ADVERTISEMENT

ಫೈನಲ್‌ನಲ್ಲಿ ಭಾರತ ಇರಾನ್‌ ಮುಖಾಮುಖಿ

ಕಬಡ್ಡಿ: ಕೊರಿಯಾಕ್ಕೆ ವೀರೋಚಿತ ಸೋಲು: ಆತಿಥೇಯರ ಎದುರು ಕಳೆಗುಂದಿದ ಥಾಯ್ಲೆಂಡ್‌

ಪಿ.ಜಿ.ಪೂಣಚ್ಚ
Published 21 ಅಕ್ಟೋಬರ್ 2016, 19:30 IST
Last Updated 21 ಅಕ್ಟೋಬರ್ 2016, 19:30 IST
ಭಾರತದ ಆಟಗಾರರು ಥಾಯ್ಲೆಂಡ್‌ ತಂಡದ ರೈಡರ್‌ ಅನ್ನು ಹಿಡಿದ ಕ್ಷಣ
ಭಾರತದ ಆಟಗಾರರು ಥಾಯ್ಲೆಂಡ್‌ ತಂಡದ ರೈಡರ್‌ ಅನ್ನು ಹಿಡಿದ ಕ್ಷಣ   

ಅಹಮದಾಬಾದ್: ಚರಿತ್ರೆ ಮರುಕಳಿಸಿದೆ. ವಿಶ್ವಕಪ್‌ ಕಬಡ್ಡಿಯಲ್ಲಿ ಸತತ ಮೂರನೇ ಸಲ ಫೈನಲ್‌ನಲ್ಲಿ ಭಾರತ ಮತ್ತು ಇರಾನ್‌ ಮುಖಾ ಮುಖಿಯಾಗಲಿವೆ. ಭಾರತದ ಆಟಗಾರರು ಇಲ್ಲಿನ ಟ್ರಾನ್ಸ್‌ ಸ್ಟೇಡಿಯಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧರಿಂದ ಏಕಪಕ್ಷೀಯ ಗೆಲುವು ಗಳಿಸಿದರು.

2004 ಮತ್ತು 2007ರಲ್ಲಿ ನಡೆದಿದ್ದ ವಿಶ್ವಕಪ್ ಕೂಟಗಳಲ್ಲಿಯೂ ಭಾರತ ಮತ್ತು ಇರಾನ್‌ ಅಂತಿಮ ಘಟ್ಟಕ್ಕೇರಿ ದ್ದವು. ಏಷ್ಯಾ ಖಂಡದಲ್ಲಿ ಈ ಎರಡು ದೇಶಗಳೇ ಕಬಡ್ಡಿ ಶಕ್ತಿಕೇಂದ್ರಗಳೆಂ ಬುದು ಮತ್ತೊಮ್ಮ ಸಾಬೀತಾಯಿತು. 2010 ಮತ್ತು 2014ರ ಏಷ್ಯನ್‌ ಕ್ರೀಡಾ ಕೂಟಗಳಲ್ಲಿಯೂ ಈ ಎರಡು ದೇಶಗಳ ನಡುವೆಯೇ ಫೈನಲ್‌ ನಡೆದಿತ್ತು.

