ADVERTISEMENT

ದೋನಿ ಬಳಗಕ್ಕೆ ಹೀನಾಯ ಸೋಲು

ಟ್ವೆಂಟಿ–20 ಕ್ರಿಕೆಟ್: ಅಭಿಮಾನಿಗಳ ಆಕ್ರೋಶಕ್ಕೆ ವೇದಿಕೆಯಾದ ಕಟಕ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 19:53 IST
Last Updated 5 ಅಕ್ಟೋಬರ್ 2015, 19:53 IST

ಕಟಕ್: ಮೊದಲು ಭಾರತ ತಂಡದ  ಕಳಪೆ ಬ್ಯಾಟಿಂಗ್. ನಂತರ ಸಿಟ್ಟಿಗೆದ್ದು   ಪ್ರೇಕ್ಷಕರ ದಾಂಧಲೆ. ಆಟಗಾರರಿಗೆ ಖಾಲಿ ಬಾಟಲಿ ಎಸೆದ ಜನ. ಇವೆಲ್ಲದರ ನಡುವೆ ತಣ್ಣಗೆ ಆಡಿ ಗೆದ್ದ ದಕ್ಷಿಣ ಆಫ್ರಿಕಾ ತಂಡ!

ಬಾರಾಬಾತಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫ್ರೀಡಮ್ ಸರಣಿಯ ಎರಡನೇ ಟ್ವೆಂಟಿ–20 ಪಂದ್ಯದ ಸಾರಾಂಶ ಇದು. ಈ ಪಂದ್ಯದಲ್ಲಿಯೂ ಟಾಸ್ ಗೆದ್ದ ಪ್ರವಾಸಿ ಬಳಗವು ಭಾರತ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 

17.2 ಓವರ್‌ಗಳಲ್ಲಿ ಕೇವಲ 92 ರನ್ ಗಳಿಸಿದ ದೋನಿ ಬಳಗದ ಎಲ್ಲ ಬ್ಯಾಟ್ಸ್‌ಮನ್‌ಗಳೂ   ಪೆವಿಲಿಯನ್‌ ಸೇರಿದರು. ಇದೇ ಮೊದಲ ಬಾರಿಗೆ ಕಟಕ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ವೀಕ್ಷಿಸಲು ಬಂದಿದ್ದ ಸಾವಿರಾರು ಜನರಲ್ಲಿ ಆಕ್ರೋಶ ಮೂಡಿಸಿತು.

ದಕ್ಷಿಣ ಆಫ್ರಿಕಾ ತಂಡವು 17.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 96 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಅದರೊಂದಿಗೆ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು. ಇನ್ನೊಂದು ಪಂದ್ಯವು ಕೋಲ್ಕತ್ತದಲ್ಲಿ ಅ.8ರಂದು ನಡೆಯಲಿದೆ.

ಕಳಪೆ ಬ್ಯಾಟಿಂಗ್‌
ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ ಸೇರಿದಂತೆ ಎಲ್ಲ ಬ್ಯಾಟ್ಸ್‌ಮನ್‌ಗಳೂ ಕಟಕ್‌ನಲ್ಲಿ ಪ್ರವಾಸಿ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾದರು.

ಮೊದಲ ವಿಕೆಟ್ ಜೊತೆಯಾಟದಲ್ಲಿ  ರೋಹಿತ್ (22 ರನ್) ಮತ್ತು ಶಿಖರ್ ಧವನ್ (11 ರನ್) 28 ರನ್ ಸೇರಿಸಿದರು. ನಾಲ್ಕನೇ ಓವರ್‌ನಲ್ಲಿ ಧವನ್ ಎಲ್‌ಬಿಡಬ್ಲ್ಯು ಆಗಿ ಮರಳಿದರು. ನಂತರ ಬಂದ ಕೊಹ್ಲಿ ಆಡಿದ್ದು ಒಂದೇ ಎಸೆತ, ಗಳಿಸಿದ್ದು ಒಂದು ರನ್ ಮಾತ್ರ. ಅನಗತ್ಯ ಸಾಹಸಕ್ಕೆ ಕೈಹಾಕಿದರು. 

