ADVERTISEMENT

ಬಾತ್ರಾ, ಮೆಹ್ತಾ ಆಯ್ಕೆ ಘೋಷಣೆ ಇಂದು

ಪಿಟಿಐ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST

ನವದೆಹಲಿ: ಭಾರತೀಯ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮುಖ್ಯಸ್ಥ ನರೀಂದರ್ ಬಾತ್ರಾ ಅವರು ಗುರುವಾರ ಆಯ್ಕೆಯಾಗುವುದು ಖಚಿತವಾಗಿದೆ.

ಇಲ್ಲಿ ನಡೆಯಲಿರುವ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರ ಆಯ್ಕೆ ನಡೆಯಲಿದ್ದು ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ್‌ ಮೆಹ್ತಾ ಅವರು ಮರು ಆಯ್ಕೆಯಾಗಲಿದ್ದಾರೆ.

ಅಖಿಲ ಭಾರತ ಟೆನಿಸ್‌ ಸಂಸ್ಥೆಯ ಅಧ್ಯಕ್ಷ ಅನಿಲ್ ಖನ್ನಾ ಈಚೆಗೆ ನಾಮಪತ್ರ ವಾಪಸ್‌ ತೆಗೆದುಕೊಂಡ ಕಾರಣ ಬಾತ್ರಾ ಅವರ ಆಯ್ಕೆ ಪ್ರಕ್ರಿಯೆಯ ಔಪಚಾರಿಕತೆ ಮಾತ್ರ ಉಳಿದಿದೆ. ಖಜಾಂಚಿ ಸ್ಥಾನಕ್ಕೂ ಸ್ಪರ್ಧಿಸಿರುವ ಖನ್ನಾ ಇನ್ನೂ ನಾಮಪತ್ರ ವಾಪಸ್ ಪಡೆಯಲಿಲ್ಲ (ಡಿಸೆಂಬರ್‌ 3 ಕೊನೆಯ ದಿನವಾಗಿತ್ತು‌).

ADVERTISEMENT

ಬಾತ್ರಾ ಅವರನ್ನು ಬೆಂಬಲಿಸುವುದಾಗಿ ಚುನಾವಣಾ ಅಧಿಕಾರಿಗೆ ತಿಳಿಸಿದ್ದ ಅವರು ಐಒಎ ಕುಟುಂಬದ ಒಗ್ಗಟ್ಟು ಕಾಪಾಡಲು ಸ್ಪರ್ಧೆಯಿಂದ ದೂರ ಉಳಿಯುವುದಾಗಿ ಹೇಳಿದ್ದರು. ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್ ಅಧ್ಯಕ್ಷ ಬೀರೇಂದ್ರ ಬೈಶ್ಯ ಅವರೂ ಆರಂಭದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ನಂತರ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದರು.

ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ
ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ ವಕೀಲ ರಾಹುಲ್ ಮೆಹ್ತಾ ಅವರು ಮಧ್ಯಂತರ ತಡೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕ್ರೀಡಾ ನೀತಿಯನ್ನು ಉಲ್ಲಂಘಿಸಿ ಚುನಾವಣೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.

ಅಧ್ಯಕ್ಷ ಮತ್ತು ಪ್ರಧಾನ ಕಾಯರ್ದರ್ಶಿ ಹುದ್ದೆ ಹೊರತುಪಡಿಸಿ ಇತರ ಎಲ್ಲ ಸ್ಥಾನಗಳ ಆಯ್ಕೆ ಗುರುವಾರ ರಹಸ್ಯ ಮತದಾನದ ಮೂಲಕ ನಡೆಯಲಿದೆ. ಹಿರಿಯ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಾರ್ಖಂಡ್ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥ ಆರ್‌.ಕೆ.ಆನಂದ್‌ ಮತ್ತು ಕಬಡ್ಡಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಜನಾರ್ದನ್‌ ಸಿಂಗ್ ಗೆಹ್ಲೋಟ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಖಜಾಂಚಿ ಸ್ಥಾನದ ಸ್ಪರ್ಧೆಯಲ್ಲಿ ಆನಂದೇಶ್ವರ ಪಾಂಡೆ, ಮುಖೇಶ್‌ ಕುಮಾರ್‌ ಮತ್ತು ರಾಕೇಶ್ ಗುಪ್ತಾ ಇದ್ದಾರೆ. ಉಪಾಧ್ಯಕ್ಷರ ಎಂಟು ಸ್ಥಾನಗಳಿಗೆ 12 ಮಂದಿ ಕಣದಲ್ಲಿದ್ದಾರೆ. ಜಂಟಿ ಕಾರ್ಯದರ್ಶಿಗಳ ಆರು ಸ್ಥಾನಗಳು ಇದ್ದು ಒಂಬತ್ತು ಮಂದಿ ಸ್ಪರ್ಧಿಸಿದ್ದಾರೆ. ಚುನಾವಣೆಯಲ್ಲಿ ಒಟ್ಟು 184 ಮಂದಿ ಮತದಾನ ಮಾಡಲಿದ್ದಾರೆ.

ಐಒಎ ಅಥ್ಲೀಟ್‌ ಆಯೋಗದ ಸದಸ್ಯರಾದ ಪಿ.ಟಿ.ಉಷಾ ಹಾಗೂ ರಾಜೀವ್‌ ತೋಮರ್‌ ಕೂಡ ಇವರಲ್ಲಿ ಒಳಗೊಂಡಿದ್ದಾರೆ. 116 ಮಂದಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ನ ಸದಸ್ಯರು ಇದ್ದು ಉಳಿದವರು ರಾಜ್ಯ ಒಲಿಂಪಿಕ್‌ ಸಂಸ್ಥೆಯ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.