ADVERTISEMENT

ಫೈನಲ್‌ ಮೇಲೆ ರೈನಾ–ವಾರ್ನರ್ ಕಣ್ಣು

ಇಂದು ಸನ್‌ರೈಸರ್ಸ್ ಹೈದರಾಬಾದ್‌ –ಗುಜರಾತ್ ಲಯನ್ಸ್‌ ‘ಸೆಮಿಫೈನಲ್’; ಯುವರಾಜ್ ಸಿಂಗ್, ಡ್ವೇನ್ ಸ್ಮಿತ್ ಪ್ರಮುಖ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:40 IST
Last Updated 26 ಮೇ 2016, 19:40 IST
ಫೈನಲ್‌ ಮೇಲೆ ರೈನಾ–ವಾರ್ನರ್ ಕಣ್ಣು
ಫೈನಲ್‌ ಮೇಲೆ ರೈನಾ–ವಾರ್ನರ್ ಕಣ್ಣು   

ನವದೆಹಲಿ: ‘ಮೇ 29ರಂದು ಮತ್ತೆ ಬೆಂಗಳೂರಿನಲ್ಲಿ ಆಡಲು ಬರುತ್ತೇವೆ. ಆಗ ಆರ್‌ಸಿಬಿಗೆ ಸವಾಲು ಒಡ್ಡುತ್ತೇವೆ’–

ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಎದುರು ಸೋತ ನಂತರ ಮಾಧ್ಯಮಗಳಿಗೆ ಹೇಳಿದ ಮಾತಿದು.

ಅವರು ಮತ್ತೆ ಆರ್‌ಸಿಬಿ ಎದುರು ಕಣಕ್ಕಿಳಿಯಬೇಕಾದರೆ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಿ ಗೆಲ್ಲಬೇಕು. ಲೀಗ್ ಹಂತದಲ್ಲಿ ಸನ್‌ರೈಸರ್ಸ್ ಮುಖಾಮುಖಿಯಾದ ಎರಡು ಬಾರಿಯೂ  ಲಯನ್ಸ್  ಸೋತಿತ್ತು.

ಆದರೆ, ಸನ್‌ರೈಸರ್ಸ್‌ ತಂಡ ಮಾತ್ರ ತನ್ನ ಛಲದ ಆಟದ ಮೂಲಕ ಗಮನ ಸೆಳೆಯುತ್ತಿದೆ. ಡೇವಿಡ್ ವಾರ್ನರ್‌ ಬಳಗದ ಆಲ್‌ರೌಂಡ್ ಆಟವು   ಎದುರಾಳಿಗಳಿಗೆ ಕಠಿಣ ಸವಾಲು ಒಡ್ಡುವುದು ಖಚಿತ.

ಬ್ಯಾಟ್ಸ್‌ಮನ್‌ಗಳ ಅಬ್ಬರ ಜೋರಾಗಿರುವ ಈ ಟೂರ್ನಿಯಲ್ಲಿ ಮೂರು ಬಾರಿ ಪಂದ್ಯಶ್ರೇಷ್ಠ  ಪಡೆದ ಬೌಲರ್ ಭುವನೇಶ್ವರ್ ಕುಮಾರ್, ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಫಿಜರ್ ರೆಹಮಾನ್, ಮೊಯಿಸೆಸ್ ಹೆನ್ರಿಕ್ಸ್, ಬರೀಂದರ್ ಸರಾನ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಸನ್‌ರೈಸರ್ಸ್ ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಎಲಿಮಿನೇಟರ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹೆನ್ರಿಕ್ಸ್ ಅವರ ಬೌಲಿಂಗ್‌ ಮುಂದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟ ನಡೆದಿರಲಿಲ್ಲ. 
ಅನುಭವಿ ವೇಗಿ ಆಶಿಶ್ ನೆಹ್ರಾ ಅವರ ಅನುಪಸ್ಥಿತಿಯಲ್ಲಿಯೂ ಸನ್‌ರೈಸರ್ಸ್ ತಂಡದ ಬೌಲಿಂಗ್ ಒಂಚೂರೂ ಕಳೆಗುಂದಿಲ್ಲ .  ವಿಕೆಟ್‌ ಕಬಳಿಸುವುದರ ಜೊತೆಗೆ ರನ್‌ ಗಳಿಕೆಗೆ ಕಡಿವಾಣ ಹಾಕುವ ಕಲೆಯೂ ಯುವ ಬೌಲರ್‌ಗಳಿಗೆ ಕರಗತವಾಗಿದೆ. 