ಎರಡನೇ ರನ್ ಪಡೆಯಲು ನುಗ್ಗಿ ದಂಡ ತೆತ್ತರು. ಫೀಲ್ಡರ್ ಮೋರಿಸ್ ನೀಡಿದ ಥ್ರೋ ಸ್ವೀಕರಿಸಿದ ವಿಕೆಟ್‌ಕೀಪರ್ ಡಿವಿಲಿಯರ್ಸ್ ಬೇಲ್ಸ್‌ ಎಗರಿಸಿದರು. ಟಿವಿ ಅಂಪೈರ್ ತೀರ್ಪು ನೀಡಿದ ನಂತರ ಕೊಹ್ಲಿ ಮೈದಾನದಿಂದ ಹೊರ ನಡೆದರು. ಶರ್ಮಾ ಜೊತೆಗೂಡಿದ ಸುರೇಶ್ ರೈನಾ (22 ರನ್)  ರನ್ ಸೇರಿಸತೊಡಗಿದ್ದರು. ಆದರೆ, ಶರ್ಮಾ ಎಡವಟ್ಟು ಮಾಡಿಕೊಂಡು ರನ್‌ಔಟ್ ಆದರು. ಅವರು ಪೆವಿಲಿಯನ್ ಸೇರಿ ಪ್ಯಾಡ್ ಕಳಚುವಷ್ಟರಲ್ಲಿ ಅಂಬಟಿ ರಾಯುಡು ಕೂಡ ಬೌಲ್ಡ್‌ ಆಗಿ ಮರಳಿದರು!

ನಂತರ ಐದು ರನ್ ಗಳಿಸಿದ ನಾಯಕ ದೋನಿ ಕೂಡ ಮಾರ್ಕೆಲ್‌ ಬೌಲಿಂಗ್‌ನಲ್ಲಿ ಡಿವಿಲಿಯರ್ಸ್‌ಗೆ ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ರೈನಾ ಕೂಡ ನಿರ್ಗಮಿಸಿದರು. ಆರ್. ಅಶ್ವಿನ್ (11 ರನ್) ಬಿಟ್ಟರೆ ಉಳಿದವರು ಎರಡಂಕಿ ದಾಟಲಿಲ್ಲ. ಹೀಗೆ ಬಂದು ಹಾಗೆ ಮರಳಿದರು.

ಇದರಿಂದಾಗಿ ತಂಡದ ಮೊತ್ತವು ನೂರರ ಗಡಿಯನ್ನೂ ದಾಟಲಿಲ್ಲ. ಮಧ್ಯಮ ವೇಗಿ ಅಲ್ಬೀ ಮಾರ್ಕೆಲ್ (12ಕ್ಕೆ3) ಮತ್ತು ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ (24ಕ್ಕೆ2) ಭಾರತ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಿದರು.  ಪಿಚ್‌ ಸ್ಪಿನ್ನರ್‌ಗಳಿಗೆ ಸಹಕರಿಸುವ ನಿರೀಕ್ಷೆಯಿಂದ ಭಾರತ ತಂಡದಿಂದ ಎಸ್‌. ಅರವಿಂದ್ ಅವರನ್ನು ಕೈಬಿಟ್ಟು, ಹರಭಜನ್ ಸಿಂಗ್‌ಗೆ ಅವಕಾಶ ನೀಡಲಾಗಿತ್ತು.

ಅಲ್ಪಮೊತ್ತವನ್ನು ಬೆನ್ನತ್ತಿದ ಪ್ರವಾಸಿ ಬಳಗಕ್ಕೆ ಆರಂಭದಲ್ಲಿಯೇ ಆರ್. ಆಶ್ವಿನ್ ಪೆಟ್ಟು ನೀಡಿದರು. ಎರಡು ರನ್ ಗಳಿಸಿದ್ದ ಹಾಶೀಂ ಆಮ್ಲಾ,  ಅಶ್ವಿನ್  ಹಾಕಿದ ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತರು.

