ADVERTISEMENT

ಬಿಎಫ್‌ಸಿಗೆ ‘ಚೊಚ್ಚಲ’ ಜಯದ ಕನಸು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:37 IST
Last Updated 18 ನವೆಂಬರ್ 2017, 19:37 IST
ಐಎಸ್‌ಎಲ್‌ನಲ್ಲಿ ಭಾನುವಾರ ಚೊಚ್ಚಲ ಪಂದ್ಯ ಆಡಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡದ ಆಟಗಾರರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ
ಐಎಸ್‌ಎಲ್‌ನಲ್ಲಿ ಭಾನುವಾರ ಚೊಚ್ಚಲ ಪಂದ್ಯ ಆಡಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡದ ಆಟಗಾರರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ   

ಬೆಂಗಳೂರು: ಐ ಲೀಗ್‌ನ ಪದಾರ್ಪಣೆ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದು ದಾಖಲೆ ನಿರ್ಮಿಸಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್‌ನಲ್ಲೂ (ಐಎಸ್‌ಎಲ್‌) ಭರವಸೆಯಿಂದ ಕಣಕ್ಕೆ ಇಳಿಯಲು ಸಜ್ಜಾಗಿದೆ. ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಬಿಎಫ್‌ಸಿ ಚೊಚ್ಚಲ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲಿದೆ. ಭಾನುವಾರ ರಾತ್ರಿ ನಡೆಯಲಿರುವ ಪಂದ್ಯಕ್ಕೆ ನಗರದ ಶ್ರೀ ಕಂಠೀರವ ಕ್ರೀಡಾಂಗಣ ಸಿದ್ಧಗೊಂಡಿದೆ.

ಕಳೆದ ಬಾರಿ ಲೀಗ್‌ನಲ್ಲಿ ಸೆಮಿಫೈನಲ್‌ಗೆ ಏರಿದ್ದ ಮುಂಬೈ ಸಿಟಿ ತಂಡದ ನಾಯಕರಾಗಿದ್ದ ಸುನಿಲ್ ಚೆಟ್ರಿ ಈಗ ಬೆಂಗಳೂರು ಎಫ್‌ಸಿಯನ್ನು ಮುನ್ನಡೆಸುತ್ತಿದ್ದಾರೆ. ಎರಡು ಬಾರಿ ಐ ಲೀಗ್ ಚಾಂಪಿಯನ್ ಆಗಿರುವ ಮತ್ತು ಈ ಬಾರಿ ಫೆಡರೇಷನ್‌ ಕಪ್ ಟ್ರೋಫಿ ಎತ್ತಿ ಹಿಡಿದಿರುವ ಬಿಎಫ್‌ಸಿ ತವರಿನ ಅಂಗಣದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಸಮರ್ಥ ಆಟಗಾರರನ್ನು ಹೊಂದಿರುವ ಮುಂಬೈ ಸಿಟಿ ತಂಡಕ್ಕೂ ಲೀಗ್‌ನ ಮೊದಲ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ.

ಐದು ಮಂದಿ ವಿದೇಶಿ ಆಟಗಾರರನ್ನು ಬಿಎಫ್‌ಸಿ ಕಣಕ್ಕೆ ಇಳಿಸುವ ಸಾಧ್ಯತೆ ಇದ್ದು ರಕ್ಷಣಾ ವಿಭಾಗದಲ್ಲಿ ಜಾನ್ ಜಾನ್ಸನ್ ಅವರಿಗೆ ಬೌಲಿಯೊ ನಾಬ್ರಿಯೆಗಾ, ಎಡು ಗ್ರೇಸಿಯಾ ಮತ್ತು ಮಿಕು ಸಹಕಾರದ ಬಲ ಇದೆ. ಹಿಮ್ಮಡಿಗೆ ಗಾಯಗೊಂಡಿರುವ ಲಾಲ್‌ತುವಾಮಾವ್ಯಾ ಅವರ ಬದಲಿಗೆ ಗೋಲ್‌ಕೀಪರ್ ಗುರುಪ್ರೀತ್‌ ಸಿಂಗ್‌ ಅವರನ್ನು ಬಿಎಫ್‌ಸಿ ಕಣಕ್ಕೆ ಇಳಿಸಲಿದೆ.

ADVERTISEMENT

ಕೋಸ್ಟಾ ರಿಕಾದ ಅಲೆಕ್ಸಾಂಡ್ರೆ ಗುಮರೆಜ್ ಅವರ ಗರಡಿಯಲ್ಲಿ ಪಳಗಿರುವ ಮುಂಬೈ ಸಿಟಿ ತಂಡದವರು ಸ್ಪೇನ್‌ನಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಮರಳಿದ್ದಾರೆ. ಹೀಗಾಗಿ ತಂಡ ಪೂರ್ಣ ವಿಶ್ವಾಸದಲ್ಲಿದೆ. ರೊಮೇನಿಯಾದ ಲೂಸಿಯಾನ್‌ ಗೋಯನ್ ನಾಯಕತ್ವದ ತಂಡದಲ್ಲಿ ಅಮರಿಂದರ್ ಸಿಂಗ್ ಮತ್ತು ಅರಿಂದಮ್‌ ಭಟ್ಟಾಚಾರ್ಯ ಅವರನ್ನು ಒಳಗೊಂಡ ಉತ್ತಮ ಆಟಗಾರರು ಇದ್ದಾರೆ.

ಚೆನ್ನೈ–ಗೋವಾ ಪೈಪೋಟಿ: ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಸೆಣಸಲಿವೆ. ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಚೆನ್ನೈಯಿನ್ ಎಫ್‌ಸಿ ಈ ಬಾರಿ ಭಾರಿ ಸಿದ್ದತೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

ಇಂದಿನ ಪಂದ್ಯಗಳು

ಚೆನ್ನೈಯಿನ್‌ ಎಫ್‌ಸಿ– ಎಫ್‌ಸಿ ಗೋವಾ

ಸ್ಥಳ: ಚೆನ್ನೈ

ಆರಂಭ: ಸಂಜೆ 5.30

ಬಿಎಫ್‌ಸಿ – ಮುಂಬೈ ಸಿಟಿ

ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು

ಆರಂಭ: ರಾತ್ರಿ 8.00

* ಕ್ಲಬ್‌ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು. ಸಮರ್ಥ ಕೋಚ್ ಗರಡಿಯಲ್ಲಿ ಪಳಗಿರುವ ಅತ್ಯುತ್ತಮ ತಂಡದ ವಿರುದ್ಧ ಬಿಎಫ್‌ಸಿ ಚೊಚ್ಚಲ ಪಂದ್ಯ ಆಡಲಿದ್ದು ಗೆಲುವಿನ ಭರವಸೆ ಇದೆ.

–ಆಲ್ಬರ್ಟ್ ರೋಕಾ, ಬಿಎಫ್‌ಸಿ ಮುಖ್ಯ ಕೋಚ್‌

* ವಿದೇಶಿ ಮತ್ತು ಸ್ಥಳೀಯ ಆಟಗಾರರ ಉತ್ತಮ ಸಮ್ಮಿಲನ ನಮ್ಮ ತಂಡದಲ್ಲಿದೆ. ಎದುರಾಳಿ ತಂಡದ ಸಾಮರ್ಥ್ಯ ನಮಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಲೀಗ್‌ನಲ್ಲಿ ಉತ್ತಮ ಸಾಧನೆಯ ನಿರೀಕ್ಷೆ ಇದೆ.

–ಅಲೆಕ್ಸಾಂಡ್ರೆ ಗುಮರೆಜ್, ಮುಂಬೈ ಸಿಟಿ ಎಫ್‌ಸಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.