ADVERTISEMENT

ಫೆನ್ಸಿಂಗ್‌: ಭವಾನಿ ದೇವಿಗೆ ಪ್ರಶಸ್ತಿ

ಪಿಟಿಐ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಪ್ರಶಸ್ತಿಯೊಂದಿಗೆ ನಗೆ ಸೂಸಿದ ಭವಾನಿದೇವಿ
ಪ್ರಶಸ್ತಿಯೊಂದಿಗೆ ನಗೆ ಸೂಸಿದ ಭವಾನಿದೇವಿ   

ಚೆನ್ನೈ: ಭಾರತದ ಸಿ.ಎ. ಭವಾನಿದೇವಿ ಅವರು ಐಸ್‌ಲ್ಯಾಂಡ್‌ನಲ್ಲಿ ನಡೆದ ಟರ್ನೊಯ್ ಸ್ಯಾಟಲೈಟ್ ಫೆನ್ಸಿಂಗ್(ಕತ್ತಿವರಸೆ) ಚಾಂಪಿಯನ್‌­ಷಿಪ್‌­ನಲ್ಲಿ ಚಿನ್ನದ ಪದಕ ಗೆದ್ದರು.  

ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಪಾತ್ರ­ರಾದರು.

ಶನಿವಾರ ನಡೆದ ಫೈನಲ್‌ನಲ್ಲಿ ಅವರು 15–13 ಅಂಕಗಳಿಂದ ಬ್ರಿಟನ್‌ನ ಸರಾಹ  ಜೇನ್ ಹ್ಯಾಂಪ್ಸನ್ ವಿರುದ್ಧ ಗೆದ್ದರು. ಬಳುಕುವ ಕತ್ತಿಯನ್ನು ಮಿಂಚಿನಂತೆ ಝಳಪಿಸಿದ ಭವಾನಿದೇವಿ ಅವರು ಎದುರಾಳಿಯ ಕಠಿಣ ಸವಾಲನ್ನು ಮೀರಿ ನಿಂತರು.

ರೈಕಜವಿಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ  ಸರಾಹ್ ಜೇನ್ ಅವರು ಬಹುತೇಕ ಅವಧಿಯಲ್ಲಿ ಸಮಬಲ ಸಾಧಿಸಿದ್ದರು. ಆದರೂ ಎರಡು ಪಾಯಿಂಟ್‌ಗಳ  ಅಂತರವನ್ನು ಪಡೆಯುವಲ್ಲಿ ಸಫಲರಾದ ಭಾರತದ ಆಟಗಾರ್ತಿಯು ಜಯ ಸಾಧಿಸಿದರು.

ಭವಾನಿದೇವಿ ಅವರು ಸೆಮಿ­ಫೈನಲ್‌ನಲ್ಲಿ 15–11ರಿಂದ ಜೆಸ್ಸಿಕಾ ಕಾರ್ಬಿ ವಿರುದ್ಧ ಜಯಗಳಿಸಿದ್ದರು.

ಭವಾನಿ ಅವರು ಕೇರಳದ ತಲ­ಚ್ಚೇರಿ­­ಯ­ಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ತರ­ಬೇತಿ ಪಡೆಯುತ್ತಿದ್ದಾರೆ.

‘ಮೂರನೇ ಬಾರಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕಳೆದ ಸಲ ಕ್ವಾರ್ಟರ್‌­ಫೈನಲ್‌ನಲ್ಲಿ ಸೋತಿದ್ದೆ. ವಿಶ್ವಮಟ್ಟದಲ್ಲಿ ಮೊದಲ ಪದಕ ಗೆದ್ದಿದ್ದು ಸಂತಸ ತಂದಿದೆ’ ಎಂದು ಭವಾನಿದೇವಿ ಹೇಳಿದ್ದಾರೆ. ಅವರು ಏಷ್ಯಾ ಮತ್ತು ಕಾಮನ್‌ವೆಲ್ತ್ ಕೂಟಗಳಲ್ಲಿ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.