ಈ ಪಂದ್ಯದ ಆರಂಭದ ಕ್ಷಣ ದಿಂದಲೂ ಭಾರತದ್ದೇ ಆಟ. ಕೊಮ್ಸಾನ್‌ ತೊಂಘಾಮ್‌ ನೇತೃತ್ವದ ಥಾಯ್ಲೆಂಡ್‌ ಆಟಗಾರರು ಒಂದೊಂದು ಪಾಯಿಂಟ್‌ ಗಳಿಸಲೂ ಇನ್ನಿಲ್ಲದಂತೆ ಹೆಣಗಾಡಿದರು. ಮೊದಲ 10 ನಿಮಿಷಗಳಲ್ಲಿ ಅಜಯ್‌ ಠಾಕೂರ್‌, ಸಂದೀಪ್‌ ನರ್ವಾಲ್‌, ಪ್ರದೀಪ್‌ ನರ್ವಾಲ್‌ ಅವರ ಪರಿಣಾಮ ಕಾರಿ ರೈಡಿಂಗ್‌ ಚಮತ್ಕಾರಕ್ಕೆ ಎದುರಾಳಿ ಆಟಗಾರರು ದಂಗು ಬಡಿದಂತೆ ಕಂಡರು.4ನಿಮಿಷಗಳಾಗಿದ್ದಾಗ 4–0 ಯಿಂದ ಭಾರತ ಮುಂದಿತ್ತು. 4ನೇ ನಿಮಿಷದಲ್ಲಿ ಸಂದೀಪ್‌ ನರ್ವಾಲ್‌ರನ್ನು ಹೊರ ಕಳಿಸಿದ ಥಾಯ್ಲೆಂಡ್‌ ಮೊದಲ ಪಾಯಿಂಟ್‌ ಗಳಿಸಿತು.

ಏಳನೇ ನಿಮಿಷದಲ್ಲಿ ರೈಡಿಂಗ್‌ ಹೋದ ಪ್ರದೀಪ್‌ ನರ್ವಾಲ್‌ ‘ಏಕಾಂಗಿ’ ಕೊಮ್ಸಾನ್‌ನನ್ನು ಮುಟ್ಟಿ ಮಧ್ಯಗೆರೆ ದಾಟಿದರು. ಆಗ ಭಾರತಕ್ಕೆ ಆಲ್‌ಔಟ್‌ ಪಾಯಿಂಟ್ಸ್‌ ಸಿಕ್ಕಿತಲ್ಲದೆ, 11–2ರಿಂದ ಮುನ್ನಡೆ ಸಾಧಿಸಿತು. 12ನೇ ನಿಮಿಷದಲ್ಲಿ ರೈಡಿಂಗ್‌ ಬಂದ ‘ಏಕಾಂಗಿ’ ಜಾಂತ್‌ಜಮ್‌ ಪಿಕಾದತ್‌ನನ್ನು ಲೀಲಾಜಾಲವಾಗಿ ಹಿಡಿದು ಹಾಕಿದ ಭಾರತ 2ನೇ ಸಲ ಆಲ್‌ಔಟ್‌ ಪಾಯಿಂಟ್‌ ಗಳಿಸಿತು. ಆಗ ಸ್ಕೋರು 23–3ಕ್ಕೆ ಏರಿತು. ನಂತರವೂ ಭಾರತದ ರೈಡಿಂಗ್‌ ಮತ್ತು ಟ್ಯಾಕ್ಲಿಂಗ್‌ಗೆ ತತ್ತರಿಸಿದ ಥಾಯ್ಲೆಂಡ್‌ ಆಟಗಾರರು ಸರತಿಯ ಸಾಲಲ್ಲಿ ಹೊರ ನಡೆಯತೊಡಗಿದರು.

17ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಸಲ ಆಲ್‌ಔಟ್‌ ಪಾಯಿಂಟ್‌ ಸಿಕ್ಕಿತು. ಆಗ ಏಕಾಂಗಿ ಸಾಂತಿ ಬಂಚೋಟ್‌ನನ್ನು ಭಾರತದ ಅನುಭವಿ ಆಟಗಾರರು ಸುಲಭವಾಗಿ ಬಲೆಗೆ ಕೆಡವಿದರು. ವಿರಾಮದ ವೇಳೆಗೆ ಭಾರತ 36–8ರಿಂದ ಮುಂದಿತ್ತು.