ಈ ಬೌಲರ್‌ಗಳ ದಾಳಿಯನ್ನು ಲಯನ್ಸ್‌ ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ಆ್ಯರನ್ ಫಿಂಚ್, ಸುರೇಶ್ ರೈನಾ, ಡ್ವೇನ್ ಸ್ಮಿತ್, ದಿನೇಶ್ ಕಾರ್ತಿಕ್  ಅವರು ಎದುರಿಸಿ ನಿಂತರೆ ಮಾತ್ರ ಗೆಲುವು ಸಾಧ್ಯ.

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಆರಂಭಿಕ ಜೋಡಿಯು ಹೆಚ್ಚು ರನ್‌ ಗಳಿಸಿರಲಿಲ್ಲ. ಆದರೆ, ಸುರೇಶ್ ರೈನಾ ಮಿಂಚಿದ್ದರು. ಬ್ರೆಂಡನ್ ಮೆಕ್ಲಮ್, ಆ್ಯರನ್ ಫಿಂಚ್, ದಿನೇಶ್ ಕಾರ್ತಿಕ್  ಅವರು ಫಾರ್ಮ್‌ಗೆ ಮರಳಿದರೆ ಲಯನ್ಸ್‌   ಗೆ ಮೇಲುಗೈ ಸಾಧಿಸಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಸನ್‌ರೈಸರ್ಸ್ ಬ್ಯಾಟಿಂಗ್ ಪಡೆಗೆ ಮೊದಲು ಬ್ಯಾಟಿಂಗ್ ಮಾಡಿ ಸವಾಲಿನ ಮೊತ್ತ ಪೇರಿಸುವ ಸಾಮರ್ಥ್ಯವೂ ಇದೆ.  ಗುರಿಯನ್ನು ಬೆನ್ನತ್ತಿ ಯಶಸ್ವಿಯಾಗುವ ಶಕ್ತಿಯೂ ಇದೆ.

ನಾಯಕ ಡೇವಿಡ್ ವಾರ್ನರ್, ಶಿಖರ್ ಧವನ್, ಯುವರಾಜ್ ಸಿಂಗ್, ಹೆನ್ರಿಕ್ಸ್,  ಒತ್ತಡದಲ್ಲಿರುವ ತಂಡಕ್ಕೆ ತಮ್ಮ ಬ್ಯಾಟಿಂಗ್ ಮೂಲಕ ಬಲ ತುಂಬುವ ಸಮರ್ಥರು.

ಕೆಕೆಆರ್ ಎದುರಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಮತ್ತು ಹೆನ್ರಿಕ್ಸ್ ಅವರ ಬ್ಯಾಟಿಂಗ್ ಬಲದಿಂದ ತಂಡಕ್ಕೆ ಹೋರಾಟದ ಮೊತ್ತ ಪೇರಿಸಲು ಸಾಧ್ಯವಾಗಿತ್ತು.

ಹೋದ ವರ್ಷ  ಪ್ಲೇ ಆಫ್ ಹಂತ ಪ್ರವೇಶಿಸುವಲ್ಲಿ ಸನ್‌ರೈಸರ್ಸ್ ವಿಫಲವಾಗಿತ್ತು. ಆದರೆ ಈ ಬಾರಿ ಅಮೋಘ ಪ್ರದರ್ಶನದಿಂದ ಕ್ವಾಲಿಫೈಯರ್ (2) ಹಂತಕ್ಕೆ ಬಂದಿದೆ.

ಗುಜರಾತ್ ಲಯನ್ಸ್‌ ತಂಡಕ್ಕೆ ಇದು  ಚೊಚ್ಚಲ ಟೂರ್ನಿ. ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು  ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಎರಡು ವರ್ಷಗಳಿಗೆ ಅಮಾನತುಗೊಂಡಿವೆ.

