿಂದ ಚೇತರಿಸಿಕೊಂಡಿ ರುವ ಮನೀಷ್‌ ಪಾಂಡೆ ಬೇಗನೆ ವಿಕೆಟ್‌ ಒಪ್ಪಿಸಿದರು. ನಾಯಕ ಗಂಭೀರ್ ಕೂಡ 37 ರನ್ ಗಳಿಸಿದ್ದಾಗ ಪೆವಿಲಿಯನ್‌ ಸೇರಿದರು.

ರೈಡರ್ಸ್‌ 10.1 ಓವರ್‌ಗಳು ಪೂರ್ಣಗೊಂಡಾಗ ನಾಲ್ಕು ವಿಕೆಟ್‌ ಕಳೆದುಕೊಂಡು 69 ರನ್‌ಗಳನ್ನಷ್ಟೇ ಗಳಿಸಿತ್ತು. ರನ್‌ ರೇಟ್‌ ಇಲ್ಲದ ಕಾರಣ ರೈಡರ್ಸ್‌ ಸೋಲು ಖಚಿತವೆಂದೇ ಬಹು ತೇಕರು ಭಾವಿಸಿದ್ದರು. ಆದರೆ, ಯೂಸುಫ್ ಪಠಾಣ್ ಮತ್ತು ರಸೆಲ್‌ ಪಂದ್ಯದ ಗತಿಯನ್ನೇ ಬದಲಿಸಿದರು. ಇದರಲ್ಲಿ ಆರ್‌ಸಿಬಿ ತಂಡದ ಕಳಪೆ ಫೀಲ್ಡಿಂಗ್‌ನ ಕೊಡುಗೆಯೂ ಇದೆ.

ರಸೆಲ್‌ 13 ರನ್ ಗಳಿಸಿದ್ದ ವೇಳೆ ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಸ್ಟಂಪ್‌ ಔಟ್‌ ಆಗುವ ಅವಕಾಶವಿತ್ತು. ಆದರೆ ಆರ್‌ಸಿಬಿ ವಿಕೆಟ್‌ ಕೀಪರ್ ರಾಹುಲ್‌ ಚುರುಕಿನ ಫೀಲ್ಡಿಂಗ್ ಮಾಡ ಲಿಲ್ಲ. ಈ ಅವಕಾಶವನ್ನು ಬಳಸಿಕೊಂಡ ರಸೆಲ್‌ 24 ಎಸೆತಗಳಲ್ಲಿ 39 ರನ್ ಬಾರಿಸಿದರು. ಇವರಿಗೆ ಯೂಸುಫ್‌ ಜೊತೆಯಾದರು.

ಇಬರಿಬ್ಬರು ಜೊತೆಯಾದಾಗ ರೈಡರ್ಸ್ ತಂಡದ ಜಯಕ್ಕೆ 59 ಎಸೆತ ಗಳಲ್ಲಿ 117 ರನ್ ಅಗತ್ಯವಿತ್ತು. ಆರಂಭ ದಿಂದಲೇ ಅಬ್ಬರಿಸಿದ ಈ ಜೋಡಿ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು. ಯೂಸುಫ್‌ (ಔಟಾಗದೆ 60,  29 ಎಸೆತ, 6 ಬೌಂಡರಿ, 3 ಸಿಕ್ಸರ್‌) ಗೆಲುವಿಗೆ ಪ್ರಮುಖ ಕಾರಣರಾದರು.

ಇವರ ಅಬ್ಬರವನ್ನು ಕಟ್ಟಿ ಹಾಕಲು ಆರ್‌ಸಿಬಿಗೆ ಸಾಧ್ಯವೇ ಆಗಲಿಲ್ಲ. ಇವರು 17ನೇ ಓವರ್‌ನಲ್ಲಿ 27 ರನ್ ಕಲೆ ಹಾಕಿ ಪಂದ್ಯವನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ದರು. ನಂತರದ ಓವರ್‌ನಲ್ಲಿ ನಾಲ್ಕು ರನ್‌ಗಳಷ್ಟೇ ಬಂದವು. ಕೊನೆಯ ಎರಡು ಓವರ್‌ಗಳಲ್ಲಿ 17 ರನ್‌ ಬೇಕಿತ್ತು.

