ADVERTISEMENT

ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇರಿಸಿದ ಸಿರಿಲ್‌ ವರ್ಮಾ

ಚೀನಾ ತೈಪೆ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿ; ಶ್ರೀಕೃಷ್ಣಪ್ರಿಯಾಗೆ ಜಯ

ಪಿಟಿಐ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಸಿರಿಲ್ ವರ್ಮಾ ಅವರ ಆಟದ ಭಂಗಿ.
ಸಿರಿಲ್ ವರ್ಮಾ ಅವರ ಆಟದ ಭಂಗಿ.   

ತೈಪೆ: ಉದಯೋನ್ಮುಖ ಆಟಗಾರ ಸಿರಿಲ್‌ ವರ್ಮಾ ಅವರು ಚೀನಾ ತೈಪೆ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಶ್ರೀಕೃಷ್ಣಪ್ರಿಯಾ ಕುದರವಳ್ಳಿ ಅವರು 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿರಿಲ್‌ 16–21, 21–17, 21–17ರಲ್ಲಿ ಚೀನಾ ತೈಪೆಯ ಚಿಯಾ ಹಾವೊ ಲೀ ಅವರನ್ನು ಪರಾಭವ ಗೊಳಿಸಿದರು.

2015ರಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಲ್ಲಿ ಬೆಳ್ಳಿ ಗೆದ್ದಿದ್ದ ಸಿರಿಲ್‌ ಅವರು ಮೊದಲ ಗೇಮ್‌ನಲ್ಲಿ ಗುಣಮಟ್ಟದ ಆಟ ಆಡಲು ವಿಫಲರಾದರು. ತವರಿನ ಅಭಿ ಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿ ದಿದ್ದ ಚಿಯಾ ಹಾವೊ ಅವರು ಆಕ್ರಮಣಕಾರಿ ಆಟದ ಮೂಲಕ ಪಾಯಿಂಟ್ಸ್‌ ಹೆಕ್ಕಿ ಭಾರತದ ಆಟಗಾರನ ಸವಾಲು ಮೀರಿನಿಂತರು.

ADVERTISEMENT

ಆರಂಭಿಕ ನಿರಾಸೆಯಿಂದ ಸಿರಿಲ್‌ ಎದೆಗುಂದಲಿಲ್ಲ. ಹೋದ ವರ್ಷ ನಡೆದಿದ್ದ ರಷ್ಯಾ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಅವರು ಎರಡನೇ ಗೇಮ್‌ನಲ್ಲಿ ಭಿನ್ನ ರಣನೀತಿ ಹೆಣೆದು ಅಂಗಳಕ್ಕಿಳಿದರು.

ಚುರುಕಿನ ಸರ್ವ್‌ಗಳ ಜೊತೆಗೆ ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಭಾರತದ ಆಟಗಾರ ಶೀಘ್ರವೇ ಮುನ್ನಡೆ ಪಡೆದರು. ಇದರಿಂದ ಒತ್ತಡಕ್ಕೆ ಒಳಗಾ ದಂತೆ ಕಂಡ ಚಿಯಾ ಹಾವೊ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿ ಪಾಯಿಂಟ್‌ ಕೈಚೆಲ್ಲಿದರು. ಹೀಗಾಗಿ ಭಾರ ತದ ಆಟಗಾರನ ಗೆಲುವು ಸುಲಭ ವಾಯಿತು.

ಮೊದಲ ಎರಡು ಗೇಮ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂದಿದ್ದ ರಿಂದ ಮೂರನೇ ಗೇಮ್‌ ಉಭಯ ಆಟಗಾರರ ಪಾಲಿಗೆ ಮಹತ್ವದ್ದೆನಿಸಿತ್ತು. ಹೀಗಾಗಿ ಇಬ್ಬರೂ ಶುರುವಿನಿಂದಲೇ ಜಿದ್ದಿಗೆ ಬಿದ್ದವರ ಹಾಗೆ ಸೆಣಸಿದರು. ಒಂದು ಹಂತದಲ್ಲಿ 17–17ರಲ್ಲಿ ಸಮಬಲವಾಗಿತ್ತು. ಆ ನಂತರ ಶ್ರೇಷ್ಠ ಆಟ ಆಡಿದ ಸಿರಿಲ್‌ ಅವರು ಚುರುಕಾಗಿ ನಾಲ್ಕು ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ತೋರಣ ಕಟ್ಟಿದರು.

