ADVERTISEMENT

ಫಿಫಾ ಅಧಿಕಾರಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2015, 20:12 IST
Last Updated 27 ಮೇ 2015, 20:12 IST

ಜ್ಯೂರಿಚ್‌/ಮ್ಯಾಡ್ರಿಡ್‌ (ಐಎಎನ್‌ಎಸ್‌ /ಎಎಫ್‌ಪಿ): ಫುಟ್‌ಬಾಲ್‌ ಟೂರ್ನಿ ಗಳನ್ನು ಆಯೋಜಿಸುವ ವೇಳೆ ಭ್ರಷ್ಟಾಚಾರ ಎಸಗಿದ ಶಂಕೆಯ ಮೇಲೆ ಇಬ್ಬರು ಫಿಫಾ ಉಪಾಧ್ಯಕ್ಷರು ಸೇರಿದಂತೆ ಒಟ್ಟು ಏಳು ಜನ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಫಿಫಾ ಅಧ್ಯಕ್ಷ ಸ್ಥಾನದ ಚುನಾವಣೆ ಗಾಗಿ ಇಲ್ಲಿ ಮೇ 27ರಿಂದ ಎರಡು ದಿನ ಫಿಫಾ ಕಾಂಗ್ರೆಸ್‌ ಆಯೋಜನೆಯಾಗಿದೆ. ಈ ವೇಳೆ ಹೋಟೆಲ್‌ ಮೇಲೆ ದಾಳಿ ನಡೆಸಿದ ಪೊಲೀಸರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಫಿಫಾ ಸಾಕಷ್ಟು ಮುಜುಗರಕ್ಕೆ ಒಳಗಾಗಿದೆ. 1990ರಿಂದ ನಡೆದ ಪ್ರಮುಖ ಟೂರ್ನಿಗಳ ವೇಳೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾರಣಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

‘ಟೂರ್ನಿಗಳನ್ನು ಸಂಘಟಿಸುವ ವೇಳೆ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ವಿಚಾ ರಣೆಗಾಗಿ ಅಧಿಕಾರಿಗಳನ್ನು ಬಂಧಿಸ ಲಾಗಿದೆ. ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗುವುದು.  ಆದರೆ, ಇದರಲ್ಲಿ ಫಿಫಾ ಅಧ್ಯಕ್ಷ ಸೆಪ್‌ ಬ್ಲಾಟರ್‌ ಸೇರಿಲ್ಲ’ ಎಂದು ಸ್ವಿಟ್ಜರ್‌ಲೆಂಡ್‌ ಪೊಲೀಸರು ತಿಳಿಸಿದ್ದಾರೆ. ‌

ಅಧಿಕಾರಿಗಳ ಬಂಧನದ ವಿಷಯ ವನ್ನು ಫಿಫಾ ಕೂಡಾ ಖಚಿತಪಡಿಸಿದೆ. ಸ್ವಿಟ್ಜರ್‌ಲೆಂಡ್‌ನ ಪೊಲೀಸರು ಬಂಧಿತ ಅಧಿಕಾರಿಗಳ ಬಳಿಯಿದ್ದ ದಾಖಲೆಗಳು ಮತ್ತು ಇ ಮೇಲ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 2018 ಮತ್ತು 2022ರ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ರಾಷ್ಟ್ರಗಳನ್ನು ಆಯ್ಕೆ ಮಾಡುವಾಗಲೂ ಅವ್ಯವಹಾರ ನಡೆದಿದೆಯೇ ಎನ್ನುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ. ಮುಂದಿನ ವಿಶ್ವಕಪ್‌ ರಷ್ಯಾದಲ್ಲಿ ನಡೆಯಲಿದ್ದು, 2022ರ ಟೂರ್ನಿಗೆ ಕತಾರ್‌ ಆತಿಥ್ಯ ವಹಿಸಿಕೊಂಡಿದೆ. ಆದ್ದರಿಂದ ರಷ್ಯಾ ಮತ್ತು ಕತಾರ್‌ ಕೂಡಾ ಈಗ ಆತಂಕಕ್ಕೆ ಒಳಗಾಗಿವೆ. ಆದರೆ, ‘ಮುಂದಿನ ಎರಡು ವಿಶ್ವಕಪ್‌ ಟೂರ್ನಿಗಳ ಸ್ಥಳಗಳನ್ನು ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದು ಫಿಫಾ ವಕ್ತಾರರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಫಿಫಾ ಉಪಾಧ್ಯಕ್ಷರಾದ ಜೆಫ್ರಿ ವೆಬ್‌,  ಈಗ್ಯೂನಿಯೊ ಫಿಗ್ಯೂರಿಡೊ, ಫಿಫಾ ಕಾರ್ಯಕಾರಿ ಸಮಿತಿ ಸದಸ್ಯ ಎಡ್ವರ್ಡ್‌ ಲೀ, ಅಭಿವೃದ್ಧಿ ಅಧಿಕಾರಿ ಜೂಲಿಯೊ ರಾಚ್‌, ಕಾಸ್ಟಸ್‌ ಟಕ್ಕಾಸ್‌, ರಫೆಲ್‌ ಈಸ್ಕುಯುಲ್‌ ಮತ್ತು ಜೋ ಮಾರಿಯಾ ಮರಿನ್‌ ಬಂಧಿತರು.
ಕರಾಳ ದಿನ: ‘ಫುಟ್‌ಬಾಲ್‌ಗೆ ಇದು ಅತ್ಯಂತ ಕರಾಳ ದಿನ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕು. ಸತ್ಯ ಹೊರಬರಬೇಕು’ ಎಂದು ಫಿಫಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಲಿ ಬಿನ್‌ ಅಲ್‌ ಹುಸೇನ್‌ ಒತ್ತಾಯಿಸಿದ್ದಾರೆ.

ಅಮಾನತು:  ಕೆಲವರ ಬಗ್ಗೆ ಶಂಕೆ ವ್ಯಕ್ತವಾದ ಕಾರಣ ಫಿಫಾ ಹನ್ನೊಂದು ಅಧಿಕಾರಿಗಳನ್ನು ಅಮಾನತು ಮಾಡಿದೆ. ಏಳು ಅಧಿಕಾರಗಳ ಬಂಧನವಾದ ಒಂದೇ ಗಂಟೆಯಲ್ಲಿ ಫಿಫಾ ಈ ಕಠಿಣ ನಿಲುವು ತೆಳೆದಿದೆ. ಅಮಾನತು ಆದವರಲ್ಲಿ ಬಂಧನಕ್ಕೊಳಗಾದ ಅಧಿಕಾರಿಗಳು ಸೇರಿದ್ದಾರೆ.  ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿರುವ ಚುನಾವಣೆ ಯನ್ನು ಮುಂದೂಡಬೇಕು ಎಂದು ಯುಇಎಫ್‌ಎ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.