ಚೆನ್ನೈ ತಂಡದಲ್ಲಿದ್ದ ಸುರೇಶ್ ರೈನಾ ಲಯನ್ಸ್‌ ತಂಡದ ನಾಯಕರಾಗಿದ್ದಾರೆ. ಇಲ್ಲಿಯವರೆಗೆ ತಮ್ಮ ಬ್ಯಾಟಿಂಗ್ ಜವಾಬ್ದಾರಿ ಮತ್ತು ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.  ಆದರೆ, ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಎ.ಬಿ. ಡಿವಿಲಿಯರ್ಸ್‌ ಆಟದ ಮುಂದೆ ಅವರ ತಂಡದ ಬೌಲರ್‌ಗಳು ಮಂಕಾಗಿದ್ದರು. ಆದರೆ, ಈಗ ಲಭಿಸಿರುವ ಇನ್ನೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ರೈನಾ ಯೋಜನೆ ಹೆಣೆದಿದ್ದಾರೆ. ಸನ್‌ರೈಸರ್ಸ್ ತಂಡದ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ. ಒಟ್ಟಾರೆ ಈ ಪಂದ್ಯವು ಐಪಿಎಲ್‌ ಟೂರ್ನಿಯ ‘ಸೆಮಿಫೈನಲ್’ ಸ್ವರೂಪ ಪಡೆದುಕೊಂಡಿದೆ. ಇವರಿಬ್ಬರ ಕಾದಾಟಕ್ಕೆ ಫಿರೋಜ್ ಶಾ ಕೋಟ್ಲಾ ಮೈದಾನವೂ ಸಿದ್ಧವಾಗಿದೆ.

ತಂಡಗಳು ಇಂತಿವೆ
ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶಿಖರ್ ಧವನ್, ಯುವರಾಜ್ ಸಿಂಗ್, ಮೊಯಿಸೆಸ್ ಹೆನ್ರಿಕ್ಸ್, ಎಯಾನ್ ಮಾರ್ಗನ್, ದೀಪಕ್ ಹೂಡಾ, ನಮನ್ ಓಜಾ, ಕರ್ಣ ಶರ್ಮಾ, ಮುಸ್ತಫಿಜರ್ ರೆಹಮಾನ್, ಭುವನೇಶ್ವರ್ ಕುಮಾರ್, ಬರೀಂದರ್ ಸರಾನ್ ಟ್ರೆಂಟ್ ಬೌಲ್ಟ್, ಬೆನ್ ಕಟಿಂಗ್, ಕೇನ್ ವಿಲಿಯಮ್ಸನ್, ಆಶಿಶ್ ರೆಡ್ಡಿ, ರಿಕಿ ಬುಯ್ ಬಿಪುಲ್ ಶರ್ಮಾ, ಸಿದ್ಧಾರ್ಥ್ ಕೌಲ್, ಅಭಿಮನ್ಯು ಮಿಥುನ್, ವಿಜಯಶಂಕರ್, ಟಿ. ಸುಮನ್, ಆದಿತ್ಯ ತಾರೆ.

ಗುಜರಾತ್ ಲಯನ್ಸ್:  ಸುರೇಶ್ ರೈನಾ (ನಾಯಕ), ಡ್ವೇನ್ ಸ್ಮಿತ್, ಬ್ರೆಂಡನ್ ಮೆಕ್ಲಮ್, ಆ್ಯರನ್ ಫಿಂಚ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಡೇಲ್ ಸ್ಟೆಯ್ನ್, ಜೇಮ್ಸ್ ಫಾಕ್ನರ್, ಇಶಾನ್ ಕಿಶನ್, ಪ್ರವೀಣಕುಮಾರ್, ಧವಳ್ ಕುಲಕರ್ಣಿ, ಶಿವಿಲ್ ಕೌಶಿಕ್, ಡ್ವೇನ್ ಬ್ರಾವೊ, ಸರಬ್ಜೀತ್ ಲಡ್ಡಾ, ಅಮಿತ್ ಮಿಶ್ರಅ, ಆಕಾಶದೀಪ್ ನಾಥ್, ಪರಸ್ ಡೋಗ್ರಾ, ಏಕಲವ್ಯ ದ್ವಿವೇದಿ, ಶಾದಾಬ್ ಜಕಾತಿ, ಪ್ರದೀಪ್ ಸಂಗ್ವಾನ್, ಜಯದೇವ್ ಶಾ, ಉಮಂಗ್ ಶರ್ಮಾ, ಪ್ರವೀಣ್ ತಾಂಬೆ, ಆ್ಯಂಡ್ರ್ಯೂ ಟೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT