ADVERTISEMENT

ದೋನಿಗೆ ವಿಶ್ರಾಂತಿ; ಕೊಹ್ಲಿಗೆ ನಾಯಕತ್ವ

ಲಂಕಾ ವಿರುದ್ಧದ ಮೊದಲ 3 ಪಂದ್ಯಗಳಿಗೆ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 10:59 IST
Last Updated 21 ಅಕ್ಟೋಬರ್ 2014, 10:59 IST

ಹೈದರಾಬಾದ್‌ (ಪಿಟಿಐ): ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಿಗೆ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವಿರಾಟ್ ಕೊಹ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಲಂಕಾ ವಿರುದ್ಧದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಐದು ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ತಂಡ ಪ್ರಕಟಿಸಿದ್ದು, ದೋನಿ ಅವರ ಬದಲಿಗೆ ಪಶ್ಚಿಮ ಬಂಗಾಳದ ಆಟಗಾರ ವೃದ್ಧಿಮಾನ್ ಸಹಾ ಅವರಿಗೆ 15 ಆಟಗಾರರ ತಂಡದಲ್ಲಿ ಅವಕಾಶ ಲಭಿಸಿದೆ.

ಭಾರತದ ಜತೆಗಿನ ಸರಣಿಯನ್ನು ವೆಸ್ಟ್ ಇಂಡೀಸ್‌ ತಂಡವು ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬಿಸಿಸಿಐ ಲಂಕಾದೊಂದಿಗೆ ಸರಣಿ ಆಯೋಜಿಸಿದೆ.

ADVERTISEMENT

ಸ್ಪೀನ್ನರ್‌ ಕುಲದೀಪ್‌ ಯಾದವ್‌ ಅವರ ಬದಲಿಗೆ ವೆಸ್ಟ್‌ಇಂಡೀಸ್‌ ಸರಣಿಗೆ ವಿಶ್ರಾಂತಿ ಪಡೆದಿದ್ದ ರವಿಚಂದ್ರನ್‌ ಅಶ್ವಿನ್‌ ಅವರು  ತಂಡಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ಮೊಹಿತ್‌ ಶರ್ಮಾ ಅವರ ಸ್ಥಾನವನ್ನು ವೇಗಿ ವರುಣ್ ಆ್ಯರನ್‌ ತುಂಬಲಿದ್ದಾರೆ.

ಲಂಕಾ ವಿರುದ್ಧದ ಐದು ಪಂದ್ಯಗಳು  ಕಟಕ್‌, ಹೈದರಾಬಾದ್‌, ರಾಂಚಿ, ಕೋಲ್ಕತ್ತ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಈ ಸಂಬಂಧ ಶೀಘ್ರವೇ ವಿವರಣೆ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಖರ್ ಧವನ್‌ ಹಾಗೂ ಅಜಿಂಕ್ಯಾ ರಹಾನೆ ಅವರನ್ನು ಆರಂಭಿಕ ಆಟಗಾರರಾಗಿ ಉಳಿಸಿಕೊಳ್ಳಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಅವರನ್ನು ಲಂಕಾ ವಿರುದ್ಧ ನಡೆಯಲಿರುವ ಭಾರತ ‘ಎ’ ತಂಡಕ್ಕೆ ನೇಮಿಸಲಾಗಿದೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಅಂಬಡಿ ರಾಯುಡು, ವೃದ್ಧಿಮಾನ್ ಸಹಾ, ಆರ್.ಅಶ್ವಿನ್‌, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಉಮೇಶ್ ಯಾದವ್,ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಮುರುಳಿ ವಿಜಯ್, ವರುಣ್‌ ಆ್ಯರನ್‌ ಹಾಗೂ ಅಕ್ಷರ್ ಪಟೇಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.