ADVERTISEMENT

ನಿರ್ದೇಶಕರಾಗಿ ರವಿಶಾಸ್ತ್ರಿ ಮುಂದುವರಿಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧಾರನಿರ್ದೇಶಕರಾಗಿ ರವಿಶಾಸ್ತ್ರಿ ಮಂದುವರಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2015, 19:38 IST
Last Updated 13 ಸೆಪ್ಟೆಂಬರ್ 2015, 19:38 IST
ನಿರ್ದೇಶಕರಾಗಿ ರವಿಶಾಸ್ತ್ರಿ ಮುಂದುವರಿಕೆ
ನಿರ್ದೇಶಕರಾಗಿ ರವಿಶಾಸ್ತ್ರಿ ಮುಂದುವರಿಕೆ   

ನವದೆಹಲಿ (ಪಿಟಿಐ): ‘ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಅವರು 2016ರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿ ಯವರೆಗೂ ತಂಡದ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ  ಹೇಳಿದೆ.

ಬಿಸಿಸಿಐ ಸಲಹಾ ಸಮಿತಿ ನೀಡಿರುವ ಶಿಫಾರಸಿನ ಆಧಾರದ ಮೇಲೆ ರವಿಶಾಸ್ತ್ರಿ ಅವರನ್ನು ನಿರ್ದೇಶಕರಾಗಿ ಮುಂದುವರಿಸಲಾಗಿದೆ.
ಆಗಸ್ಟ್‌ 2014ರಲ್ಲಿ ರವಿಶಾಸ್ತ್ರಿ ಭಾರತ ಕ್ರಿಕೆಟ್‌ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈಗ ಅವರಿಗೆ ಏಳು ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗಿದೆ. ಭಾರತದಲ್ಲಿ ಮಾರ್ಚ್‌ 11ರಿಂದ ಏಪ್ರಿಲ್‌ 3ರವರೆಗೆ ಆರನೇ ಆವೃತ್ತಿಯ ಟ್ವೆಂಟಿ–20 ವಿಶ್ವಕಪ್‌ ನಡೆಯಲಿದೆ.

‘ಕಳೆದ ವರ್ಷ ಇಂಗ್ಲೆಂಡ್‌ ನೆಲದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋಲು ಕಂಡ ಬಳಿಕ ರವಿಶಾಸ್ತ್ರಿ ನಿರ್ದೇಶಕರಾಗಿ ಆಯ್ಕೆ ಯಾಗಿದ್ದರು. ಆ ಬಳಿಕ ಹಲವು ಟೂರ್ನಿಗಳಲ್ಲಿ ಯಶಸ್ಸು ಕಂಡಿತ್ತು. ಸಲಹಾ ಸಮಿತಿಯಲ್ಲಿ ಸಚಿನ್‌ ತೆಂಡೂಲ್ಕರ್, ಸೌರವ್ ಗಂಗೂಲಿ, ವಿ.ವಿ.ಎಸ್‌ ಲಕ್ಷ್ಮಣ್‌ ಇದ್ದಾರೆ.

ರವಿಶಾಸ್ತ್ರಿ ನಿರ್ದೇಶಕರಾಗಿ ನೇಮಕಗೊಂಡ ನಂತರ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಗೆದ್ದುಕೊಂಡಿತ್ತು.
ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿತ್ತು. ಹಾಗೂ ಶ್ರೀಲಂಕಾದಲ್ಲಿ 22 ವರ್ಷಗಳ ಬಳಿಕ ಟೆಸ್ಟ್‌ ಸರಣಿ ಗೆದ್ದಿತ್ತು.
ಸಂಜಯ್‌ ಬಂಗಾರ್‌ (ಬ್ಯಾಟಿಂಗ್‌ ಕೋಚ್‌), ಭರತ್‌ ಅರುಣ್‌ (ಬೌಲಿಂಗ್‌ ಕೋಚ್‌), ಆರ್‌. ಶ್ರೀಧರ್‌ (ಫೀಲ್ಡಿಂಗ್‌ ಕೋಚ್‌) ತಮ್ಮ ಹುದ್ದೆಗಳಲ್ಲಿಯೇ ಮುಂದುವರಿಯಲಿದ್ದಾರೆ.

ಬಿಸಿಸಿಐ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಹಾಗೂ ಕಾರ್ಯದರ್ಶಿ ಅನುರಾಗ್‌ ಠಾಕೂರ್ ಅವರು ರವಿಶಾಸ್ತ್ರಿ  ಕಾರ್ಯದ  ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸಲಹಾ ಸಮಿತಿಯ ನಿರ್ಧಾರವನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT