ADVERTISEMENT

ಫೂಜಾರ–ರಹಾನೆ ಶತಕ ವೈಭವ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌: ಅರ್ಧಶತಕ ಸಿಡಿಸಿ ರನ್‌ ಔಟ್‌ ಆದ ರಾಜ್ಯದ ರಾಹುಲ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 20:13 IST
Last Updated 3 ಆಗಸ್ಟ್ 2017, 20:13 IST
ಅಜಿಂಕ್ಯ ರಹಾನೆ (ಎಡ) ಮತ್ತು ಚೇತೇಶ್ವರ ಪೂಜಾರ ಪರಸ್ಪರ ಅಭಿನಂದಿಸಿಕೊಂಡರು ರಾಯಿಟರ್ಸ್ ಚಿತ್ರ
ಅಜಿಂಕ್ಯ ರಹಾನೆ (ಎಡ) ಮತ್ತು ಚೇತೇಶ್ವರ ಪೂಜಾರ ಪರಸ್ಪರ ಅಭಿನಂದಿಸಿಕೊಂಡರು ರಾಯಿಟರ್ಸ್ ಚಿತ್ರ   

ಕೊಲಂಬೊ: ಇಲ್ಲಿನ ಎಸ್‌.ಎಸ್‌.ಸಿ ಕ್ರೀಡಾಂಗಣದಲ್ಲಿ ಗುರುವಾರ ಸೌರಾಷ್ಟ್ರ ಬ್ಯಾಟ್ಸ್‌ಮನ್ ಚೇತೇಶ್ವರ್‌ ಪೂಜಾರ ಅವರಿಗೆ ಶುಭದಿನವಾಗಿತ್ತು. ವೃತ್ತಿ ಜೀವನದ 50ನೇ ಟೆಸ್ಟ್ ಆಡಲು ಅಂಗಳಕ್ಕೆ ಇಳಿದ ಅವರು ಶತಕ ಗಳಿಸಿ ಮಿಂಚಿದರು. ಇತ್ತ ಭಾರತದಲ್ಲಿ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು.

ಪೂಜಾರ (ಬ್ಯಾಟಿಂಗ್ 128; 225 ಎಸೆತ, 10 ಬೌಂಡರಿ) ಮತ್ತು ಅಜಿಂಕ್ಯ ರಹಾನೆ (ಬ್ಯಾಟಿಂಗ್ 103; 168 ಎ, 12 ಬೌಂ) ಅವರು ಸೊಗಸಾದ ಶತಕ ದಾಖಲಿಸಿದರು. ಇಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 211 ರನ್‌  ಪೇರಿಸಿದರು.  ಇದರೊಂದಿಗೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಆರಂಭ ಕಂಡಿತು. ಮೊದಲ ದಿನದಾಟದ ಮುಕ್ತಾಯಕ್ಕೆ ವಿರಾಟ್ ಕೊಹ್ಲಿ ಬಳಗ 90 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 344 ರನ್‌ ಗಳಿಸಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ಬೀಗಿದ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಶಿಖರ್ ಧವನ್‌ ಆರಂಭದಲ್ಲೇ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಗಳಿಸಿದರು. ಅವರ ಜೊತೆ ಇನಿಂಗ್ಸ್ ಆರಂಭಿಸಿದ ಕೆ.ಎಲ್‌.ರಾಹುಲ್‌ ದಿಟ್ಟ ಆಟವಾಡಿದರು. ಜ್ವರದಿಂದ ಗುಣಮುಖರಾಗಿದ್ದ ರಾಹುಲ್ ಆರಂಭದಲ್ಲಿ ತಾಳ್ಮೆಯಿಂದಲೇ ಆಡಿದರು. ಆರನೇ ಓವರ್‌ನಲ್ಲಿ ರಂಗನಾ ಹೆರಾತ್ ಅವರ ಎಸೆತಗಳನ್ನು ನಿರಂತರವಾಗಿ ಬೌಂಡರಿಗೆ ಅಟ್ಟಿ ವೇಗವಾಗಿ ರನ್‌ ಗಳಿಸಲು ಮುಂದಾದರು.

ADVERTISEMENT

11ನೇ ಓವರ್‌ನಲ್ಲಿ ಧವನ್‌ ವಿಕೆಟ್‌ ಕಳೆದುಕೊಂಡರು. 35 ರನ್‌ ಗಳಿಸಿದ ಅವರು ಪೆರೇರಾ ಹೆಣೆದ ಎಲ್‌ಬಿಡಬ್ಲ್ಯುಬಲೆಗೆ ಬಿದ್ದರು. ಆಗ ತಂಡದ ಮೊತ್ತ 56 ಆಗಿತ್ತು. ಆರಂಭಿಕ ಜೊತೆಗಾರ ಔಟಾದರೂ ರಾಹುಲ್‌ ಆಟಕ್ಕೆ ಭಂಗ ಉಂಟಾಗಲಿಲ್ಲ. ಚೇತೇಶ್ವರ ಪೂಜಾರ ಜೊತೆಗೆ ಎರಡನೇ ವಿಕೆಟ್‌ಗೆ ಅವರು 54 ರನ್‌ ಸೇರಿಸಿದರು. ಈ ಸಂದರ್ಭದಲ್ಲಿ ರನ್‌ ಔಟ್‌ ಆಗಿ ವಾಪಸಾದರು. 82 ಎಸೆತಗಳಲ್ಲಿ 57 ರನ್ ಗಳಿಸಿದ ಕರ್ನಾಟಕದ ಆಟಗಾರ ಏಳು ಬೌಂಡರಿಗಳನ್ನು ಸಿಡಿಸಿದ್ದರು.

ನಾಯಕ ವಿರಾಟ್ ಕೊಹ್ಲಿ ಗುರುವಾರ ಮಿಂಚಲಿಲ್ಲ. ಎರಡು ಬೌಂಡರಿ ಗಳಿಸಿದ ಅವರು 29 ಎಸೆತಗಳಲ್ಲಿ 13 ರನ್‌ಗಳೊಂದಿಗೆ ಕ್ರೀಸ್‌ ತೊರೆದರು.

(ಅರ್ಧ ಶತಕ ಗಳಿಸಿದ ಕೆ.ಎಲ್‌.ರಾಹುಲ್‌ ಅವರ ಹೊಡೆತದ ಭಂಗಿ)

ಪೂಜಾರ–ಅಜಿಂಕ್ಯ ಮಿಂಚು

39ನೇ ಓವರ್‌ನಲ್ಲಿ ಕೊಹ್ಲಿ ಔಟಾದಾಗ ತಂಡದ ಮೊತ್ತ 133 ರನ್ ಆಗಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಮೂಡಿಸಿದರು. ಪೂಜಾರ ಕಲಾತ್ಮಕ ಆಟದ ಮೂಲಕ ರಂಜಿಸಿದರೆ ರಹಾನೆ ಬೌಂಡರಿಗಳ ಮೂಲಕ ಮನ ಮುದಗೊಳಿಸಿದರು. ಪೆರೇರಾ ಎಸೆತದಲ್ಲಿ ಒಂದು ರನ್ ಗಳಿಸಿ ಅರ್ಧಶತಕ ಪೂರೈಸಿದ ನಂತರ ಪೂಜಾರ ರನ್‌ ಗಳಿಕೆಗೆ ವೇಗ ತುಂಬಿದರು. ಮಲಿಂದಾ ಪುಷ್ಪಕುಮಾರ ಅವರ ಎಸೆತವನ್ನು ಮೋಹಕವಾಗಿ ಸಿಕ್ಸರ್‌ಗೆ ಅಟ್ಟಿದರು. 57ನೇ ಓವರ್‌ನಲ್ಲಿ ಪೂಜಾರ–ರಹಾನೆ ನಡುವಿನ ಜೊತೆಯಾಟ ಮೂರಂಕಿ ದಾಟಿತು. ಪುಷ್ಪಕುಮಾರ ಎಸೆತದಲ್ಲಿ ಒಂಟಿ ರನ್ ಗಳಿಸಿದ ರಹಾನೆ ಅರ್ಧಶತಕ ಪೂರೈಸಿದ ಪೂಜಾರ ಶಕತ ಗಳಿಸಿ ಸಂಭ್ರಮಿಸಿದರು.

ಪೂಜಾರ ಶತಕದ ನಂತರ ರಹಾನೆ ಅವರ ಆಟ ಮತ್ತಷ್ಟು ವೇಗ ಪಡೆದುಕೊಂಡಿತು. 78ನೇ ಓವರ್‌ನಲ್ಲಿ ಪುಷ್ಪಕುಮಾರ ಅವರಿಂದ ಜೀವದಾನ ಪಡೆದ ಅವರು ಕಳಪೆ ಎಸೆತಗಳು ಬಂದಾಗಲೆಲ್ಲ ಬೌಂಡರಿ ಗಳಿಸುತ್ತ ಸಾಗಿದರು. ದಿನದಾಟದ ಮುಕ್ತಾಯಕ್ಕೆ ನಾಲ್ಕು ಓವರ್‌ಗಳು ಬಾಕಿ ಇದ್ದಾಗ ಶತಕ ಪೂರೈಸಿದರು.

50ನೇ ಪಂದ್ಯದಲ್ಲಿ ಶತಕ

50ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್‌ ಆಗಿ ಚೇತೇಶ್ವರ ಪೂಜಾರ ಹೊರಹೊಮ್ಮಿದರು. ಇನಿಂಗ್ಸ್‌ನ 68ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎರಡು ರನ್‌ ಗಳಿಸಿ ಶತಕ ಪೂರೈಸಿದ ಅವರು ಶ್ರೀಲಂಕಾ ಎದುರು ನಿರಂತರ ಮೂರನೇ ಶತಕ ಗಳಿಸಿದ ಸಾಧನೆ ಮಾಡಿದರು. ಒಟ್ಟಾರೆ ಇದು ಅವರ 13ನೇ ಶತಕ ಆಗಿತ್ತು.

ರಹಾನೆ ಇಲ್ಲಿ ವೃತ್ತಿಜೀವನದ ಒಂಬತ್ತನೇ ಶತಕ ಗಳಿಸಿದರು. ವಿದೇಶದಲ್ಲಿ ಇದು ಅವರ ಆರನೇ ಶತಕ.

ಸ್ಕೋರ್ ಕಾರ್ಡ್‌

ಭಾರತ (ಮೊದಲ ಇನಿಂಗ್ಸ್‌) 3ಕ್ಕೆ 344 (90 ಓವರ್‌ಗಳಲ್ಲಿ)

ಶಿಖರ್‌ ಧವನ್‌ ಎಲ್‌ಬಿಡಬ್ಲ್ಯು ಪೆರೇರ 35

ಕೆ.ಎಲ್‌.ರಾಹುಲ್‌ ರನ್‌ ಔಟ್‌ (ಚಾಂಡಿಮಲ್‌/ಡಿಕ್ವೆಲ್ಲಾ) 57

ಚೇತೇಶ್ವರ್ ಪೂಜಾರ ಬ್ಯಾಟಿಂಗ್‌ 128

ವಿರಾಟ್ ಕೊಹ್ಲಿ ಸಿ ಮ್ಯಾಥ್ಯೂಸ್‌ ಬಿ ಹೆರಾತ್‌ 13

ಅಜಿಂಕ್ಯ ರಹಾನೆ  ಬ್ಯಾಟಿಂಗ್ 103

ಇತರೆ: (ಬೈ4, ನೋಬಾಲ್‌ 1, ಲೆಗ್‌ಬೈ3) 8

ವಿಕೆಟ್ ಪತನ 1–56 (ಶಿಖರ್ ಧವನ್‌, 10.1), 2–109 (ಕೆ.ಎಲ್‌.ರಾಹುಲ್‌, 30.4), 3–133 (ವಿರಾಟ್‌ ಕೊಹ್ಲಿ, 38.5)

ಬೌಲಿಂಗ್‌

ನುವಾನ್ ಪ್ರದೀಪ್‌ 17.4–2–63–0

ರಂಗನಾ ಹೆರಾತ್‌ 24–3–83–1

ದಿಮುತ್ ಕರುಣರತ್ನೆ 3–0–10–0

ದಿಲ್ರುವಾನ್ ಪೆರೇರ 18–2–68–1

ಮಲಿಂದಾ ಪುಷ್ಪಕುಮಾರ 19.2–0–82–0

ಧನಂಜಯ ಡಿ ಸಿಲ್ವ 8–0–31–0

======

* ಮುರಿಯದ ನಾಲ್ಕನೇ ವಿಕೆಟ್‌ಗೆ 211 ರನ್‌ ಸೇರಿಸಿದ ಪೂಜಾರ ಮತ್ತು ರಹಾನೆ

ಪೂಜಾರ ಜೊತೆ ಎರಡನೇ ವಿಕೆಟ್‌ಗೆ 54 ರನ್ ಸೇರಿಸಿದ ರಾಹುಲ್‌

ವೈಫಲ್ಯ ಕಂಡ ಶಿಖರ್ ಧವನ್‌ ಮತ್ತು ವಿರಾಟ್ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.