ADVERTISEMENT

ಬಲಿಷ್ಠರ ನಡುವೆ ಪ್ರತಿಷ್ಠೆಯ ಹೋರಾಟ

ಐ ಲೀಗ್ ಫುಟ್‌ಬಾಲ್‌ : ಬಿಎಫ್‌ಸಿ ತಂಡಕ್ಕೆ ಚಾಂಪಿಯನ್‌ ಮೋಹನ್‌ ಬಾಗನ್‌ ಸವಾಲು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಬಿಎಫ್‌ಸಿ ತಂಡದ ಆಟಗಾರರಾದ ಜಾನ್‌ ಜಾನ್ಸನ್‌ (ಎಡ) ಮತ್ತು ಸುನಿಲ್‌ ಚೆಟ್ರಿ ಅವರು ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಕ್ಷಣ  ಪ್ರಜಾವಾಣಿ ಚಿತ್ರ/ ಆರ್‌. ಶ್ರೀಕಂಠ ಶರ್ಮಾ
ಬಿಎಫ್‌ಸಿ ತಂಡದ ಆಟಗಾರರಾದ ಜಾನ್‌ ಜಾನ್ಸನ್‌ (ಎಡ) ಮತ್ತು ಸುನಿಲ್‌ ಚೆಟ್ರಿ ಅವರು ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಕ್ಷಣ ಪ್ರಜಾವಾಣಿ ಚಿತ್ರ/ ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಹಾಲಿ ಚಾಂಪಿಯನ್‌ ಮೋಹನ್ ಬಾಗನ್‌ ಮತ್ತು ಹೋದ ವರ್ಷದ ರನ್ನರ್ಸ್‌ ಅಪ್‌ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡಗಳ ನಡುವಣ ಐ ಲೀಗ್‌ ಪಂದ್ಯ ಶನಿವಾರ ನಡೆಯಲಿದ್ದು ಬಲಿಷ್ಠ ತಂಡಗಳ ಈ ಹೋರಾಟ  ಕುತೂಹಲಕ್ಕೆ ಕಾರಣವಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದೇ ಕ್ರೀಡಾಂಗಣದಲ್ಲಿ ಹೋದ ವರ್ಷ ಉಭಯ ತಂಡಗಳು ಐ ಲೀಗ್‌ ಟೂರ್ನಿಯ ಫೈನಲ್‌ ಆಡಿದ್ದವು. ಭಾರಿ ಮಳೆ ಸುರಿದಿದ್ದರೂ ಅಭಿಮಾನಿ ಗಳ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರ ಲಿಲ್ಲ. ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ಆ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ತಿರುಗೇಟು ನೀಡಲು ಕಾಯು ತ್ತಿದೆ. ಇದಕ್ಕೆ ತಕ್ಕ ಆತ್ಮವಿಶ್ವಾಸವೂ ತವರಿನ ತಂಡದಲ್ಲಿದೆ.

ಬೆಂಗಳೂರಿನ ತಂಡ ಮೂರು ದಿನಗಳ ಹಿಂದೆ ಡಿ.ಕೆ. ಶಿವಾಜಿಯನ್ಸ್ ಎದುರು 4–1 ಗೋಲುಗಳಿಂದ ಗೆಲುವು ಪಡೆದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಏಳು ಪಂದ್ಯಗಳನ್ನಾಡಿ ರುವ ಬಿಎಫ್‌ಸಿ ಐದರಲ್ಲಿ ಗೆಲುವು ಪಡೆದು, ಎರಡು ಪಂದ್ಯಗಳಲ್ಲಿ ಸೋತಿ ದೆ. ಒಟ್ಟು 15 ಪಾಯಿಂಟ್ಸ್‌ ಹೊಂದಿದೆ.

ಬಿಎಫ್‌ಸಿ ತಂಡ ರಾಂತಿ ಮಾರ್ಟಿನ್ಸ್‌, ಚೆಟ್ರಿ ಮತ್ತು ಸಿ.ಕೆ. ವಿನೀತ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಾರ್ಟಿನ್ಸ್‌ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 7 ಗೋಲುಗಳನ್ನು ಬಾರಿಸಿದ್ದಾರೆ. ವಿನೀತ್‌ ಮೂರು ಗೋಲು ಕಲೆ ಹಾಕಿದ್ದಾರೆ.