ಮುಂದಿನ ಸುತ್ತಿನಲ್ಲಿ 16ನೇ ಶ್ರೇಯಾಂಕಿತ ಆಟಗಾರ ಸಿರಿಲ್‌ಗೆ ಮಲೇಷ್ಯಾದ ಲೀ ಜಿ ಜಿಯಾ ಅವರ ಸವಾಲು ಎದುರಾಗಲಿದೆ. ಜಿಯಾ ಅವರು ಆರಂಭಿಕ ಸುತ್ತಿನಲ್ಲಿ ಭಾರತದ ಸೌರಭ್‌ ವರ್ಮಾಗೆ ಆಘಾತ ನೀಡಿದ್ದರು.

ಶ್ರೀಕೃಷ್ಣ ಪ್ರಿಯಾಗೆ ಜಯ
ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಶ್ರೀಕೃಷ್ಣ ಪ್ರಿಯಾ 21–17, 20–22, 21–9ರಲ್ಲಿ ಚೀನಾ ತೈಪೆಯ ಚಿಯಾಂಗ್‌ ಮೆಯಿ ಹುಯಿ ಅವರನ್ನು ಸೋಲಿಸಿದರು.

ಮೊದಲ ಗೇಮ್‌ನಲ್ಲಿ ಸುಲಭವಾಗಿ ಎದುರಾಳಿಯ ಸವಾಲು ಮೀರಿನಿಂತ ಪ್ರಿಯಾ ಅವರಿಗೆ ಎರಡನೇ ಗೇಮ್‌ನಲ್ಲಿ ಚಿಯಾಂಗ್‌ ತಿರುಗೇಟು ನೀಡಿದರು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಅಮೋಘ ಆಟ ಆಡಿದ ಭಾರತದ ಆಟಗಾರ್ತಿ ಸುಲಭವಾಗಿ ಎದುರಾಳಿಯನ್ನು ಮಣಿಸಿದರು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ  ಪ್ರಿಯಾ ಅವರು ಚೀನಾ ತೈಪೆಯ ಶುವೊ ಯುನ್‌ ಸಂಗ್‌ ವಿರುದ್ಧ ಆಡಲಿದ್ದಾರೆ.

ಅಭಿಷೇಕ್‌ಗೆ ನಿರಾಸೆ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಅಭಿಷೇಕ್‌ ಯಲಿಗಾರ್‌ ಅವರು ಎರಡನೇ ಸುತ್ತಿನಲ್ಲಿ ಸೋತರು. ಕರ್ನಾಟಕದ 15ನೇ ಶ್ರೇಯಾಂಕಿತ ಆಟಗಾರ ಅಭಿಷೇಕ್‌ 17–21, 21–17, 6–21ರಲ್ಲಿ ಕೊರಿಯಾದ ಸಿವುಂಗ್‌ ಹೂನ್‌ ವೂ ವಿರುದ್ಧ ಶರಣಾದರು.

ಇನ್ನೊಂದು ಪಂದ್ಯದಲ್ಲಿ 14ನೇ ಶ್ರೇಯಾಂಕಿತ ಆಟಗಾರ ಹರ್ಷಿಲ್‌ ದಾನಿ  12–21, 6–21ರಲ್ಲಿ ಕೊರಿಯಾದ ಹಾ ಯಂಗ್‌ ವೂಂಗ್‌ ವಿರುದ್ಧ ಸೋತರು. ಸಾಯಿ ಉತ್ತೇಜಿತಾ ರಾವ್‌ ಚುಕ್ಕಾ 7–21, 17–21ರಲ್ಲಿ ಕೊರಿಯಾದ ನಾ ಯಿಯಾಂಗ್‌ ಕಿಮ್‌ ವಿರುದ್ಧ ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ನಿಖಾರ್‌ ಗಾರ್ಗ್‌ ಮತ್ತು ಅಂಕುರ್‌ ಸಂಗ್‌ಪಾಂಗ್‌ ರಾಯ್‌ 5–21, 8–21ರಲ್ಲಿ ಚೀನಾ ತೈಪೆಯ ಕೊ ಚಿ ಚಾಂಗ್‌ ಮತ್ತು ಲಿಯಾವೊ ಕುವಾನ್‌ ಹಾವೊ ವಿರುದ್ಧ ನಿರಾಸೆ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.