ADVERTISEMENT

ಫೈನಲ್‌ಗೆ ಸಾನಿಯಾ– ಕಾರಾ

ಡಬ್ಲ್ಯುಟಿಎ ಫೈನಲ್ಸ್‌ ಟೆನಿಸ್‌; ಸೆರೆನಾಗೆ ಜಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಸಿಂಗಪುರ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲಾಕ್‌ ಜೋಡಿ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ಸ್‌ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಾನಿಯಾ–ಕಾರಾ ಜೋಡಿ 4-6, 7-5, 11-9ರಲ್ಲಿ ಕ್ವೆಟಾ ಪೆಶ್‌ಚ್ಕೆ ಮತ್ತು ಕ್ಯಾಥರಿನಾ ಸ್ರೆಬೊಟ್ನಿಕ್‌ ಎದುರು ಗೆಲುವು ದಾಖಲಿಸಿತು.

ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ ಸಾನಿಯಾ–ಕಾರಾ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೆ ಸೂಪರ್ ಟೈ ಬ್ರೇಕರ್‌ನಲ್ಲಿ 6–9ರಲ್ಲಿ ಹಿನ್ನಡೆ ಹೊಂದಿದ್ದರೂ ಐದು ಪಾಯಿಂಟ್‌ ಕಲೆಹಾಕಿ ಗೆಲುವು ಒಲಿಸಿಕೊಂಡರು. ಈ ಜೋಡಿ ಫೈನಲ್‌ನಲ್ಲಿ ಚೀನಾ ತೈಪೆಯ ಸು ವಿ ಸಿಯ್‌ ಮತ್ತು ಚೀನಾದ ಶುಯ್‌ ಪೆಂಗ್ ಸವಾಲು ಎದುರಿಸಲಿದೆ.

ಫೈನಲ್‌ಗೆ ಸೆರೆನಾ: ಇಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟರು. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸೆರೆನಾ 2–6, 6–3, 7–6ರಲ್ಲಿ ಡೆನ್ಮಾರ್ಕ್‌ನ ಕರೋಲಿನ್‌ ವೋಜ್ನಿ ಯಾಕಿ ಎದುರು ಜಯಭೇರಿ ಮೊಳಗಿಸಿದರು.

ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅಮೆರಿಕದ ಆಟಗಾರ್ತಿ, ರೊಮೇನಿಯದ ಸಿಮೊನಾ ಹಲೆಪ್‌ ಎದುರು ಸೆಣಸ ಲಿದ್ದಾರೆ. ನಾಲ್ಕರ ಘಟ್ಟದ ಹೋರಾಟದಲ್ಲಿ ಹಾಲೆಪ್‌ 6–2, 6–2ರ ನೇರ ಸೆಟ್‌ಗಳಿಂದ  ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.