ಉತ್ತರಾರ್ಧದಲ್ಲಿಯೂ ಥಾಯ್ಲೆಂಡ್‌ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. 22ನೇ ಮತ್ತು 25ನೇ ನಿಮಿಷಗಳಲ್ಲಿ ಆಲ್‌ಔಟ್‌ ಆಯಿತು. 25ನೇ ನಿಮಿಷದಲ್ಲಿ ಭಾರತದ ಸ್ಕೋರು 51–8 ಆಗಿತ್ತು. ಥಾಯ್ಲೆಂಡ್‌ ಎರಡಂಕಿಯ ಮೊತ್ತ ತಲುಪಲು 30 ನೇ ನಿಮಿಷದವರೆಗೆ ಕಾಯಬೇಕಾಯಿತು. ಈ ಕೂಟದಲ್ಲಿ ಅಧಿಕ ರೈಡಿಂಗ್‌ ಪಾಯಿಂಟ್ಸ್‌ ಗಳಿಸಿದವರ ಪಟ್ಟಿಯಲ್ಲಿದ್ದ ಕೊಮ್ಸಾನ್‌ ಈ ಪಂದ್ಯದಲ್ಲಿ ಕೇವಲ 3 ಪಾಯಿಂಟ್ಸ್‌ ಗಳಿಸಿದರಷ್ಟೇ.

ಲೀಗ್‌ ಹಂತದಲ್ಲಿ ಜಪಾನ್‌, ಪೋಲೆಂಡ್‌, ಕೆನ್ಯಾಗಳ ವಿರುದ್ಧ ಅತ್ಯುತ್ತಮವಾಗಿ ಆಡಿದ್ದ ಥಾಯ್ಲೆಂಡ್‌ 4 ಪಂದ್ಯಗಳಲ್ಲಿ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತ್ತು. ಆ ಎಲ್ಲಾ ಪಂದ್ಯಗಳಲ್ಲಿಯೂ ಪರಿಣಾಮಕಾರಿಯಾಗಿ ಆಡಿದ್ದ ಥಾಯ್ಲೆಂಡ್‌ ನಾಲ್ಕರ ಘಟ್ಟದಲ್ಲಿ ಭಾರತದ ಎದುರು ಸಂಪೂರ್ಣ ಕಳೆಗುಂದಿತ್ತು.

ಭಾರತದ ಪರ ಪ್ರದೀಪ್‌ ನರ್ವಾಲ್‌ (14 ಪಾಯಿಂಟ್ಸ್‌), ಅಜಯ್‌ ಠಾಕೂರ್‌ (11), ಅನೂಪ್‌ ಕುಮಾರ್‌ (5), ಸುರೇಂದ್ರ ನಡ (5) ಮತ್ತು ಮಂಜಿತ್‌ ಚಿಲಾರ್‌ (4) ಗಮನ ಸೆಳೆದರೆ, ಥಾಯ್ಲೆಂಡ್‌ನ ಚಾನ್‌ವಿತ್‌ ಗಳಿಸಿದ 6 ಪಾಯಿಂಟ್‌ಗಳೇ ಆ ತಂಡದಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಪಾಯಿಂಟ್ಸ್‌ ಆಗಿತ್ತು.

ಭಾರತ ತಂಡ ರೈಡಿಂಗ್‌ನಲ್ಲಿ ಒಟ್ಟು 42 ಮತ್ತು ಟ್ಯಾಕ್ಲಿಂಗ್‌ನಲ್ಲಿ 18 ಪಾಯಿಂಟ್ಸ್ ಗಳಿಸಿದರೆ, ಥಾಯ್ಲೆಂಡ್‌ ಟ್ಯಾಕ್ಲಿಂಗ್‌ನಲ್ಲಿ ಕೇವಲ 4 ಪಾಯಿಂಟ್ಸ್‌ ಗಳಿಸಲಷ್ಟೇ ಶಕ್ತವಾಯಿತು.

ಇರಾನ್‌ನ ರೋಚಕ ಆಟ: ಮೊದಲಾರ್ಧದ 12ನೇ ನಿಮಿಷದಿಂದ ಅತ್ಯುತ್ತಮ ಚೇತರಿಕೆಯ ಆಟವಾಡಿದ ಇರಾನ್‌ ಆಟಗಾರರು 28–22ರಿಂದ ಕೊರಿಯಾದ ವಿರುದ್ಧ ಗೆಲುವು ಗಳಿಸಿದರು.

ಆರಂಭದ ನಿಮಿಷದಲ್ಲಿ ಪ್ರೊ ಕಬಡ್ಡಿ ಮತ್ತು ಏಷ್ಯನ್‌ ಕ್ರೀಡೆಯ ತಾರೆ ಮೆರಾಜ್‌ ಷೇಕ್‌ ರೈಡಿಂಗ್‌ನಲ್ಲಿ ಸ್ಯೊಂಗ್‌ಕಿಮ್‌ ಹೊರ ನಡೆದರೆ, ರೈಡಿಂಗ್‌ ಹೋದ ಡೊಂಗ್‌ ಜಿಯಾನ್‌ ಲೀ ಯನ್ನು ಇರಾನ್‌ ಆಟಗಾರರು ಹಿಡಿದರು. ಕೊರಿಯ 4ನೇ ನಿಮಿಷದಲ್ಲಿ ಸುಲೆಮಾನ್‌ ಪೆಹಲ್ವಿಯನ್ನು ಹೊರ ಕಳಿಸುವ ಮೂಲಕ ಮೊದಲ ಪಾಯಿಂಟ್‌ ಗಳಿಸಿತು. ನಂತರ ರೈಡಿಂಗ್‌ ಬಂದ ಅಬೊಲ್‌ ಫಜಲ್‌ನ ಕಾಲಿಡಿದು ಎಳೆದು ಹಾಕಿದ ನಾಯಕ ಡೊಂಗ್‌ಜು ಪಾಯಿಂಟ್ಸ್‌ ಅಂತರವನ್ನು 2–2ರಿಂದ ಸಮಗೊಳಿಸಿದರು.

9ನೇ ನಿಮಿಷದಲ್ಲಿ ಮತ್ತೆ ಅಂತರ 3–3ರಿಂದ ಸಮಗೊಂಡಿತು. ಅಲ್ಲಿಂದ ಕೊರಿಯ ಪಾಯಿಂಟ್ಸ್‌ ಏರಿಸಿಕೊಳ್ಳುತ್ತಾ ನಡೆಯಿತು. 12ನೇ ನಿಮಿಷದಲ್ಲಿ ಗೊಲಾಂಬಾಸ್‌ ಕೊರೌಕಿ ಏಕಾಂಗಿಯಾಗಿದ್ದಾಗ ಆತನನ್ನು ಸುಲಭವಾಗಿ ಹೊರ ಕಳಿಸಿದ ಕೊರಿಯ ಆಲೌಟ್‌ ಪಾಯಿಂಟ್ಸ್‌ ಗಳಿಸಿತು. ಕೊರಿಯ 10–4ರ ಮುನ್ನಡೆ ಸಾಧಿಸಿ ವಿಜೃಂಭಿಸಿತು.

ಆ ನಂತರ ಚೇತರಿಕೆಯ ಆಟವಾಡಿದ ಅನುಭವಿ ಇರಾನ್‌ ತಿರುಗೇಟು ನೀಡತೊಡಗಿತು. 19ನೇ ನಿಮಿಷದಲ್ಲಂತೂ ರೈಡಿಂಗ್‌ ಹೋದ ಮೆರಾಜ್‌ ಷೇಕ್‌ ತನ್ನನ್ನು ಬಲೆಗೆ ಕೆಡವಲು ನುಗ್ಗಿದ ಸ್ಯೊಂಗ್‌ ಕಿಮ್‌ನ ಬೆನ್ನಿನ ಮೇಲೆ ಎರಡೂ ಅಂಗೈಗಳನ್ನು ವೂರಿ ಮೇಲಕ್ಕೆ ಜಿಗಿದು ಮಧ್ಯಗೆರೆಯ ತಲುಪಿದ ಪರಿಯಂತೂ ಅನನ್ಯ. ವಿರಾಮದ ವೇಳೆಗೆ ಇರಾನ್‌ ಅಂತರವನ್ನು 11–13ಕ್ಕೆ ಇಳಿಸಿಕೊಂಡಿತು.

ಉತ್ತರಾರ್ಧದ ಆರಂಭದ ಎರಡು ನಿಮಿಷಗಳಲ್ಲಿ ಇರಾನ್‌ ಮೇಲುಗೈ ಸಾಧಿಸಿತು. ಟೇ ಡೊಕ್‌ ಮತ್ತು ಬೊಮ್‌ ಕಿಮ್‌ ಇಬ್ಬರೇ ಇದ್ದಾಗ ರೈಡಿಂಗ್‌ ಬಂದ ಮೆರಾಜ್‌ ಷೇಕ್‌ ತನ್ನನ್ನು ಹಿಡಿಯಲು ಬಂದ ಡೊಕ್‌ನನ್ನು ಹೊರ ಕಳಿಸಿದರೆ, ನಂತರ ರೈಡಿಂಗ್‌ ಹೋದ ಬೊಮ್‌ನನ್ನು ಇರಾನ್‌ ಆಟಗಾರರು ಬಲೆಗೆ ಬೀಳಿಸಿದರು. ಆಗ ಸ್ಕೋರು 15–15 ರಿಂದ ಸಮಗೊಂಡಿತು. ಆ ನಂತರ ಕೊರಿಯ ತನ್ನ ಚುರುಕಾದ ಸಂಘಟಿತ ಹೋರಾಟವನ್ನು
ಮುಂದುವರಿಸಿತಾದರೂ, ಅನುಭವಿ ಇರಾನ್‌ ಎದುರು ಮತ್ತೆ ಮೇಲುಗೈ ಸಾಧಿಸಲು ಆಗಲೇ ಇಲ್ಲ. ಇದೇ ವೇಳೆ ಟೇ ಡೊಕ್‌, ಡೊಂಗ್‌ಲೀ, ಸ್ಯೊಂಗ್‌ ಕಿಮ್‌ ರೈಡಿಂಗ್‌ನಲ್ಲಿ ವೈಫಲ್ಯ ಕಂಡರು. ಅನುಭವಿ ಮೆರಾಜ್‌ ಅವರಿಂದ ಅತ್ಯುತ್ತಮ ಆಟ ಮೂಡಿ ಬಂದಿತು. ಕೊರಿಯಾಕ್ಕೆ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ.

ಇರಾನ್‌ ತಂಡದವರು ರೈಡಿಂಗ್‌ನಲ್ಲಿ ಒಟ್ಟು 12 ಪಾಯಿಂಟ್ಸ್‌ ಗಳಿಸಿದರೆ, ಕೊರಿಯ 8 ಪಾಯಿಂಟ್ಸ್‌ ಗಳಿಸಿತು. ಟ್ಯಾಕ್ಲಿಂಗ್‌ನಲ್ಲಿ ಗಮನ ಸೆಳೆದ ಇರಾನ್‌ ಒಟ್ಟು 11 ಪಾಯಿಂಟ್ಸ್‌ ಗಳಿಸಿದರೆ, ಕೊರಿಯ ಗಳಿಸಲು ಶಕ್ತವಾಗಿದ್ದು ಕೇವಲ 6 ಪಾಯಿಂಟ್ಸ್‌. ಇರಾನ್‌ ತಂಡದ ಮೆರಾಜ್‌ ಷೇಕ್‌ (7ಪಾಯಿಂಟ್ಸ್‌), ಅಬೊಜರ್‌ ಮೆಘಾನಿ (4) ಮತ್ತು ಫರಾದ್‌ (3) ಉತ್ತಮ ವಾಗಿ ಆಡಿದರು. ಕೊರಿಯಾದ ‘ಪ್ರೊ ಕಬಡ್ಡಿ ಅನುಭವಿ’ ಜಾಂಗ್‌ ಕುನ್‌ಲೀ 4 ಪಾಯಿಂಟ್ಸ್‌ ಗಳಿಸಿದರೆ, ಟೇ ಬೊಮ್‌ ಕಿಮ್‌ 3 ಪಾಯಿಂಟ್ಸ್‌ ಪಡೆದರು. ಡೊಂಗ್‌ಜು, ಚಾಂಗ್‌ಕೊ, ಡೊಂಗ್‌ಲಿ ತಲಾ 2 ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT