ADVERTISEMENT

ಪ್ಯಾಂಥರ್ಸ್‌ ಗೆಲುವಿನ ನಗೆ

ಕೆಪಿಎಲ್‌ : ಬ್ಯಾಟಿಂಗ್‌ನಲ್ಲಿ ಮಿಂಚಿದ ವಿನಯ್‌, ಜೊನಾಥನ್‌

ವಿಕ್ರಂ ಕಾಂತಿಕೆರೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಹುಬ್ಬಳ್ಳಿ: ನಿಧಾನವೇ ಪ್ರಧಾನ ತತ್ವಕ್ಕೆ ಮೊರೆ ಹೋದ ಬೆಳಗಾವಿ ಪ್ಯಾಂಥರ್ಸ್‌ ತಂಡ ಕರ್ನಾಟಕ ಪ್ರೀಮಿಯರ್‌ ಲೀಗ್‌  ಟ್ವೆಂಟಿ – ಟ್ವೆಂಟಿ ಕ್ರಿಕೆಟ್‌ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಈ ತಂಡ ಮಂಗಳೂರು ಯುನೈಟೆಡ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು.

142 ರನ್‌ಗಳ ಗುರಿಯ ಬೆನ್ನತ್ತಿದ ತಂಡ 22 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ತಂಡವನ್ನು ಕಾಪಾಡುವ ಜವಾಬ್ದಾರಿಯನ್ನು ನಾಯಕ ವಿನಯ ಕುಮಾರ್ ಹೊತ್ತುಕೊಂಡರು. ಅರ್ಧ ಶತಕ (64; 50 ಎಸೆತ, 6 ಬೌಂ) ಗಳಿಸಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯಶ್ರೇಷ್ಠ ಪ್ರಶ ಸ್ತಿಯೂ ಅವರ ಪಾಲಾಯಿತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯ ಕನಿಗೆ ಉತ್ತಮ ಸಹಕಾರ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆರ್‌. ಜೊನಾಥನ್‌ (62; 43 ಎಸೆತ, 4 ಸಿಕ್ಸರ್‌, 3 ಬೌಂಡರಿ) ಕೂಡ ಅರ್ಧ ಶತಕ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 87 ಎಸೆತಗಳಲ್ಲಿ ಸೇರಿಸಿದ 122 ರನ್‌ ತಂಡದ ಸುಲಭ ಜಯಕ್ಕೆ ಕಾರಣವಾಯಿತು.

ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ರೋನಿತ್‌ ಮೋರೆ ಎಸೆತವನ್ನು ಥರ್ಡ್‌ ಮ್ಯಾನ್‌ ಮೂಲಕ ಬೌಂಡರಿಗೆ ಅಟ್ಟಿದ ಅಭಿಷೇಕ್ ರೆಡ್ಡಿ ಮೂರನೇ ಎಸೆತವನ್ನು ಸ್ಟಿಯರ್‌ ಮಾಡಲು ಪ್ರಯತ್ನಿಸಿ ಸ್ಲಿಪ್‌ನ ಲ್ಲಿದ್ದ ಕರುಣ್‌ ನಾಯರ್‌ಗೆ ಕ್ಯಾಚ್‌ ನೀಡಿ ದರು. ಸ್ಫೋಟಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ ನಾಲ್ಕನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್‌ ಮಿತ್ರಕಾಂತ ಯಾದವ್‌ ಎಸೆತದಲ್ಲಿ ಕರುಣ್‌ ನಾಯರ್‌ಗೆ ಕ್ಯಾಚ್‌ ನೀಡಿದರು.

ಈ ಸಂದರ್ಭದಲ್ಲಿ ಜೊತೆಗೂಡಿದ ವಿನಯ್‌ ಮತ್ತು ಜೊನಾಥನ್‌ ಜೊತೆ ಯಾಟ ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿತು. ಬಿ.ಎನ್‌.ಭರತ್‌ ಹಾಕಿದ ಆರನೇ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಇನ್ನಿಂಗ್ಸ್‌ಗೆ ಜೊನಾಥನ್‌ ಕಳೆ ತುಂಬಿದರು. ಆದರೆ ನಂತರ ಈ ಜೋಡಿ ತಾಳ್ಮೆಯ ಬ್ಯಾಟಿಂಗ್‌ಗೆ ಮೊರೆ ಹೋದರು. ತಂಡದ ಗೆಲುವಿಗೆ ಐದು ಓವರ್‌ಗಳಲ್ಲಿ 41 ರನ್‌ ಬೇಕಾಗಿದ್ದಾಗ ಇಬ್ಬರೂ ಭಾರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