ಡಿವಿಲಿಯರ್ಸ್ ಜೊತೆಗೂಡಿದ ನಾಯಕ ಪ್ಲೆಸಿಸ್  ಇನಿಂಗ್ಸ್‌ ಕಟ್ಟತೊಡಗಿದರು. ಆರನೇ ಓವರ್‌ನಲ್ಲಿ  ಪ್ಲೆಸಿಸ್ ವಿಕೆಟ್ ಗಳಿಸಿದ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸಿದರು.  ತಮ್ಮ ಇನ್ನೊಂದು ಓವರ್‌ನಲ್ಲಿ ಡಿವಿಲಿಯರ್ಸ್‌ ವಿಕೆಟ್ ಎಗರಿಸಿದ ಅಶ್ವಿನ್ ಮಿಂಚಿದರು. ಪಂದ್ಯ ರೋಚಕ ತಿರುವು ಪಡೆಯುವ ಲಕ್ಷಣಗಳಿದ್ದವು.

ಆದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಜೇನ್ ಪಾಲ್ ಡುಮಿನಿ (ಔಟಾಗದೆ 30; 39ಎ, 3ಬೌಂ) ಅದಕ್ಕೆ ಅವಕಾಶ ನೀಡಲಿಲ್ಲ. ಗೆಲುವಿಗೆ ಇನ್ನೂ 13 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಭಾರತದ ಫೀಲ್ಡರ್‌ಗಳ ಮೇಲೆ ಪ್ರೇಕ್ಷಕರು ಬಾಟಲಿಗಳನ್ನು ಎಸೆದರು.

ಇದರಿಂದಾಗಿ ಸ್ವಲ್ಪಹೊತ್ತು ಆಟವನ್ನು ಸ್ಥಗಿತಗೊಳಿಸಲಾಯಿತು. ಸುಮಾರು 25 ನಿಮಿಷಗಳ ನಂತರ ಮತ್ತೆ ಆಟ ಆರಂಭವಾದಾಗ, ಅಕ್ಷರ್ ಪಟೇಲ್ ಬೆಹ್ರಾದೀನ್ ವಿಕೆಟ್‌ ಗಳಿಸಿದರು. ಆದರೆ, ಡೇವಿಡ್ ಮಿಲ್ಲರ್ ಮತ್ತು ಡುಮಿನಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

ಮೈದಾನಕ್ಕೆ ಬಾಟಲಿ ಎಸೆದ ಅಭಿಮಾನಿಗಳು
ಇದೇ ಮೊದಲ ಬಾರಿಗೆ ಟ್ವೆಂಟಿ–20 ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬಾರಾಬಾತಿ ಕ್ರೀಡಾಂಗಣವು ಸೋಮವಾರ ರಾತ್ರಿ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡ ಕಳಂಕಕ್ಕೆ ತುತ್ತಾಯಿತು. ಈ ಪಂದ್ಯದಲ್ಲಿ ಭಾರತ ತಂಡದ ಕಳಪೆ ಬ್ಯಾಟಿಂಗ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.  ಕೇವಲ 92 ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಅಭಿಮಾನಿಗಳು ಖಾಲಿ ಬಾಟಲಿ ಎಸೆದು ಆಕ್ರೋಶವ್ಯಕ್ತಪಡಿಸಿದರು.

ಮೂರು ಮತ್ತು ನಾಲ್ಕನೇ ಗ್ಯಾಲರಿಯ ಅಭಿಮಾನಿಗಳು ನೀರಿನ ಖಾಲಿ ಬಾಟಲಿಗಳನ್ನು ಆಟಗಾರರತ್ತ ಎಸೆದರು. ಕ್ರಿಕೆಟ್‌ ಮೈದಾನಗಳಲ್ಲಿ ನೀರಿನ ಬಾಟಲಿ ತರುವುದನ್ನು ನಿಷೇಧಿಸಲಾಗಿದೆ. ನೀರಿನ ಪೊಟ್ಟಣಗಳನ್ನು ತರಲು ಮಾತ್ರ ಅವಕಾಶವಿದೆ.  ‘ನೀರಿನ ಸಣ್ಣ ಬಾಟಲಿಗಳು ಮತ್ತು ಸಣ್ಣ ಪೊಟ್ಟಣಗಳನ್ನು ನಾವು ನಿಷೇಧಿಸಿದ್ದೇವೆ.

