ADVERTISEMENT

ಪ್ರೀ ಕ್ವಾರ್ಟರ್‌ಗೆ ಅರವಿಂದ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಕರ್ನಾಟಕದ ಅರವಿಂದ್‌ ಭಟ್‌ ಆಕ್ಲೆಂಡ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ಓಪನ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅರವಿಂದ್‌ 21-17, 25-23 ರಲ್ಲಿ ಚೀನಾ ತೈಪೆಯ ಸು ಜುಯ್‌ ತಿಂಗ್‌ ಅವರನ್ನು ಮಣಿಸಿದರು. ಇತ್ತೀಚೆಗೆ ನಡೆದ ಜರ್ಮನ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅರವಿಂದ್‌ 37 ನಿಮಿಷಗಳಲ್ಲಿ ಗೆಲುವು ಪಡೆದರು.

ಬೆಂಗಳೂರಿನ ಆಟಗಾರ ಮುಂದಿನ ಸುತ್ತಿನ ಪಂದ್ಯದಲ್ಲಿ ಮಲೇಷ್ಯದ ತಾಂಗ್‌ ಜೀ ಚೆನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ತಿಂಗ್‌ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ ಅರವಿಂದ್‌ ಸುಲಭ ಗೆಲುವು ಪಡೆದರು.
ಆದರೆ ಎರಡನೇ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಅರವಿಂದ್‌ ಆರಂಭದಲ್ಲಿ 11-6ರ ಮೇಲುಗೈ ಪಡೆದಿದ್ದರು. ಮರುಹೋರಾಟ ನಡೆಸಿದ ತಿಂಗ್‌ 11-11 ರಲ್ಲಿ ಸಮಬಲ ಸಾಧಿಸಿದರು.

ಮತ್ತೆ ಲಯ ಕಂಡುಕೊಂಡ ಭಾರತದ ಆಟಗಾರ 17-12 ರ ಮುನ್ನಡೆ ಪಡೆದರು. ಪಟ್ಟುಬಿಡಲೊಲ್ಲದ ತಿಂಗ್‌ ಮರುಹೋರಾಟ ನಡೆಸಿ 21-20ರ ಮುನ್ನಡೆ ತಮ್ಮದಾಗಿಸಿಕೊಂಡರು. ಆದರೆ ಅರವಿಂದ್‌ ತಮ್ಮ ಅನುಭವದ ನೆರವಿನಿಂದ ಎಚ್ಚರಿಕೆಯ ಆಟವಾಡಿ ಪಂದ್ಯ ತಮ್ಮದಾಗಿಸಿಕೊಂಡರು.

ಭಾರತದ ಇನ್ನೊಬ್ಬ ಆಟಗಾರ ಸೌರಭ್‌ ವರ್ಮಾ ಅವರೂ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 21-11, 21-12 ರಲ್ಲಿ ನ್ಯೂಜಿಲೆಂಡ್‌ನ ಡೈಲಾನ್‌  ಹೆನ್ಟನ್‌ ವಿರುದ್ಧ ಸುಲಭ ಗೆಲುವು ಪಡೆದರು.
ವಿಶ್ವ ರ್‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನದಲ್ಲಿರುವ ಸೌರಭ್‌ 16ರ ಘಟ್ಟದ ಪಂದ್ಯದಲ್ಲಿ ಚೀನಾ ತೈಪೆಯ ಕುಯೆ ಚುನ್‌ ಶಿ ಎದುರು ಪೈಪೋಟಿ ನಡೆಸಲಿದ್ದಾರೆ.

ಸೌರಭ್‌ ಅವರು ಇತ್ತೀಚೆಗೆ ಟಾಟಾ ಓಪನ್‌, ಆಸ್ಟ್ರೇಲಿಯನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಮತ್ತು ಇರಾನ್‌ನಲ್ಲಿ ನಡೆದಿದ್ದ ಫಜ್ರ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.