16ನೇ ಓವರ್‌ನ ಮೂರನೇ ಎಸೆತದಲ್ಲಿ ಒಂಟಿ ರನ್‌ ಗಳಿಸಿ ವಿನಯ್‌ ಅರ್ಧ ಶತಕ ಪೂರೈಸಿದರು. ಈ ಓವರ್‌ನ ಐದನೇ ಎಸೆತವನ್ನು ಮಿಡ್‌ ಆನ್‌ ಮತ್ತು ಮಿಡ್‌ ವಿಕೆಟ್‌ ಮಧ್ಯದಲ್ಲಿ ಸಿಕ್ಸರ್‌ಗೆ ಎತ್ತಿದ ಜೊನಾಥನ್‌ ಮುಂದಿನ ಓವರ್‌ನಲ್ಲಿ ನೇರ ಹೊಡೆತದ ಮೂಲಕ ಬೌಂಡರಿ ಬಾರಿಸಿ ಅರ್ಧಶತಕ ಗಳಿಸಿದರು. 18ನೇ ಓವರ್‌ನ ಮೂರನೇ ಎಸೆತದಲ್ಲಿ ಮಿಡ್‌ ಆನ್‌ ಮೂಲಕ ಸಿಕ್ಸರ್‌ ಬಾರಿಸಿದ ಅವರು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವಿನ ನಗೆ ಸೂಸಿದರು. ಆಫ್‌ಸೈಡ್‌ ನಲ್ಲಿ ಹೆಚ್ಚು ರನ್‌ ಕದ್ದ ವಿನಯ ಕುಮಾರ್‌ ಕಟ್‌ ಶಾಟ್‌ ಮತ್ತು ಕವರ್‌ಡ್ರೈವ್‌ಗಳ ಮೂಲಕ ಮಿಂಚಿದರು.    

ಅವಿನಾಶ – ಬ್ರಾರ್‌ ಆಸರೆ:  ಮಂಗ ಳೂರು ಯನೈಟೆಡ್‌ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಅಜೇಯ ಅರ್ಧ ಶತಕ ಗಳಿಸಿದ ಕೆ,ಸಿ.ಅವಿನಾಶ್‌ (50; 53 ಎಸೆತ, 5 ಬೌಂಡರಿ) ನಾಯಕ ಕರುಣ್‌ ನಾಯರ್‌ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆರ್ಶದೀಪ್‌ ಸಿಂಗ್ ಬ್ರಾರ್‌ ಅವರೊಂದಿಗೆ ಪ್ರದರ್ಶಿ ಸಿದ ಉತ್ತಮ ಜೊತೆಯಾಟಗಳು ಮಂಗಳೂರು ಯುನೈಟೆಡ್‌ ಇನ್ನಿಂಗ್ಸ್‌ನ ಹೈಲೈಟ್ಸ್‌.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಮಂಗಳೂರು ತಂಡ ಪಂದ್ಯದ ಎರಡನೇ ಎಸೆತದಲ್ಲೇ ನಾಯಕನನ್ನು ಕಳೆದು ಕೊಂಡು ಆಘಾತಕ್ಕೊಳಗಾಯಿತು. ಮಧ್ಯಮ ವೇಗಿ ಸ್ಟಾಲಿನ್‌ ಹೂವರ್ ಹಾಕಿದ ಎಸೆತವನ್ನು ಲಾಫ್ಟ್‌ ಮಾಡಲು ಯತ್ನಿಸಿದ ರೋಹಿತ್‌ ಸಬರವಾಲ್‌ ಬೌಲರ್‌ಗೆ ಸುಲಭ ಕ್ಯಾಚ್‌ ನೀಡಿ ಮರಳಿದರು. ಆಗ ತಂಡದ ಖಾತೆಯಲ್ಲಿ ದ್ದದ್ದು ವೈಡ್ ಮೂಲಕ ಬಂದ ಒಂದು ರನ್‌ ಮಾತ್ರ. ಮೂರನೇ ಓವರ್‌ನಲ್ಲಿ ತಂಡದ ಮೊತ್ತ 13 ಆಗಿದ್ದಾಗ ಸ್ಥಳೀಯ ಹುಡುಗ ಶಿಶಿರ್‌ ಭವಾನೆ ಕೂಡ ಔಟಾದರು. ಹೂವರ್‌ ಎಸೆತವನ್ನು ಡ್ರೈವ್‌ ಮಾಡಲು ಯತ್ನಿಸಿದ ಶಿಶಿರ್‌ ಶಾರ್ಟ್‌ ಕವರ್‌ನಲ್ಲಿದ್ದ ಆರ್‌. ಜೊನಾಥನ್‌ ಮುಷ್ಠಿಯಲ್ಲಿ ಬಂಧಿಯಾದರು.

ಅಬ್ಬರದ ಬ್ಯಾಟಿಂಗ್‌ ಮಾಡಿದ ಕರುಣ್‌ , ಮಿಥುನ್‌ ಮೂಲ್ಕಿ ಎಸೆತದಲ್ಲಿ ಸಿಕ್ಸರ್‌ಗೆ ಅಟ್ಟಿದ ಚೆಂಡು ಚಿಯರ್‌ ಗರ್ಲ್ಸ್‌ ಸ್ಟ್ಯಾಂಡ್‌ ಮೇಲೆ ಬಿದ್ದಿತು. ನೇರ ಹೊಡೆತಗಳ ಮೂಲಕ ಮಿಂಚಿದ ಬ್ರಾರ್‌ ಅವರ ಎರಡು ಸಿಕ್ಸರ್‌ಗಳ ಪೈಕಿ ಒಂದು ಸೈಟ್‌ ಸ್ಕ್ರೀನ್‌ ಬುಡಕ್ಕೆ ಬಿದ್ದಿತ್ತು.

ಸಂಕ್ಷಿಪ್ತ ಸ್ಕೋರ್‌:   ಮಂಗಳೂರು ಯುನೈಟೆಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 141 (ಕರುಣ್‌ ನಾಯರ್‌ 38, ಕೆ.ಸಿ.ಅವಿನಾಶ್ 50, ಆರ್ಶದೀಪ್‌ ಸಿಂಗ್‌ ಬ್ರಾರ್‌ 36; ಸ್ಟಾಲಿನ್‌ ಹೂವರ್‌ 20ಕ್ಕೆ 2, ವಿನಯ ಕುಮಾರ್‌ 33ಕ್ಕೆ1, ನಿತಿನ್‌ ಮುಲ್ಕಿ 24ಕ್ಕೆ 1);     ಬೆಳಗಾವಿ ಪ್ಯಾಂಥರ್ಸ್‌: 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 144 (ವಿನಯ ಕುಮಾರ್‌ 64, ಆರ್‌.ಜೊನಾಥನ್‌ 62; ರೋನಿತ್‌ ಮೋರೆ 29ಕ್ಕೆ1, ಮಿತ್ರಕಾಂತ 23ಕ್ಕೆ1).

ಫಲಿತಾಂಶ:  ಬೆಳಗಾವಿ ಪ್ಯಾಂಥರ್ಸ್‌ಗೆ 8 ವಿಕೆಟ್‌ಗಳ ಜಯ.

ಇಂದಿನ ಪಂದ್ಯಗಳು
ಬಿಜಾಪುರ ಬುಲ್ಸ್‌ – ಬಳ್ಳಾರಿ ಟಸ್ಕರ್ಸ್‌ (ಮಧ್ಯಾಹ್ನ 1.30)
ಹುಬ್ಬಳ್ಳಿ ಟೈಗರ್ಸ್‌ – ರಾಕ್‌ ಸ್ಟಾರ್ಸ್‌ (ಸಂಜೆ 5.30)
ನೇರ ಪ್ರಸಾರ ಸೋನಿ ಸಿಕ್ಸ್‌

ADVERTISEMENT

**********

ಚಾಂಪಿಯನ್‌ ತಂಡಕ್ಕೆ ಪೆಟ್ಟು
ಬೌಲಿಂಗ್‌ನಲ್ಲಿ ಮಿಂಚಲು ಸಾಧ್ಯ ವಾಗದಿದ್ದರೂ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶಿಸಿದ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ (ಅಜೇಯ 49; 30 ಎಸೆತ, 1 ಸಿಕ್ಸರ್‌, 7 ಬೌಂಡರಿ) ಕೆಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ‘ನಮ್ಮ ಶಿವಮೊಗ್ಗ’ ತಂಡಕ್ಕೆ ಜಯ ತಂದುಕೊಟ್ಟರು.

ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಕಳೆದ ಬಾರಿಯ ಚಾಂಪಿ ಯನ್‌ ಮೈಸೂರು ವಾರಿಯರ್ಸ್‌ ಅನ್ನು ಆರು ವಿಕೆಟ್‌ಗಳಿಂದ ಮಣಿ ಸಿತು. 161 ರನ್‌ಗಳ ಗುರಿ ಬೆಂಬತ್ತಿದ ತಂಡ ಇನ್ನೂ 4 ಎಸೆತ ಬಾಕಿ ಇರುವಾಗ ಜಯದ ನಗೆ ಸೂಸಿತು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 160 (ಅರ್ಜುನ್‌ ಹೊಯ್ಸಳ 44, ಮನೀಷ್‌  ಪಾಂಡೆ 26, ಮಂಜೇಶ್‌ ರೆಡ್ಡಿ 45, ಗೌತಮ್‌ ಕೆ 26; ಭಾವೇಶ್‌ ಗುಲೇಚಾ 34ಕ್ಕೆ 1,  ಅಬ್ರಾರ್‌ ಖಾಜಿ 18ಕ್ಕೆ 1, ಸಿನಾನ್‌ ಅಬ್ದುಲ್‌ ಖಾದರ್‌ 35ಕ್ಕೆ 2); ನಮ್ಮ ಶಿವಮೊಗ್ಗ: 19.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 161 (ಸಾದಿಕ್‌ ಕಿರ್ಮಾನಿ 29, ಅಬ್ರಾರ್‌ ಖಾಜಿ 21, ಮಿರ್‌ ಕೌನೇನ್ ಅಬ್ಬಾಸ್‌ 26, ಸ್ಟುವರ್ಟ್‌ ಬಿನ್ನಿ 25, ಶ್ರೇಯಸ್‌ ಗೋಪಾಲ್‌ 49; ಸಿ.ಕೆ. ಅಕ್ಷಯ್‌ 13ಕ್ಕೆ1, ಶಾಂತರಾಜು 35ಕ್ಕೆ 2).
ಫಲಿತಾಂಶ: ನಮ್ಮ ಶಿವಮೊಗ್ಗ ತಂಡಕ್ಕೆ  6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.