ಏಕೆಂದರೆ, ನೀರು ತುಂಬಿದ ಪೊಟ್ಟಣಗಳನ್ನು ಎಸೆದಾಗ ಬಾಟಲಿಗಳಿಗಿಂತಲೂ ವೇಗವಾಗಿ ಚಲಿಸುತ್ತವೆ ಮತ್ತು ಹೆಚ್ಚು ಹಾನಿ ಮಾಡುತ್ತವೆ. ದೊಡ್ಡ ಬಾಟಲಿಗಳನ್ನು ನಾವು ನಿಷೇಧ ಮಾಡಿಲ್ಲ’ ಎಂದು ಒಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಅಭಿಮಾನಿಗಳು ಎಸೆದ ಬಾಟಲಿಗಳು ಆಟದ ಮೈದಾನಕ್ಕೆ ಬೀಳಲಿಲ್ಲ.  ಯಾರಿಗೂ ಪೆಟ್ಟಾಗಲಿಲ್ಲ. ಎಲ್ಲ ಬಾಟಲಿಗಳು ಅಭ್ಯಾಸದ ಅಂಗಳದತ್ತ ಹೋಗಿ ಬಿದ್ದವು.

ಪರಿಸ್ಥಿತಿ ಕೈಮೀರುವುದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದರು. ಒಸಿಎ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡು  ಪರಿಸ್ಥಿತಿ ತಿಳಿಗೊಳಿಸಿದರು. ಆದರೆ, ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್ ಮಾಡುವಾಗಲೂ ಪ್ರೇಕ್ಷಕರ ಸಿಟ್ಟು ಮತ್ತೆ ಭುಗಿಲೆದ್ದಿತು. ಫೀಲ್ಡಿಂಗ್ ಮಾಡುತ್ತಿದ್ದ ಆತಿಥೇಯ ಆಟಗಾರರತ್ತ ಬಾಟಲಿಗಳು ತೂರಿಬಂದವು. ಇದರಿಂದ ಕೆಲ ಹೊತ್ತು ಆಟ ಸ್ಥಗಿತಗೊಂಡಿತ್ತು. ಟ್ವೆಂಟಿ–20 ಪಂದ್ಯಗಳಲ್ಲಿ ಭಾರತದ ಎರಡನೇ ಕನಿಷ್ಠ ಮೊತ್ತ ಇದು. 2008ರಲ್ಲಿ ಆಸ್ಟ್ರೇಲಿಯಾ ಎದುರು ಭಾರತವು 74 ರನ್ ಗಳಿಸಿತ್ತು.

*
ಸ್ಕೋರ್‌ಕಾರ್ಡ್‌
ಭಾರತ 92  (17.2  ಓವರ್‌ಗಳಲ್ಲಿ)

ರೋಹಿತ್ ಶರ್ಮಾ ರನ್‌ಔಟ್ (ಮಿಲ್ಲರ್)  22
ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಿ ಕ್ರಿಸ್ ಮೋರಿಸ್  11
ವಿರಾಟ್ ಕೊಹ್ಲಿ ರನ್‌ಔಟ್ (ಮೋರಿಸ್/ಡಿವಿಲಿಯರ್ಸ್  01
ಸುರೇಶ್ ರೈನಾ ಸಿ ಹಾಶೀಂ ಆಮ್ಲಾ ಬಿ ಇಮ್ರಾನ್ ತಾಹೀರ್  22
ಅಂಬಟಿ ರಾಯುಡು ಬಿ ಕಗಿಸೊ ರಬಾದಾ  00
ಮಹೇಂದ್ರಸಿಂಗ್ ದೋನಿ ಸಿ ಎ.ಬಿ. ಡಿವಿಲಿಯರ್ಸ್ ಬಿ ಅಲ್ಬೀ ಮಾರ್ಕೆಲ್  05
ಅಕ್ಷರ್ ಪಟೇಲ್ ಸಿ ಡು ಪ್ಲೆಸಿಸ್ ಬಿ ಅಲ್ಬೀ ಮಾರ್ಕೆಲ್  09
ಹರಭಜನ್ ಸಿಂಗ್ ಬಿ ಇಮ್ರಾನ್ ತಾಹೀರ್  00
ಆರ್. ಅಶ್ವಿನ್ ಬಿ ಕ್ರಿಸ್ ಮೋರಿಸ್   11
ಭುವನೇಶ್ವರ್ ಕುಮಾರ್ ಬಿ ಅಲ್ಬೀ ಮಾರ್ಕೆಲ್  00
ಮೋಹಿತ್ ಶರ್ಮಾ ಔಟಾಗದೆ  00
ಇತರೆ: (ಲೆಗ್‌ಬೈ1, ವೈಡ್ 9, ನೋಬಾಲ್1)  11

