ADVERTISEMENT

ಪಿಂಕ್‌ ಪ್ಯಾಂಥರ್ಸ್‌ ಜಯಭೇರಿ

ಪ್ರೊ ಕಬಡ್ಡಿ ಲೀಗ್‌: ಪಟ್ನಾ ಪೈರೇಟ್ಸ್‌–‍ಬೆಂಗಾಲ್‌ ವಾರಿಯರ್ಸ್‌ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:30 IST
Last Updated 2 ಆಗಸ್ಟ್ 2015, 19:30 IST

ಪಟ್ನಾ (ಪಿಟಿಐ):  ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಭಾನುವಾರ ಜಯ ದಾಖಲಿಸಿತು. ತಂಡವು ಈ ಟೂರ್ನಿಯಲ್ಲಿ ಗಳಿಸಿದ ಎರಡನೇ ಗೆಲುವು.

ಪಾಟಲೀಪುತ್ರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಿಂಕ್‌ ಪ್ಯಾಂಥರ್ಸ್‌ ತಂಡವು 35–29ರಿಂದ ಪುಣೇರಿ ಪಲ್ಟನ್ಸ್‌ ವಿರುದ್ಧ ಜಯಿಸಿತು.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜೈಪುರ ತಂಡವು ಮೊದಲರ್ಧದಲ್ಲಿ 19–13ರ ಮುನ್ನಡೆ ಸಾಧಿಸಿತ್ತು. ನಂತರದ ಅವಧಿಯಲ್ಲಿಯೂ ತನ್ನ ಪ್ರಾಬಲ್ಯ ಮುಂದುವರಿಸಿತು. ಇದರೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡವು ಮತ್ತೆ ಗೆಲುವಿನ ಹಾದಿಗೆ ಮರಳಿತು.

ಟೂರ್ನಿಯಲ್ಲಿ 13 ಅಂಕಗಳನ್ನು ಗಳಿಸಿದ ಜೈಪುರ ತಂಡವು ಆರನೇ ಸ್ಥಾನಕ್ಕೇರಿತು. ಹತ್ತು ಅಂಕ ಗಳಿಸಿರುವ ಪುಣೇರಿ ನಂತರದ ಸ್ಥಾನದಲ್ಲಿದೆ.

ಭಾನುವಾರದ ಪಂದ್ಯದಲ್ಲಿ ಎರಡೂ ತಂಡಗಳು ಕೆಲವು ಆಟಗಾರರ ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದವು. ಪುಣೇರಿ ತಂಡದ ನಾಯಕ ವಜೀರ್ ಸಿಂಗ್  ಬದಲಿಗೆ ಪ್ರವೀಣ್ ನಿವಾಳೆ ತಂಡವನ್ನು ಮುನ್ನಡೆಸಿದರು.  ತಂಡದ ಕೋಚ್ ಅಶೋಕ್ ಶಿಂಧೆ ಅವರ ಸೂಚನೆಯಿಂದ ತುಷಾರ ಪಾಟೀಲ ಅಂಕಣಕ್ಕೆ ಇಳಿದಿದ್ದು ತಂಡಕ್ಕೆ ನೆರವಾಯಿತು.

ಜೈಪುರ ತಂಡವು ನವನೀತ್ ಗೌತಮ್ ಅವರನ್ನು ಆರಂಭದಲ್ಲಿ ಕಣಕ್ಕೆ ಇಳಿಸಿತ್ತು. ಆದರೆ, ಮೊದಲ ಕ್ವಾರ್ಟರ್‌ ನಂತರ ಅವರನ್ನು ಆಡಿಸಲಿಲ್ಲ.  ಸೋನು ನರ್ವಾಲ್ ತಮ್ಮ ಚುರುಕಿನ ದಾಳಿಯ ಮೂಲಕ ತಂಡವು 7–4ರ ಮುನ್ನಡೆ ಸಾಧಿಸಲು ಕಾರಣರಾದರು. ಜಸ್ವೀರ್ ಮೂರು ರೇಡ್‌ಗಳಲ್ಲಿ ಮೂವರನ್ನು ಔಟ್ ಮಾಡಿದರು. ಪ್ಯಾಂಥರ್ಸ್‌ ತಂಡವು ಎದುರಾಳಿ ಪಾಳಯವನ್ನು ಆಲ್‌ಔಟ್ ಮಾಡುವ ಹಂತದಲ್ಲಿತ್ತು. ಆಗ ಪುಣೇರಿ ತಂಡದ ಪ್ರವೀಣ್ ಈ ಪ್ರಯತ್ನವನ್ನು ವಿಫಲಗೊಳಿಸಿದರು. ಒಂದೇ ರೈಡ್‌ನಲ್ಲಿ ಒಂದು ಬೋನಸ್ ಪಾಯಿಂಟ್ ಮತ್ತು ಒಬ್ಬ ಎದುರಾಳಿಯನ್ನು ಔಟ್ ಮಾಡಿದರು.  

ಈ ಹಂತದಲ್ಲಿ ಪುಣೇರಿ ತಂಡವು 8–11ರ ಹಿನ್ನಡೆಯಲ್ಲಿತ್ತು. ಜಸ್ವೀರ್ ದಾಳಿ  ಮತ್ತು ಅಮಿತ್  ಅವರ ಬಿಗಿ ಹಿಡಿತದ ಟ್ಯಾಕ್ಲಿಂಗ್‌ನಿಂದಾಗಿ ಜೈಪುರ ತನ್ನ ಮುನ್ನಡೆಯನ್ನು 15–10ಕ್ಕೆ ಹೆಚ್ಚಿಸಿಕೊಂಡಿತು.

ಜಸ್ವೀರ್ 12 ರೇಡ್‌ಗಳಲ್ಲಿ ಏಳು ಅಂಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.  ಸೋನು ನರ್ವಾಲ್ ತಮ್ಮ 12 ರೇಡ್‌ಗಳಲ್ಲಿ ಏಳು ಅಂಕ ಗಳಿಸಿ ಗಮನ ಸೆಳೆದರು.

ಪುಣೆ ತಂಡದ ಪ್ರವೀಣ್, ಬದಲಿ ಆಟಗಾರ ಮಹಿಪಾಲ್ ನರ್ವಾಲ್ ಮತ್ತು  ಸಂಜಯಕುಮಾರ್ ತಲಾ ಮೂರು ಅಂಕ ಗಳಿಸಿದರು. 

ಡ್ರಾ ಪಂದ್ಯದಲ್ಲಿ ಪಟ್ನಾ: ಆತಿಥೇಯ ಪಟ್ನಾ ಪೈರೆಟ್ಸ್‌ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವೆ ನಡೆದ ರೋಚಕ ಪಂದ್ಯವು ಡ್ರಾ ದಲ್ಲಿ ಮುಕ್ತಾಯವಾಯಿತು. ಉಭಯ ತಂಡಗಳು 20–20 ಅಂಕಗಳ ಸಮಬಲ ಸಾಧಿಸಿದವು.

ಎರಡೂ ತಂಡಗಳು ಆರಂಭದಿಂದಲೂ ಸಮಬಲದ ಹೋರಾಟ ನಡೆಸಿದವು. ಬದಲಿ ಆಟಗಾರ ಗುರೀಂದರ್ ಸಿಂಗ್ ಐದು ಅಂಕ ಪಡೆದರು. ಸುನಿಲ್ ಕುಮಾರ್ ಒಟ್ಟು 4 ಅಂಕ  ಗಳಿಸಿದರು. ಅಮಿತ್ ಹೂಡಾ ಮತ್ತು ರವಿ ದಲಾಲ್ ತಲಾ ಮೂರು, ದೀಪಕ್ ನರ್ವಾಲ್ ಎರಡು ಅಂಕ ಗಳಿಸಿದರು.

ಬೆಂಗಾಲ್ ತಂಡದ ವಿನೀತ್ ಶರ್ಮಾ ಮತ್ತು ಜಾಂಗ್ ಕುನ್ ಲೀ ತಲಾ ನಾಲ್ಕು ಅಂಕ ಗಳಿಸಿದರು. ವಿಜಿನ್ ತಂಗದುರೈ, ಸಚಿನ್ ಕಾಂಬೆ ತಲಾ ಎರಡು ಅಂಕ ಗಳಿಸಿದರು. 

ಪ್ರೊ ಕಬಡ್ಡಿ ಲೀಗ್‌ ಪಾಯಿಂಟ್ಸ್‌ ಪಟ್ಟಿ

ಸ್ಥಾನ            ತಂಡ                   ಪಂದ್ಯ        ಗೆಲುವು     ಸೋಲು    ಪಾಯಿಂಟ್‌
01          ಯು ಮುಂಬಾ                7               7           0            35
02        ತೆಲುಗು ಟೈಟಾನ್ಸ್‌            7               5            2           26
03       ಬೆಂಗಳೂರು ಬುಲ್ಸ್‌            7               5            2           25
04        ಪಟ್ನಾ ಪೈರೇಟ್ಸ್‌               7               4           3            20
05        ದಬಾಂಗ್‌ ಡೆಲ್ಲಿ                 7               3           4            16
06    ಜೈಪುರ ಪಿಂಕ್‌ ಪ್ಯಾಂಥರ್ಸ್‌     7                2           5            13
07     ಬಂಗಾಳ ವಾರಿಯರ್ಸ್          7                1           6             11
08      ಪುಣೇರಿ ಪಲ್ಟನ್‌‌                  7               1           6             10

ADVERTISEMENT


ಸೋಮವಾರ ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಮಂಗಳವಾರದ ಪಂದ್ಯಗಳ ವಿವರ ಇಂತಿದೆ.

ಜೈಪುರ ಪಿಂಕ್‌ ಪ್ಯಾಂಥರ್ಸ್‌–ತೆಲುಗು ಟೈಟಾನ್ಸ್‌
ಸ್ಥಳ: ಹೈದರಾಬಾದ್‌
ಆರಂಭ: ರಾತ್ರಿ8ಕ್ಕೆ
ಯು ಮುಂಬಾ–ದಬಾಂಗ್‌ ಡೆಲ್ಲಿ
ಆರಂಭ: ರಾತ್ರಿ 9ಕ್ಕೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.