ಮಹತ್ವದ ಹಂತದಲ್ಲಿ ಕಳಪೆ ಬೌಲಿಂಗ್ ಮಾಡಿದ ತಬ್ರೈಜ್‌ ಶಂಸಿ ಬೌಲ್‌ ಮಾಡಿ 16 ರನ್ ಕೊಟ್ಟರು. ಕೊನೆಯ ಓವರ್‌ನಲ್ಲಿ ಒಂದು ರನ್ ಮಾತ್ರ ಬೇಕಿದ್ದ ಕಾರಣ ನೈಟ್‌ ರೈಡರ್ಸ್‌ಗೆ ಜಯ ನೀರು ಕುಡಿದಷ್ಟೇ ಸುಲಭವಾ ಯಿತು. ಇದರಿಂದ ಆರ್‌ಸಿಬಿ ತವರಿನಲ್ಲಿ ಮತ್ತೊಂದು ಮುಖಭಂಗ ಅನುಭವಿಸ ಬೇಕಾಯಿತು. ಈ ತಂಡ ಹಿಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಮತ್ತು ಲಯನ್ಸ್ ವಿರುದ್ಧ ಸೋತಿತ್ತು.

ಮುಖ್ಯಾಂಶಗಳು
* ಕೊನೆಯ ಐದು ಓವರ್‌ಗಳಲ್ಲಿ ಅಬ್ಬರಿಸಿದ ನೈಟ್ ರೈಡರ್ಸ್‌

* ಟಿಕೆಟ್‌ ಬೆಲೆ ಕಡಿಮೆ ಮಾಡಿದ್ದಕ್ಕೆ ಹೆಚ್ಚು ಜನ

ಸ್ಕೋರ್‌ಕಾರ್ಡ್‌
ಆರ್‌ಸಿಬಿ 7 ಕ್ಕೆ 185  (20 ಓವರ್‌ಗಳಲ್ಲಿ)

ಕೆ.ಎಲ್‌. ರಾಹುಲ್‌ ಸಿ. ಯೂಸುಫ್‌ ಪಠಾಣ್‌ ಬಿ. ಪಿಯೂಷ್‌ ಚಾವ್ಲಾ  52
ಕ್ರಿಸ್‌ ಗೇಲ್‌ ಸಿ. ರಾಬಿನ್ ಉತ್ತಪ್ಪ ಬಿ. ಮಾರ್ನೆ ಮಾರ್ಕೆಲ್‌  07
ವಿರಾಟ್‌ ಕೊಹ್ಲಿ ಸಿ. ಆ್ಯಂಡ್ರೆ ರಸೆಲ್‌ ಬಿ. ಮಾರ್ನೆ ಮಾರ್ಕಲ್‌  52
ಎ.ಬಿ ಡಿವಿಲಿಯರ್ಸ್‌ ಎಲ್‌ಬಿಡಬ್ಲ್ಯು ಬಿ. ಪಿಯೂಷ್‌ ಚಾವ್ಲಾ  04
ಶೇನ್ ವ್ಯಾಟ್ಸನ್‌ ರನ್ ಔಟ್‌ (ಮನೀಷ್‌/ರಾಬಿನ್‌)  34
ಸಚಿನ್‌ ಬೇಬಿ ಸಿ ಮತ್ತು ಬಿ ಆ್ಯಂಡ್ರೆ ರಸೆಲ್‌  16
ಸ್ಟುವರ್ಟ್‌ ಬಿನ್ನಿ ಸಿ. ಮನೀಷ್‌ ಪಾಂಡೆ ಬಿ. ಉಮೇಶ್‌ ಯಾದವ್‌  16
ವರುಣ್ ಆ್ಯರನ್‌ ಔಟಾಗದೆ  00
ಇತರೆ:  (ವೈಡ್‌–2,  ನೋಬಾಲ್‌–2)   04

