ADVERTISEMENT

ಪಂದ್ಯ ಡ್ರಾ; ಕರ್ನಾಟಕ ನೀರಸ ಆರಂಭ

ರಣಜಿ: ಕೊನೆಯ ದಿನ ದಿಟ್ಟ ಆಟವಾಡಿದ ಅಸ್ಸಾಂ, ಅರುಣ್‌ ಸೊಗಸಾದ ಶತಕ

ಪ್ರಮೋದ ಜಿ.ಕೆ
Published 4 ಅಕ್ಟೋಬರ್ 2015, 19:51 IST
Last Updated 4 ಅಕ್ಟೋಬರ್ 2015, 19:51 IST

ಗುವಾಹಟಿ: ಕೆಲ ತಪ್ಪುಗಳು ಮತ್ತು ದುರದೃಷ್ಟ ಒಟ್ಟುಗೂಡಿದರೆ ಏನಾಗಬಹುದು ಎಂಬುದಕ್ಕೆ ಕೊನೆಯ ದಿನದಾಟ ಸಾಕ್ಷಿಯಾಯಿತು. ಫೀಲ್ಡಿಂಗ್‌ನಲ್ಲಿ ಪದೇ ಪದೇ ತಪ್ಪು ಮಾಡಿದ ಕರ್ನಾಟಕ ತಂಡ ಡ್ರಾಗೆ ತೃಪ್ತಿಪಟ್ಟರೆ, ದೇಶಿ ಕ್ರಿಕೆಟ್‌ನ ಶಿಶು ಅಸ್ಸಾಂ ರಣಜಿ ಟ್ರೋಫಿ ಗೆದ್ದಷ್ಟೇ ಖುಷಿಪಟ್ಟಿತು.

ಅಸ್ಸಾಂ ಬಲಿಷ್ಠ ತಂಡವೇನಲ್ಲ. ಆದರೆ ಈ ತಂಡದವರು ಭಾನುವಾರ ಆಡಿದ ಬ್ಯಾಟಿಂಗ್‌ ಮಾತ್ರ ಮೆಚ್ಚುವಂಥದ್ದು. ರಾಜ್ಯದ ಹತ್ತು  ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಸೋಲು ಎದುರಾಗದಂತೆ ತಡೆದರು. ದಿನದ ತೊಂಬತ್ತು ಓವರ್‌ಗಳನ್ನು  ಆಡಿ ‘ನಾವೂ ಬಲಿಷ್ಠರಾಗುತ್ತಿದ್ದೇವೆ’ ಎಂಬ ಸಂದೇಶ ನೀಡಿದರು. ಈ ತಂಡ ಇನಿಂಗ್ಸ್ ಮುನ್ನಡೆ ಪಡೆದಿದ್ದ ಕಾರಣ ಮೂರು ಪಾಯಿಂಟ್ಸ್‌ ತನ್ನದಾಗಿಸಿಕೊಂಡಿತು. ಹಾಲಿ ಚಾಂಪಿಯನ್‌ ಕರ್ನಾಟಕ 2015–16ರ ರಣಜಿ ಟೂರ್ನಿಯಲ್ಲಿ ನೀರಸ ಆರಂಭ ಪಡೆಯಿತು. ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಅಸ್ಸಾಂ ರಣಜಿಯಲ್ಲಿ ಹೊಸ ಅಧ್ಯಾಯ ಬರೆಯಿತು.

ಟೂರ್ನಿಯ ಇತಿಹಾಸದಲ್ಲಿ ಅಸ್ಸಾಂ ತಂಡ ಕರ್ನಾಟಕದ ಎದುರು ಇನಿಂಗ್ಸ್‌ ಮುನ್ನಡೆ ಪಡೆದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇದು ಮೊದಲು. ಉಭಯ ತಂಡಗಳು ಐದು ಪಂದ್ಯಗಳನ್ನು ಆಡಿವೆ. ಮೂರರಲ್ಲಿ ಕರ್ನಾಟಕ ಗೆಲುವು ಸಾಧಿಸಿದೆ. ಇದೇ ವರ್ಷದ ಇಂದೋರ್‌ನಲ್ಲಿ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಡ್ರಾ ಆಗಿತ್ತಾದರೂ, ರಾಜ್ಯ ತಂಡ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