ವಿಕೆಟ್‌ ಪತನ: 1–28 (ಧವನ್; 3.6), 2–30 (ಕೊಹ್ಲಿ; 4.2), 3–43 (ರೋಹಿತ್; 7.5), 4–45 (ರಾಯುಡು; 8.3), 5–67 (ದೋನಿ; 11.4), 6–69 (ರೈನಾ; 12.3), 7–69 (ಹರಭಜನ್;12.4), 8–85 (ಪಟೆಲ್‌; 15.4), 9–85 (ಭುವನೇಶ್ವರ್; 15.6), 10–92 (ಅಶ್ವಿನ್; 17.2).

ADVERTISEMENT

ಬೌಲಿಂಗ್‌: ಕೈಲ್ ಅಬಾಟ್ 3–0–21–0 (ನೋಬಾಲ್1, ವೈಡ್ 4), ಇಮ್ರಾನ್ ತಾಹೀರ್ 4–0–24–2 (ವೈಡ್ 1), ಕಗೀಸೊ ರಬಾದಾ 4–0–18–1 (ವೈಡ್ 3), ಕ್ರಿಸ್ ಮೋರಿಸ್ 2.2–0–16.–2 (ವೈಡ್ 1), ಅಲ್ಬೀ ಮಾರ್ಕೆಲ್ 4–0–12–3.

ದಕ್ಷಿಣ ಆಫ್ರಿಕಾ 94ಕ್ಕೆ  4 (17.1 ಓವರ್‌ಗಳಲ್ಲಿ)

ಎ.ಬಿ. ಡಿವಿಲಿಯರ್ಸ್ ಬಿ ಅಶ್ವಿನ್  19
ಹಾಶೀಂ ಆಮ್ಲಾ ಸಿ ರೋಹಿತ್ ಶರ್ಮಾ ಬಿ ಅಶ್ವಿನ್  02
ಫಾಫ್ ಡು ಪ್ಲೆಸಿಸ್ ಸಿ ಮೋಹಿತ್ ಶರ್ಮಾ ಬಿ ಅಶ್ವಿನ್  16
ಜೆ.ಪಿ. ಡುಮಿನಿ ಔಟಾಗದೆ  30
ಫರ್ಹಾನ್ ಬೆಹ್ರಾದೀನ್ ಎಲ್‌ಬಿಡಬ್ಲ್ಯು ಬಿ ಅಕ್ಷರ್ ಪಟೇಲ್  11
ಡೇವಿಡ್ ಮಿಲ್ಲರ್ ಔಟಾಗದೆ  10
ಇತರೆ: (ಲೆಗ್‌ಬೈ 3, ವೈಡ್ 5)  08

ವಿಕೆಟ್‌ ಪತನ: 1–13 (ಆಮ್ಲಾ; 1.6), 2–38 (ಪ್ಲೆಸಿಸ್; 5.5), 3–49 (ಡಿವಿಲಿಯರ್ಸ್; 7.6), 4–76 (ಬೆಹ್ರಾದೀನ್; 14.3)

ಬೌಲಿಂಗ್‌: ಭುವನೇಶ್ವರ್ ಕುಮಾರ್ 2–0–13–0 (ವೈಡ್ 1), ಆರ್. ಅಶ್ವಿನ್ 4–0–24–3, ಹರಭಜನ್ ಸಿಂಗ್ 4–0–20–0 (ವೈಡ್ 2), ಮೋಹಿತ್ ಶರ್ಮಾ 1–0–7–0, ಸುರೇಶ್ ರೈನಾ 3.1–0–12–0, ಅಕ್ಷರ್ ಪಟೇಲ್ 3–0–17–1
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ಗಳ ಜಯ. ಸರಣಿಯಲ್ಲಿ 2–0 ಮುನ್ನಡೆ

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ಗಳ ಜಯ
ಪಂದ್ಯಶ್ರೇಷ್ಠ: ಅಲ್ಬಿ ಮಾರ್ಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.