ADVERTISEMENT

ನ್ಯೂಜಿಲೆಂಡ್‌ನ ಬ್ರೇಸ್‌ವೆಲ್‌ಗೆ ‘ಸಮಾಜಸೇವೆ’ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST

ವೆಲಿಂಗ್ಟನ್‌, ನ್ಯೂಜಿಲೆಂಡ್‌: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದ ನ್ಯೂಜಿ ಲೆಂಡ್ ಕ್ರಿಕೆಟ್‌ ತಂಡದ ವೇಗಿ ಡಗ್‌ ಬ್ರೇಸ್‌ವೆಲ್‌ ಅವರಿಗೆ ಇಲ್ಲಿನ ನ್ಯಾಯಾಲಯ 100 ತಾಸು ಸಮಾಜ ಸೇವೆ ಮಾಡುವ ಶಿಕ್ಷೆ ವಿಧಿಸಿದೆ.

ಕಳೆದ ತಿಂಗಳು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಬ್ರೇಸ್‌ವೆಲ್‌ ಮನೆಗೆ  ವಾಪಸಾಗುವಾಗ ಸಂಚಾರ ನಿಯಮ ಉಲ್ಲಂಘಿಸಿದ್ದರು.
ತಮ್ಮ ಪ್ರೀತಿಯ ಗಿಳಿಯನ್ನು ನಾಯಿಗಳು ಕಚ್ಚಿ ಎಳೆದೊಯ್ದಿವೆ ಎಂದು ಸ್ನೇಹಿತ ಕರೆಮಾಡಿ ಹೇಳಿದಾಗ ಗಾಬರಿಗೊಂಡು ಕುಡಿದ ಮತ್ತಿನಲ್ಲೇ ವಾಹನ ಚಲಾಯಿಸಿದ್ದೆ ಎಂದು ಅವರು ನ್ಯಾಯಾಧೀಶರ ಮುಂದೆ ಹೇಳಿದ್ದರು. ತಪ್ಪೊಪ್ಪಿಕೊಂಡ ಕಾರಣ ಅವರಿಗೆ ಜೈಲು ಶಿಕ್ಷೆ ವಿಧಿಸಲಿಲ್ಲ.

26 ವರ್ಷ ವಯಸ್ಸಿನ ಬ್ರೇಸ್‌ವೆಲ್‌ 10 ವರ್ಷಗಳಲ್ಲಿ ಮೂರು ಬಾರಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿ ಸಿಕ್ಕಿ ಬಿದ್ದಿದ್ದಾರೆ. ಕುಡಿದು ಗಲಾಟೆ ಮಾಡಿದ್ದಕ್ಕಾಗಿ ಅವರನ್ನು 2014ರಲ್ಲಿ ಒಂದು ಟೆಸ್ಟ್‌ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. 2012ರಲ್ಲಿ ಕುಡಿದ ಮತ್ತಿನಲ್ಲಿ ಒಡೆದ ಗ್ಲಾಸ್ ಮೇಲೆ ನಿಂತು ಗಾಯಗೊಂಡ ಕಾರಣ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ದೂರ ಉಳಿಯಬೇಕಾಗಿತ್ತು.

ADVERTISEMENT

ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ನಂತರ ಬಾರ್‌ನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಒಂದು ಪಂದ್ಯದಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.