ಛಲದ ಆಟ: 388 ರನ್‌ಗಳ ಸವಾಲಿನ ಗುರಿ ಬೆನ್ನು ಹತ್ತಿದ ಅಸ್ಸಾಂ ಶನಿವಾರದ ದಿನದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 30 ರನ್‌ ಗಳಿಸಿತ್ತು. ಕೊನೆಯ ದಿನದ 90 ಓವರ್‌ಗಳಲ್ಲಿ 358 ರನ್ ಗಳಿಸಬೇಕಿತ್ತು. ಕೈಯಲ್ಲಿ ಇದ್ದಿದ್ದು ಒಂಬತ್ತು ವಿಕೆಟ್‌.

ಎರಡು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯತ್ತಿರುವ ಕರ್ನಾಟಕ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ ಎಂಬುದು ನಿಜ. ಆದರೆ ಭಾನುವಾರ ರಾಜ್ಯದ ಬೌಲರ್‌ಗಳಿಗೆ ಅಸ್ಸಾಂನ ‘ತಾಳ್ಮೆಯ ಗೋಡೆ’ ಕೆಡವಲು ಸಾಧ್ಯವಾಗಲಿಲ್ಲ. ಬೆಟ್ಟದಂತ ಸವಾಲು ಮುಟ್ಟಲು ಸಾಧ್ಯವಿಲ್ಲ ಎನ್ನುವುದು ಅಸ್ಸಾಂಗೆ ಸ್ಪಷ್ಟವಾಗಿ ಗೊತ್ತಿತ್ತು. ಆದ್ದರಿಂದ ಈ ತಂಡದವರು ಗುರಿ ಮುಟ್ಟುವ ಗೊಡವೆಗೆ ಹೋಗದೆ ರಕ್ಷಣಾತ್ಮಕ ಆಟವಾಡಿದರು.

ಶನಿವಾರ ಕ್ರೀಸ್ ಕಾಯ್ದಕೊಂಡಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಪಲ್ಲವಕುಮಾರ್ ದಾಸ್‌ (26, 75 ನಿಮಿಷ, 51 ಎಸೆತ, 5 ಬೌಂಡರಿ) ಮತ್ತು ಅಮಿತ್ ವರ್ಮಾ (0) ಮೂರು ಓವರ್‌ಗಳ ಅಂತರದಲ್ಲಿ ವಿಕೆಟ್‌ ಒಪ್ಪಿಸಿದರು. ಈ ತಂಡದ ಒಟ್ಟು ಮೊತ್ತ 40 ಆಗಿದ್ದಾಗ ಮೂರು ವಿಕೆಟ್‌ಗಳು ಪತನವಾಗಿದ್ದವು. ಆಗ ಚಾಂಪಿಯನ್ ತಂಡ ಗೆಲುವಿನ ಹುಮ್ಮಸ್ಸಿನಲ್ಲಿತ್ತು. ಆದರೆ, ಎರಡು ಕ್ಯಾಚ್‌ ಕೈಚೆಲ್ಲಿ ಮತ್ತು ಒಂದು ರನ್‌ ಔಟ್‌ ಅವಕಾಶವನ್ನು ಹಾಳುಮಾಡಿಕೊಂಡ ರಾಜ್ಯ ತಂಡ ನಿರಾಸೆಗೆ ಒಳಗಾಗಬೇಕಾಯಿತು. ಅಂಪೈರ್‌ನ ಒಂದು ತಪ್ಪು ತೀರ್ಪು ಇದಕ್ಕೆ ಕಾರಣವಾಯಿತು.

ನಾಯಕ ಗೋಕುಲ್‌ ದಾಸ್‌ (55, 154 ಎಸೆತ, 5 ಬೌಂಡರಿ, 1 ಸಿಕ್ಸರ್‌) ಮತ್ತು ತಮಿಳುನಾಡು ಮೂಲಕ ಕೆ.ಬಿ. ಅರುಣ್‌ ಕಾರ್ತಿಕ್‌ ಸೊಗಸಾದ ಇನಿಂಗ್ಸ್‌ ಕಟ್ಟಿದರು. ಇದಕ್ಕೆ ಕರ್ನಾಟಕದ ಫೀಲ್ಡರ್‌ಗಳ ‘ಕಾಣಿಕೆ’ಯೂ ಇದೆ. ಗೋಕುಲ್‌ಗೆ ಎರಡು ಜೀವದಾನಗಳನ್ನು ಪಡೆದರು. ಸ್ಪಿನ್ನರ್‌ ಸುಚಿತ್‌ ಬೌಲಿಂಗ್‌ನಲ್ಲಿ ಕರುಣ್‌ ನಾಯರ್‌ ಎರಡನೇ ಸ್ಲಿಪ್‌ನಲ್ಲಿ ಕ್ಯಾಚ್‌ ಬಿಟ್ಟರು. ನಂತರ ವಿಕೆಟ್ ಕೀಪರ್‌ ಸಿ.ಎಂ.ಗೌತಮ್‌ ಮತ್ತು ವಿನಯ್‌ ಸೇರಿ ಕ್ಯಾಚ್‌ ಕೈಚೆಲ್ಲಿದರು.

ಇದೇ ಅವಕಾಶ ಬಳಸಿಕೊಂಡ ಗೋಕುಲ್‌ ಹೆಚ್ಚು ರನ್‌ ಗಳಿಸಲಿಲ್ಲವಾದರೂ 205 ನಿಮಿಷ ಕ್ರೀಸ್‌ನಲ್ಲಿದ್ದು ಕಾರ್ತಿಕ್‌ಗೆ ನೆರವು ನೀಡಿದರು. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 132 ರನ್‌ಗಳು ಬಂದವು. ಅಸ್ಸಾಂ ತಂಡಕ್ಕೆ ರನ್ ಗಳಿಸುವಕ್ಕಿಂತ ಹೆಚ್ಚಾಗಿ ‘ಟೈಂಪಾಸ್‌’ ಮಾಡುವುದು ಮುಖ್ಯವಾಗಿತ್ತು. ಆದ್ದರಿಂದ ಈ ಜೋಡಿ ರನ್‌ ಗಳಿಸಲು ಕಿಂಚಿತ್ತೂ ಅವಸರಿಸಲಿಲ್ಲ. 132 ರನ್‌ಗಳನ್ನು ಕಲೆ ಹಾಕಲು ಇವರು 254 ಎಸೆತಗಳನ್ನು ತೆಗೆದುಕೊಂಡಿದ್ದು ಇದಕ್ಕೆ ಸಾಕ್ಷಿ.

ಬಲಿಷ್ಠ ತಂಡದ ಎದುರು ಅಸ್ಸಾಂ ಡ್ರಾ ಸಾಧಿಸಲು ಅರುಣ್‌ ಕಾರ್ತಿಕ್‌ ಕಾರಣರಾದರು. ಐದು ಗಂಟೆ 44 ನಿಮಿಷ ಕ್ರೀಸ್‌ನಲ್ಲಿದ್ದ ಅರುಣ್‌ ಬೌಲರ್‌ಗಳ ತಾಳ್ಮೆಗೆ ಸವಾಲಾದರು. 258 ಎಸೆತಗಳನ್ನು ಎದುರಿಸಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದರು. ಸೈಯದ್‌ ಮಹಮ್ಮದ್‌ 128 ನಿಮಿಷ ಕ್ರೀಸ್‌ನಲ್ಲಿದ್ದು ಅರುಣ್‌ಗೆ ನೆರವಾದರು.

ಅರುಣ್‌ ಅರ್ಧಶತಕ ಗಳಿಸಿದ್ದಾಗಲೇ ಔಟಾಗುವ ಅಪಾಯದಲ್ಲಿದ್ದರು. ಆದರೆ, ಎಚ್‌.ಎಸ್‌. ಶರತ್ ಫೀಲ್ಡಿಂಗ್‌ನಲ್ಲಿ ಮಾಡಿದ ಎಡವಟ್ಟಿನಿಂದ ಅರುಣ್‌ಗೆ ಜೀವದಾನ ಲಭಿಸಿತು. ಸ್ಟ್ರೈಕ್‌ನಲ್ಲಿದ್ದ ತರ್ಜಿಂದರ್‌ ಸಿಂಗ್ ಮಿಡ್‌ವಿಕೆಟ್‌ ಬಳಿ ಚೆಂಡನ್ನು ಬಾರಿಸಿದ್ದರು. ಈ ವೇಳೆ ಅರುಣ್‌ ಪಿಚ್‌ನ ಅರ್ಧಕ್ಕೆ ಓಡಿದ್ದಾಗ ತರ್ಜಿಂದರ್‌ ಕ್ರೀಸ್‌ನಲ್ಲಿಯೇ ನಿಂತಿದ್ದರು. ಶರತ್‌ ಚುರುಕಾಗಿ ಚೆಂಡು ಎಸೆದಿದ್ದರೆ ಅರುಣ್‌ ಔಟಾಗುತ್ತಿದ್ದರು. ವಿಕೆಟ್‌ ಬಳಿಯೇ ಇದ್ದ ಸುಚಿತ್‌ ಕೈಗೂ ಶರತ್ ಚೆಂಡು ನೀಡಲಿಲ್ಲ. ಒಂದು ವೇಳೆ ಅರುಣ್‌ ರನ್‌ಔಟ್‌ ಆಗಿದ್ದರೆ ಕರ್ನಾಟಕದ ಗೆಲುವಿನ ಹಾದಿ ಸುಗಮವಾಗಿರುತ್ತಿತ್ತು.

ಲಭಿಸದ ಫಲ: ಅಸ್ಸಾಂನ ಒಂಬತ್ತು ವಿಕೆಟ್‌ಗಳನ್ನು ಉರುಳಿಸಬೇಕೆಂದು ರಾಜ್ಯ ತಂಡದ ನಾಯಕ ವಿನಯ್‌ ದಿನಪೂರ್ತಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರೂ ಫಲ ಲಭಿಸಲಿಲ್ಲ. ವಿಕೆಟ್‌ ಕೀಪರ್ ಗೌತಮ್‌ ಅವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಬೌಲ್‌ ಮಾಡಿದರು. ದಕ್ಕಿದ್ದು ಐದು ವಿಕೆಟ್‌ ಮಾತ್ರ. ಜೊತೆಗೆ ಅಭಿಮನ್ಯು ಮಿಥುನ್‌ ಬೌಲಿಂಗ್‌ ಮಾಡುವಾಗ ಮುಗುಚಿ ಬಿದ್ದು ಹಿಮ್ಮಡಿ ನೋವಿನಿಂದ ಬಳಲಿ ಅಂಗಳದಿಂದ ಹೊರನಡೆದರು. ಈ ಅಂಶವೂ ರಾಜ್ಯದ ಹಿನ್ನಡೆಗೆ ಕಾರಣವಾಯಿತು.

ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ, ದಿಕ್ಕು ಬದಲಿಸುವ ತಂತ್ರ, ಸಾಂದರ್ಭಿಕ ಸ್ಪಿನ್ನರ್‌ಗಳಿಗೆ ಮೊರೆ ಹೀಗೆ ವಿನಯ್‌ ಹಲವಾರು ಪ್ರಯೋಗಗಳನ್ನು ಮಾಡಿದರು. ಪ್ರತಿ ವಿರಾಮದ ಅವಧಿ ಮುಗಿದ ಬಳಿಕವೂ ಯೋಜನೆಗಳನ್ನು ರೂಪಿಸಿದರೂ ಫಲ ಲಭಿಸಲಿಲ್ಲ. ಇದು ರಾಜ್ಯ ತಂಡದ ಬೌಲಿಂಗ್‌ ಸಾಮರ್ಥ್ಯಕ್ಕೂ ಅಗ್ನಿಪರೀಕ್ಷೆ ಒಡ್ಡಿತು. ಮೊದಲ ಎರಡು ದಿನ ಪಿಚ್‌ ಬೌಲರ್‌ಗಳಿಗೆ ನೆರವಾಗಿತ್ತು. ಕೊನೆಯ ಎರಡು ದಿನದಲ್ಲಿ ಬ್ಯಾಟ್ಸ್‌ಮನ್‌ಗಳ ‘ಆಟ’ವೇ ನಡೆಯಿತು.

***
ಸ್ಕೋರ್‌ಕಾರ್ಡ್‌
ಕರ್ನಾಟಕ ಮೊದಲ ಇನಿಂಗ್ಸ್‌ 187  (75.2 ಓವರ್‌ಗಳಲ್ಲಿ)

ಅಸ್ಸಾಂ ಮೊದಲ ಇನಿಂಗ್ಸ್‌ 194  (78.5 ಓವರ್‌ಗಳಲ್ಲಿ)

ಕರ್ನಾಟಕ ಎರಡನೇ ಇನಿಂಗ್ಸ್‌   394 ಕ್ಕೆ8 ಡಿಕ್ಲೇರ್ಡ್  (94 ಓ.)
ಅಸ್ಸಾಂ ಎರಡನೇ ಇನಿಂಗ್ಸ್‌  259 ಕ್ಕೆ 5  ( 102 ಓವರ್‌ಗಳಲ್ಲಿ )
(ಶನಿವಾರದ ಅಂತ್ಯಕ್ಕೆ 11.1 ಓವರ್‌ಗಳಲ್ಲಿ 30ಕ್ಕೆ1)
ಪಲ್ಲವಕುಮಾರ್‌ ದಾಸ್‌ ಸಿ ಸಿ.ಎಂ. ಗೌತಮ್‌ ಬಿ ವಿನಯ್‌ ಕುಮಾರ್‌  26
ಗೋಕುಲ್‌ ಶರ್ಮಾ ಬಿ ಜೆ. ಸುಚಿತ್‌  55
ಅಮಿತ್‌ ವರ್ಮಾ ಎಲ್‌ಬಿಡಬ್ಲ್ಯು ಬಿ ವಿನಯ್‌ ಕುಮಾರ್‌  00
ಕೆ.ಬಿ. ಅರುಣ್‌ ಕಾರ್ತಿಕ್‌ ಔಟಾಗದೆ  115
ತರ್ಜಿಂದರ್‌ ಸಿಂಗ್‌ ಎಲ್‌ಬಿಡಬ್ಲ್ಯು ಬಿ ಶ್ರೇಯಸ್ ಗೋಪಾಲ್‌  15
ಸೈಯದ್‌ ಮಹಮ್ಮದ್‌ ಔಟಾಗದೆ  21
ಇತರೆ: (ನೋ ಬಾಲ್‌–7, ಲೆಗ್‌ ಬೈ–12)  19

ADVERTISEMENT

ವಿಕೆಟ್‌ ಪತನ: 2–40 (ಪಲ್ಲವ್‌ಕುಮಾರ್‌; 16.4), 3–40 (ಅಮಿತ್‌; 18.1), 4–172 (ಗೋಕುಲ್‌; 60.3), 5–201 (ತರ್ಜಿಂದರ್‌;69.1).

ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 17–6–41–2, ಅಭಿಮನ್ಯು ಮಿಥುನ್‌ 3.1–0–18–0, ಜೆ. ಸುಚಿತ್‌ 26–7–60–2, ಕರುಣ್‌ ನಾಯರ್‌ 13–5–24–0, ಎಚ್‌.ಎಸ್‌. ಶರತ್‌ 14.5–4–36–0, ಆರ್‌. ಸಮರ್ಥ್‌ 4–0–14–0, ಶ್ರೇಯಸ್‌ ಗೋಪಾಲ್‌ 18–6–42–1, ಮಯಂಕ್‌ ಅಗರವಾಲ್ 2–1–4–0, ರಾಬಿನ್ ಉತ್ತಪ್ಪ 3–1–8–0, ಶಿಶಿರ್‌ ಭವಾನೆ 1–1–0–0.

ಫಲಿತಾಂಶ: ಡ್ರಾ. ಅಸ್ಸಾಂಗೆ ಮೂರು. ಕರ್ನಾಟಕಕ್ಕೆ ಒಂದು ಪಾಯಿಂಟ್ಸ್‌.
ಪಂದ್ಯಶ್ರೇಷ್ಠ: ಸೈಯದ್‌ ಮಹಮ್ಮದ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.