ADVERTISEMENT

ವಿಕೆಟ್‌ ಪತನ: 1–8 (ಗೇಲ್‌; 1.3), 2–92 (ರಾಹುಲ್‌; 11.1), 3–109 (ಡಿವಿಲಿಯರ್ಸ್‌; 13.4), 4–129 (ಕೊಹ್ಲಿ; 16.4), 5–167 (ಸಚಿನ್‌; 18.6), 6–184 (ಬಿನ್ನಿ; 19.5), 7–185 (ವ್ಯಾಟ್ಸನ್‌; 19.6)
ಬೌಲಿಂಗ್‌:  ಆ್ಯಂಡ್ರೆ ರಸೆಲ್‌ 4–0–24–1, ಮಾರ್ನೆ ಮಾರ್ಕೆಲ್‌ 4–0–28–2, ಸುನಿಲ್‌ ನಾರಾಯಣ್‌ 4–0–45–0, ಉಮೇಶ್‌ ಯಾದವ್‌ 4–0–56–1, ಪಿಯೂಷ್‌ ಚಾವ್ಲಾ 4–0–32–2.

ಕೋಲ್ಕತ್ತ ನೈಟ್‌ ರೈಡರ್ಸ್‌   5 ಕ್ಕೆ 189  (19.1 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ಸಿ. ವಿರಾಟ್‌ ಕೊಹ್ಲಿ ಬಿ. ಸ್ಟುವರ್ಟ್‌ ಬಿನ್ನಿ  01
ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಬಿ. ಎಸ್‌. ಅರವಿಂದ್  37
ಕ್ರಿಸ್‌ ಲ್ಯಾನ್‌ ಬಿ. ಯಜುವೇಂದ್ರ ಚಾಹಲ್‌  15
ಮನೀಷ್‌ ಪಾಂಡೆ ಸಿ. ಸಚಿನ್ ಬೇಬಿ ಬಿ. ಶೇನ್‌ ವ್ಯಾಟ್ಸನ್‌  08
ಯೂಸುಫ್‌ ಪಠಾಣ್‌ ಔಟಾಗದೆ  60
ಆ್ಯಂಡ್ರೆ ರಸೆಲ್‌ ಸಿ. ಸ್ಟುವರ್ಟ್ ಬಿನ್ನಿ ಬಿ. ಯಜುವೇಂದ್ರ ಚಾಹಲ್‌  39
ಸೂರ್ಯಕುಮಾರ್‌ ಯಾದವ್‌ ಔಟಾಗದೆ  10
ಇತರೆ:( ಬೈ–2, ಲೆಗ್‌ ಬೈ–4, ವೈಡ್‌–13)  19

ವಿಕೆಟ್‌ ಪತನ: 1–6 (ಉತ್ತಪ್ಪ; 0.6), 2–34 (ಲ್ಯಾನ್‌; 4.4), 3–66 (ಗಂಭೀರ್‌; 9.6), 4–69 (ಮನೀಷ್‌; 10.1), 5–165 (ರಸೆಲ್‌; 17.3).
ಬೌಲಿಂಗ್‌:  ಸ್ಟುವರ್ಟ್‌ ಬಿನ್ನಿ 2–0–17–1, ಎಸ್‌. ಅರವಿಂದ್‌ 2.1–0–13–1, ಶೇನ್‌ ವ್ಯಾಟ್ಸನ್‌ 3–0–38–1, ಯಜುವೇಂದ್ರ ಚಾಹಲ್‌ 4–0–27–2, ವರುಣ್ ಆ್ಯರನ್‌ 4–0–34–0, ತಬ್ರೈಜ್‌ ಶಂಸಿ 4–0–51–0.

ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ 5 ವಿಕೆಟ್‌ ಜಯ.
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.