ADVERTISEMENT

ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಗುಡುಗು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST
ಕ್ರೀಡಾ ಸಚಿವ ಅಭಯ ಚಂದ್ರ ಜೈನ್‌ ಅವರು ಮಂಗಳವಾರ ಪ್ರತಿಭಟನಾ ನಿರತ ಕೋಚ್‌ಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕ ಎಚ್‌.ಎಂ. ರೇವಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್‌, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ  ಕೆ. ಗೋವಿಂದರಾಜ್‌ ಇದ್ದರು  ಪ್ರಜಾವಾಣಿ ಚಿತ್ರ
ಕ್ರೀಡಾ ಸಚಿವ ಅಭಯ ಚಂದ್ರ ಜೈನ್‌ ಅವರು ಮಂಗಳವಾರ ಪ್ರತಿಭಟನಾ ನಿರತ ಕೋಚ್‌ಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಶಾಸಕ ಎಚ್‌.ಎಂ. ರೇವಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್‌, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್‌ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕೋಚ್‌ಗಳು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನವೂ ಮುಂದುವರಿಯಿತು.

ಕೋಚ್‌ಗಳು ಮಂಗಳವಾರ ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ‘ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಆಸಕ್ತಿ ಹೊಂದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಸಮಸ್ಯೆಗಳು ಮತ್ತಷ್ಟು ಕಗ್ಗಂಟಾಗುತ್ತಿವೆ’ ಎಂದೂ ದೂರಿದರು.

ಕೆ.ಜಿ. ರಸ್ತೆಯಲ್ಲಿರುವ ಬನ್ನಪ್ಪ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕ್ರೀಡಾ ಸಚಿವ ಅಭಯ ಚಂದ್ರ ಜೈನ್‌, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್‌, ಶಾಸಕ ಎಚ್‌.ಎಂ. ರೇವಣ್ಣ  ಸೇರಿದಂತೆ ಹಲವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

‘ಈ ಸಮಸ್ಯೆಯನ್ನು ನಾನೊಬ್ಬನೇ ಪರಿಹರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಅಭಯಚಂದ್ರ ಜೈನ್‌ ಭರವಸೆ ನೀಡಿದ್ದಾರೆ ಎಂದು ಕೋಚ್‌ಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಟಗಾರರಿಗೆ ಉತ್ತಮ ತರಬೇತಿ ನೀಡಿ ಅವರನ್ನು ಬಲಿಷ್ಠಗೊಳಿಸುವುದು ನಮ್ಮ ಕೆಲಸ. ಇದೇ ಉದ್ದೇಶಕ್ಕಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರ (ಸ್ಯಾಕ್‌ ) ಆರಂಭಿಸಲಾಯಿತು. ಆದರೆ, ಈಗ ಮೂಲ ಉದ್ದೇಶವೇ ಮರೆಯಾಗಿದೆ. ರಜೆ ದಿನಗಳನ್ನೂ ಲೆಕ್ಕಿಸದೇ ಕೆಲಸ ಮಾಡುತ್ತೇವೆ. ನಮಗೆ ನೌಕರಿ ಭದ್ರತೆ ಬೇಡವೇ ಎಂದು’ ಎಂದು ಸ್ಯಾಕ್‌  ಕ್ರಿಕೆಟ್‌ ಕೋಚ್‌ ಸಿ.ಜಿ. ರಮೇಶ್‌ ಪ್ರಶ್ನಿಸಿದದರು. ಕೋಚ್‌ಗಳು ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಸ್ಯಾಕ್‌ ಕೋಚ್‌ಗಳು ಇಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಕಾರಣ ಕೆಲವೆಡೆ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಸೂರು ಮತ್ತು ದಾವಣಗೆರೆಯಲ್ಲಿ ‘ಕೋಚ್‌ ಇಲ್ಲದೇ ನಾವು ಹೇಗೆ ಅಭ್ಯಾಸ ನಡೆಸಬೇಕು’ ಎಂದು ಕ್ರೀಡಾಪಟುಗಳು ಪ್ರತಿಭಟನೆಯನ್ನೂ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.