ADVERTISEMENT

ಪೇಸ್–ಬೋಪಣ್ಣ ವೈಫಲ್ಯ ನಿರೀಕ್ಷಿತ: ಭೂಪತಿ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಮುಂಬೈ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರು ಜೊತೆಯಾಗಿ ಯಾವುದೇ ಪಂದ್ಯ ಆಡದೇ ಮತ್ತು ಅಭ್ಯಾಸವನ್ನೂ ಮಾಡದೇ ಒಲಿಂಪಿಕ್ಸ್‌ಗೆ ಹೋಗಿದ್ದು ಹಿನ್ನಡೆಗೆ ಕಾರಣವಾಯಿತು ಎಂದು ಟೆನಿಸ್ ಆಟಗಾರ ಮಹೇಶ್ ಭೂಪತಿ ಹೇಳಿದ್ದಾರೆ.

ಪೇಸ್ ಮತ್ತು ಬೋಪಣ್ಣ ಅವರು ರಿಯೊ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ ನ ಮೊದಲ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದ್ದರು.  ಈ ಕುರಿತು ಭೂಪತಿ  ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿ ಸಿದರು. ಅವರು ಇಲ್ಲಿಯ ಖಾರ್ ಜಿಮ್‌ಖಾನಾದಲ್ಲಿ ನಡೆದ  ಮಹಾರಾಷ್ಟ್ರ ಟೇಬಲ್ ಟೆನಿಸ್ ಟೂರ್ನಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಒಲಿಂಪಿಕ್ಸ್‌ಗೆ ಪುರುಷರ ಡಬಲ್ಸ್ ತಂಡವು ಸಂಪೂರ್ಣ ಸಿದ್ಧತೆಯಿಂದ ಹೋಗಿರಲಿಲ್ಲ. 2004 ಮತ್ತು 2008ರ ಒಲಿಂಪಿಕ್ಸ್‌ಗಳ ಸಂದರ್ಭದಲ್ಲಿ ನಾನು ಮತ್ತು ಪೇಸ್ ಜೊತೆಗೂಡಿ ಅಭ್ಯಾಸ ಮಾಡಿರಲಿಲ್ಲ. ಆದರೆ, ಒಲಿಂಪಿಕ್ಸ್‌ಗೆ ಹೋಗುವ ಮುನ್ನ ಇಬ್ಬರೂ ಜೊತೆ ಯಾಗಿ ಕೆಲವು ಟೂರ್ನಿಗಳಲ್ಲಿ ಆಡಿದ್ದೆವು’ ಎಂದು ಭೂಪತಿ ನೆನಪಿಸಿಕೊಂಡರು.

‘ನಾನು ಮತ್ತು ಪೇಸ್ ಜೊತೆಗೂಡಿ ಎಟಿಪಿ ಟೂರ್‌ಗಳಲ್ಲಿ  ಮುನ್ನೂರು  ಡಬಲ್ಸ್‌ ಪಂದ್ಯಗಳಲ್ಲಿ ಗೆದ್ದಿದ್ದೇವೆ.  ಆದರೆ, ರೋಹನ್ ಮತ್ತು ಪೇಸ್ ಒಲಿಂಪಿಕ್ಸ್‌ಗೂ ಮುನ್ನ ಡೇವಿಸ್‌ ಕಪ್‌ ಟೂರ್ನಿಯಲ್ಲಿ ಆಡಿದ್ದು ಒಂದೇ ಪಂದ್ಯ.

ಅದರಿಂದ ಎಷ್ಟು ಪ್ರಯೋಜನ ಸಿಗಲು ಸಾಧ್ಯ? ಆದ್ದರಿಂದ ಅವರಿಂದ ಪದಕದ ನಿರೀಕ್ಷೆ ಮಾಡುವಂತೆಯೇ ಇರಲಿಲ್ಲ. ಆದರೆ, ಮಿಶ್ರ ಡಬಲ್ಸ್‌ನಲ್ಲಿ ಪದಕ ಸಾಧನೆ ಸಾಧ್ಯವಿತ್ತು.  ಆದರೆ, ಪದಕದ ಸನಿಹ ಬಂದಿದ್ದ ಜೋಡಿಗೆ ದುರದೃಷ್ಟ ಕಾಡಿತ್ತು’ ಎಂದು 42 ವರ್ಷದ ಭೂಪತಿ ಅಭಿಪ್ರಾಯಪಟ್ಟರು.

ಪೇಸ್ ಮತ್ತು ಬೋಪಣ್ಣ ಜೊಡಿಯ ಆಯ್ಕೆಯ ಸುತ್ತ ನಡೆದ ವಿವಾದದ ಬಗ್ಗೆ ಮಹೇಶ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.