ಶಿವಾಜಿಯನ್ಸ್ ಎದುರಿನ ಪಂದ್ಯದಲ್ಲಿ ಗೋಲು ಗಳಿಸಿದ್ದ ಉತ್ತರ ಕೊರಿಯಾದ ಕಿಮ್‌ ಸಾಂಗ್‌ ಯೊಂಗ್‌, ಶಂಕರ್‌ ಮತ್ತು ಲೆನ್‌ ಡೊಂಗಲ್‌ ಅವರ ಮೇಲೂ ಹೆಚ್ಚು ಜವಾಬ್ದಾರಿಯಿದೆ. ಮೋಹನ್‌ ಬಾಗನ್‌ ಉತ್ತಮ ಮಿಡ್‌ಫೀಲ್ಡರ್ಸ್‌ ಮತ್ತು ಫಾರ್ವರ್ಡ್ಸ್‌ ಆಟಗಾರರನ್ನು ಹೊಂದಿದೆ. ಆದ್ದರಿಂದ ಬಿಎಫ್‌ಸಿ ತಂಡದ  ಜಾನ್‌ ಜಾನ್ಸನ್‌, ರಿನೊ ಆ್ಯಂಟೊ  ಮತ್ತು ಕರ್ಟಸ್‌ ಒಸಾನೊ ಮೇಲೆ ಪಂದ್ಯ ಗೆಲ್ಲಿಸಿಕೊಡಬೇಕಾದ ಹೊಣೆಯಿದೆ.

ಬಿಎಫ್‌ಸಿ ಪ್ರಮುಖ ಆಟಗಾರರಾದ ರಾಬಿನ್‌ ಸಿಂಗ್, ಜೋಷು ವಾಕರ್‌ ಮತ್ತು ಯೂಜಿನ್‌ಸನ್‌ ಲಿಂಗ್ಡೊ  ಈ ಪಂದ್ಯದಲ್ಲಿ ಆಡುವುದು ಖಚಿತವಿಲ್ಲ. ಆದರೆ ಇದರಿಂದ ತಂಡದ ಶಕ್ತಿ ಕಡಿಮೆಯಾಗಿಲ್ಲ ಎಂದು ಮುಖ್ಯ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ಹೇಳಿದ್ದಾರೆ.

‘ಪ್ರಮುಖ ಆಟಗಾರರು ಅಲಭ್ಯರಾದರೂ ನಮ್ಮ ತಂಡ ಉತ್ತಮ ಬೆಂಚ್‌ ಸ್ಟ್ರಂಥ್‌ ಹೊಂದಿದೆ. ಆದ್ದರಿಂದ ಬಲಿಷ್ಠ ತಂಡದ ಎದುರು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ವೆಸ್ಟ್‌ವುಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎದುರಾಳಿ ಬಲಿಷ್ಠ: ಹಿಂದಿನ ಪಂದ್ಯಗಳಲ್ಲಿ ಐಜ್ವಾಲ್‌, ಸಲಗಾಂವ್ಕರ್‌, ಶಿವಾಜಿಯನ್ಸ್‌ ಎದುರಿನ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಬಾಗನ್ ತಂಡ ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದು ಕಠಿಣ ಪೈಪೋಟಿ ಒಡ್ಡುವುದು ನಿಶ್ಚಿತ.

ಬಾಗನ್‌ ಈ ಬಾರಿಯ ಟೂರ್ನಿಯಲ್ಲಿ ಒಂದೂ ಪಂದ್ಯ ಸೋತಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. ಆದ್ದರಿಂದ ಚಾಂಪಿಯನ್ನರು ಅಜೇಯ ಓಟ ಮುಂದುವರಿಸುವ ಗುರಿ ಹೊಂದಿದ್ದಾರೆ. ಎರಡೂ ತಂಡಗಳ ಆಟಗಾರರು ಶುಕ್ರವಾರ ಕಠಿಣ ತಾಲೀಮು ನಡೆಸಿದರು.

‘ಬಿಎಫ್‌ಸಿ ತಂಡದ ಸಾಮರ್ಥ್ಯವೇನೆಂಬುದು ಗೊತ್ತು. ಆದರೆ ಮೂರು ವರ್ಷಗಳಿಂದ ನಮ್ಮ ತಂಡ ಸ್ಥಿರ ಪ್ರದರ್ಶನ ನೀಡುತ್ತೇವೆ. ಎಲ್ಲಾ ವಿಭಾಗಗಳಲ್ಲಿ ಬಲಿಷ್ಠವಾಗಿದ್ದೇವೆ. ಶನಿವಾರದ ಪಂದ್ಯ  ಸವಾಲಿನಿಂದ ಕೂಡಿರಲಿದೆ’ ಎಂದು ಬಾಗನ್‌ ತಂಡದ ಮುಖ್ಯ ಕೋಚ್‌ ಸಂಜಯ್‌ ಸೇನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.