ADVERTISEMENT

ಪರದಾಡಿದ ಕರ್ನಾಟಕಕ್ಕೆ ಕುನಾಲ್‌ ಆಸರೆ

ರಣಜಿ: ಮಂದ ಬೆಳಕಿನ ಕಾಟ, ನೆರವಾದ ಉತ್ತಪ್ಪ ಆಟ, ಮಿಂಚಿದ ಕೃಷ್ಣಕಾಂತ್‌

ಪ್ರಮೋದ ಜಿ.ಕೆ
Published 21 ಡಿಸೆಂಬರ್ 2014, 20:00 IST
Last Updated 21 ಡಿಸೆಂಬರ್ 2014, 20:00 IST

ನವದೆಹಲಿ: ಮೈಕೊರೆಯುವ ಚಳಿ, ಮಂದಬೆಳಕು ಮತ್ತು ರೈಲ್ವೇಸ್‌ ತಂಡದ ಶಿಸ್ತುಬದ್ಧ ದಾಳಿಯ ಮುಂದೆ ಪರದಾಡಿದ ಕರ್ನಾಟಕ ತಂಡಕ್ಕೆ ಕುನಾಲ್‌ ಕಪೂರ್‌ ಅರ್ಧಶತಕ ಗಳಿಸಿ ಆಸರೆಯಾದರು. ಇದರಿಂದ ಹಾಲಿ ಚಾಂಪಿಯನ್ನರು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾದರು.

ಶನಿವಾರ ಪ್ರಖರವಾದ ಸೂರ್ಯನ ಕಿರಣಗಳು ಚೆಲ್ಲಿದ್ದ ರಾಜಧಾನಿಯಲ್ಲಿ ಭಾನುವಾರ ಮಂದಬೆಳಕಿನ ‘ಆಟ’ವೇ ಹೆಚ್ಚಾಗಿತ್ತು. ಇದರಿಂದ ಪಂದ್ಯ ಒಂದು ಗಂಟೆ 15 ನಿಮಿಷ ತಡವಾಗಿ ಆರಂಭವಾಯಿತು.

ಕರ್ನೈಲ್‌ ಸಿಂಗ್‌ ರೈಲ್ವೆ ಕ್ರೀಡಾಂಗಣದಲ್ಲಿ ‘ಗ್ರೀನ್‌ ಪಿಚ್‌’ ಸಜ್ಜುಗೊಳಿಸಿರುವ ಕಾರಣ ಟಾಸ್‌ ಮುಖ್ಯ
ವಾ­ಗಿತ್ತು. ಟಾಸ್‌ ಗೆದ್ದ ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದರು.

‘ಮೊದಲ ದಿನದಾಟದಲ್ಲಿ ಪಿಚ್ ಬೌಲರ್‌ಗಳಿಗೆ ನೆರವಾಗಲಿದೆ’ ಎಂದು ಕ್ಯೂರೇಟರ್‌ ಸಂಜಯ್‌ ಅಗರವಾಲ್‌ ಶನಿವಾರವೇ ಹೇಳಿದ್ದರು. ಆದರೂ, ವಿನಯ್‌ ಬ್ಯಾಟ್‌ ಮಾಡುವ ನಿರ್ಧಾರ ಕೈಗೊಂಡಿದ್ದು ಅಚ್ಚರಿಗೆ ಕಾರಣವಾಯಿತು. ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 68 ಓವರ್‌ಗಳಲ್ಲಿ 207 ರನ್‌ ಕಲೆ ಹಾಕಿ ಏಳು ವಿಕೆಟ್‌ ಕಳೆದುಕೊಂಡಿತು.

ಬೆಳಿಗ್ಗಿನ ಅವಧಿಯಲ್ಲಿ ಪಿಚ್‌ ಕೊಂಚ ತೇವವಾ ಗಿತ್ತು. ಆದ್ದರಿಂದ ಎಚ್ಚರಿಕೆಯ ಆಟವಾಡುವ ಲೆಕ್ಕಾಚಾರದೊಂದಿಗೆ ಕ್ರೀಸ್‌ಗೆ ಬಂದ ರಾಬಿನ್‌ ಉತ್ತಪ್ಪ ಮತ್ತು ಮಯಂಕ್‌ ಅಗರವಾಲ್‌ ಆರಂಭದಲ್ಲಿ ಒಂದು, ಎರಡು ರನ್‌ಗಳಿಸುವತ್ತ ಮಾತ್ರ ಚಿತ್ತ ಹರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 42 ರನ್‌ ಕಲೆ ಹಾಕಿದ್ದ ವೇಳೆ ವೇಗಿ ಕೃಷ್ಣಕಾಂತ್‌ ಉಪಾಧ್ಯಾಯ 14ನೇ ಓವರ್‌ನಲ್ಲಿ ಮಯಂಕ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಒಂದು ಗಂಟೆ  ಕ್ರೀಸ್‌ನಲ್ಲಿದ್ದು 42 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌ ಏಳು ರನ್‌ಗಳನ್ನಷ್ಟೇ ಗಳಿಸಿದರು. ಆದರೆ, ಒಂದು ಜೀವದಾನ ಪಡೆದ ಉತ್ತಪ್ಪ ಆಟಕ್ಕೆ ಚೆನ್ನಾಗಿ ಬೆಂಬಲ ನೀಡಿದರು. ಮಯಂಕ್‌ ಕ್ರೀಸ್‌ನಿಂದ ಹೊರನಡೆದಾಗ ಉತ್ತಪ್ಪ ಖಾತೆಯಲ್ಲಿ 34 ರನ್‌ಗಳಿದ್ದವು. ನಂತರ ಬಂದ ಕುನಾಲ್‌ ಅನುಭವಿ ಬ್ಯಾಟ್ಸ್‌ಮನ್‌ ಉತ್ತಪ್ಪ ಅವರಿಗೆ ಬ್ಯಾಟ್‌ ಮಾಡಲು ಹೆಚ್ಚು ಅವಕಾಶಗಳನ್ನು ನೀಡಿದರು.

77 ಎಸೆತಗಳನ್ನಾಡಿದ ಉತ್ತಪ್ಪ ಆರು ಬೌಂಡರಿ ಸೇರಿದಂತೆ 40 ರನ್‌ ಗಳಿಸಿದರು. ಅವರು ಹತ್ತು ರನ್‌ ಗಳಿಸಿದ್ದ ವೇಳೆ ರಣಜಿ ಕ್ರಿಕೆಟ್‌ನಲ್ಲಿ ಒಟ್ಟು 5000 ರನ್‌ ಕಲೆ ಹಾಕಿದ ಕೀರ್ತಿಗೆ ಪಾತ್ರರಾದರು. ಈ ಸಾಧನೆ ಮಾಡಿದ ರಾಜ್ಯದ ಮೂರನೇ ಆಟಗಾರ ಎನಿಸಿದರು.

ಜಿ.ಆರ್‌. ವಿಶ್ವನಾಥ್‌ (93 ಪಂದ್ಯಗಳಿಂದ 45.97ರ ಸರಾಸರಿಯಲ್ಲಿ 5655 ರನ್‌) ಮತ್ತು ಬ್ರಿಜೇಶ್ ಪಟೇಲ್‌ (104 ಪಂದ್ಯಗಳಿಂದ 57.00 ಸರಾಸರಿಯಲ್ಲಿ 7126 ರನ್‌) ಮೊದಲು ಈ ಸಾಧನೆ ಮಾಡಿದ್ದರು. ಉತ್ತಪ್ಪ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 6778 ರನ್‌ ಗಳಿಸಿದ್ದಾರೆ.

ಮತ್ತೆ ಆಘಾತ: ಮೂಲತಃ ಉತ್ತರ ಪ್ರದೇಶದವರಾದ ಕೃಷ್ಣಕಾಂತ್‌ ಕರ್ನಾಟಕಕ್ಕೆ ಮತ್ತೊಂದು ಆಘಾತ ನೀಡಿದರು. ಉತ್ತಪ್ಪಗೆ 18ನೇ ಓವರ್‌ನಲ್ಲಿ ಪೆವಿ ಲಿ­ಯನ್‌ ಹಾದಿ ತೋರಿದರು. ನಂತರ ಬಂದ ಮನೀಷ್‌ ಪಾಂಡೆ (19) ಮತ್ತು ಕರುಣ್‌ ನಾಯರ್‌ (14) ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಬಿಡಲಿಲ್ಲ. ಈ ವೇಳೆಗೆ ಕರ್ನಾಟಕ 35 ಓವರ್‌ಗಳಲ್ಲಿ 100 ರನ್‌ ಗಳಿಸಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದು­ಕೊಂಡಿತ್ತು. ಮನೀಷ್‌ ಒಂದೇ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದರಾದರೂ ಬೇಗನೆ ಔಟಾದರು.

ಕಪೂರ್ ಅರ್ಧಶತಕ: ಒಂದೆಡೆ ವಿಕೆಟ್‌ ಉರುಳುತ್ತಿ­ದ್ದರೂ ಕುನಾಲ್‌ ಕಪೂರ್ ಮಾತ್ರ ಬೌಲರ್‌ಗಳಿಗೆ ಹೆದರದೆ ದಿಟ್ಟತನದಿಂದ ಬ್ಯಾಟ್‌ ಬೀಸಿದರು. ಎರಡೂವರೆ ಗಂಟೆ ಕ್ರೀಸ್‌ನಲ್ಲಿದ್ದ ಅವರು ಒಂಬತ್ತು ಬೌಂಡರಿ ಸೇರಿದಂತೆ 53 ರನ್‌ ಗಳಿಸಿದರು. ಇದಕ್ಕಾಗಿ ತೆಗೆದುಕೊಂಡಿದ್ದು 110 ಎಸೆತ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕುನಾಲ್‌ ಗಳಿಸಿದ ಮೂರನೇ ಅರ್ಧಶತಕವಿದು.

ಗೌತಮ್‌ ನೆರವು: ಮೊಣಕಾಲು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗಷ್ಟೇ ಚೇತರಿಸಿಕೊಂಡಿರುವ ಸಿ.ಎಂ. ಗೌತಮ್‌ (ಬ್ಯಾಟಿಂಗ್‌ 31, 60 ಎಸೆತ, 6 ಬೌಂಡರಿ) ಮತ್ತು ಬಂಗಾಳ ಎದುರಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್‌ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದಾರೆ.

ಮಿಂಚಿದ ವೇಗಿಗಳು: ತಳಮಟ್ಟದಲ್ಲಿ ನುಗ್ಗಿ ಬರುತ್ತಿದ್ದ ಚೆಂಡನ್ನು ಅಂದಾಜಿಸಲು ಕರ್ನಾಟಕದ ಬ್ಯಾಟ್ಸ್‌ಮನ್‌ ­ಗಳು ಪರದಾಡಿದರೆ, ರೈಲ್ವೇಸ್‌ ಬೌಲರ್‌ಗಳು ಬೌನ್ಸರ್‌ ಎಸೆದು ಒತ್ತಡ ಹೇರುವ ತಂತ್ರ ಅನುಸರಿಸಿ ದರು. ಕೃಷ್ಣಕಾಂತ್‌ ಮತ್ತು ರಂಜಿತ್‌ ಕೆಲ ಅತ್ಯುತ್ತಮ ಬೌನ್ಸರ್‌ಗಳನ್ನು ಹಾಕಿದರು.

ಮೊದಲ ದಿನ ಉರುಳಿದ ಏಳು ವಿಕೆಟ್‌ಗಳಲ್ಲಿ ಆರು ವಿಕೆಟ್‌ಗಳು ವೇಗದ ಬೌಲರ್‌ಗಳ ಪಾಲಾದವು. ಕೃಷ್ಣಕಾಂತ್‌ (75ಕ್ಕೆ4) ಮತ್ತು ರಂಜಿತ್‌ (43ಕ್ಕೆ2) ವಿಕೆಟ್‌ ಕಬಳಿಸಿದರು. ಎಡಗೈ ಸ್ಪಿನ್ನರ್‌ ವಾರಣಾಸಿಯ ಅವಿನಾಶ್‌ ಯಾದವ್ ಒಂದು ವಿಕೆಟ್‌ ಪಡೆದರು.

ಪುಟಿದೇಳಲಿದೆಯೇ ಕರ್ನಾಟಕ?: ಈ ಸಲದ ರಣಜಿಯ ಮೊದಲ ಪಂದ್ಯದಲ್ಲಿ ತಮಿಳುನಾಡು ಎದುರು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕರ್ನಾಟಕ ನಂತರ ಫಿನಿಕ್ಸ್‌ನಂತೆ ಪುಟಿದೆದ್ದು ಗೆಲುವು ಒಲಿಸಿಕೊಂಡಿತ್ತು. ಡ್ರಾ ಹಾದಿಯಲ್ಲಿ ಸಾಗಿದ್ದ ಬಂಗಾಳ ಎದುರು ಜಯದ ತೋರಣ ಕಟ್ಟಿತ್ತು. ಇಲ್ಲೂ ಅದೇ ರೀತಿ ಆಗಲಿದೆ ಎನ್ನುವ ವಿಶ್ವಾಸ ಕರ್ನಾಟಕ ಆಟಗಾರರದ್ದು.

‘ಹಿಂದಿನ ಪಂದ್ಯಗಳಲ್ಲಿ ಆರಂಭದಲ್ಲಿ ಕುಸಿತ ಕಂಡರೂ ನಂತರ ಹೇಗೆ ಆಡಿದೆವು ಎನ್ನುವುದು ನಿಮಗೆ ಗೊತ್ತೇ ಇದೆ. ಮುಂದಿನ ಎರಡು ದಿನಗಳಲ್ಲಿ ಪಿಚ್‌ಗತಿ ಬದಲಾಗಲಿದೆ’ ಎಂದು ನಾಯಕ ವಿನಯ್‌ ನುಡಿದರು.

ಮಳೆಯ ಭೀತಿ
ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಭಾನುವಾರ ಮೋಡ ಮುಸುಕಿದ ವಾತಾವರಣವಿತ್ತು. ‘ಸೋಮವಾರ ಹಾಗೂ ಮಂಗಳವಾರ ಮಳೆ ಬರುವ ಸಾಧ್ಯತೆಗಳಿವೆ’ ಎಂದು ಹವಾಮಾನ ಇಲಾಖೆಯವರು ಮಾಹಿತಿ ನೀಡಿದ್ದಾಗಿ ರೈಲ್ವೆ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್‌ 68 ಓವರ್‌ಗಳಲ್ಲಿ 207ಕ್ಕೆ7

ರಾಬಿನ್‌ ಉತ್ತಪ್ಪ ಸಿ. ನಿತಿನ್‌ ಭಿಲ್ಲೆ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  40
ಮಯಂಕ್‌ ಅಗರವಾಲ್‌ ಸಿ. ನಿತಿನ್‌ ಭಿಲ್ಲೆ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  07
ಕುನಾಲ್‌ ಕಪೂರ್‌ ಸಿ. ಮಹೇಶ್ ರಾವತ್‌ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  53
ಮನೀಷ್‌ ಪಾಂಡೆ ಸಿ. ಅರ್ಣಬ್‌ ನಂದಿ ಬಿ. ರಂಜಿತ್‌ ಮಾಲಿ  19
ಕರುಣ್‌ ನಾಯರ್‌ ಎಲ್‌ಬಿಡಬ್ಲ್ಯು ಬಿ. ರಂಜಿತ್‌ ಮಾಲಿ  14
ಸ್ಟುವರ್ಟ್‌ ಬಿನ್ನಿ ಸಿ. ಅರಿಂಧಮ್ ಘೋಷ್‌ ಬಿ. ಅವಿನಾಶ್‌ ಯಾದವ್‌  19
ಸಿ.ಎಂ. ಗೌತಮ್‌ ಬ್ಯಾಟಿಂಗ್  31
ಆರ್‌. ವಿನಯ್‌ ಕುಮಾರ್‌ ಸಿ. ಅರ್ಣಬ್‌ ನಂದಿ ಬಿ. ಕೃಷ್ಣಕಾಂತ್‌
ಉಪಾಧ್ಯಾಯ  09
ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌  14
ಇತರೆ: (ಲೆಗ್‌ ಬೈ-1)  01
ವಿಕೆಟ್‌ ಪತನ: 1-42 (ಮಯಂಕ್‌; 13.5), 2-53 (ಉತ್ತಪ್ಪ; 17.3), 3-80 (ಪಾಂಡೆ; 22.6), 4-100 (ಕರುಣ್‌; 34.6), 5-153 (ಕಪೂರ್‌; 48.2), 6-161 (ಬಿನ್ನಿ; 49.1), 7-174 (ವಿನಯ್‌; 56.5)
ಬೌಲಿಂಗ್‌: ಅನುರೀತ್‌ ಸಿಂಗ್‌ 25-6-68-0, ಕೃಷ್ಣಕಾಂತ್‌ ಉಪಾಧ್ಯಾಯ 24-6-75-4, ರಂಜಿತ್‌ ಮಾಲಿ 14-3-43-2, ಅವಿನಾಶ್‌ ಯಾದವ್‌ 5-0-20-1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT