ADVERTISEMENT

ಬಿಎಫ್‌ಸಿ–ಚೆನ್ನೈಯಿನ್ ಹಣಾಹಣಿ

ವಿಕ್ರಂ ಕಾಂತಿಕೆರೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಐಎಸ್‌ಎಲ್‌ ಟೂರ್ನಿಯ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದ ಮುನ್ನಾದಿನವಾದ ಶನಿವಾರ ಬೆಂಗಳೂರು ಎಫ್‌ಸಿ ತಂಡದ ಆಟಗಾರರು ದೈಹಿಕ ಕಸರತ್ತಿನಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.
ಐಎಸ್‌ಎಲ್‌ ಟೂರ್ನಿಯ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದ ಮುನ್ನಾದಿನವಾದ ಶನಿವಾರ ಬೆಂಗಳೂರು ಎಫ್‌ಸಿ ತಂಡದ ಆಟಗಾರರು ದೈಹಿಕ ಕಸರತ್ತಿನಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು: ಬಲಿಷ್ಠ ತಂಡಗಳನ್ನು ಬಗ್ಗು ಬಡಿಯುತ್ತ ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತೆ ತವರಿನಲ್ಲಿ ಕಾಲೂರಿದೆ. ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌)ನಲ್ಲಿ ನಿರಂತರ ಸಾಧನೆ ಮಾಡುತ್ತಿರುವ ತಂಡ ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಸವಾಲನ್ನು ಎದುರಿಸಲಿದೆ.

ಐ–ಲೀಗ್‌ಗೆ ಪ್ರವೇಶಿಸಿದ ಮೊದಲ ಋತುವಿನಲ್ಲೇ ಪ್ರಶಸ್ತಿ ಎತ್ತಿ ಹಿಡಿದು ದಾಖಲೆ ಬರೆದ ಬಿಎಫ್‌ಸಿಗೆ ಐಎಸ್‌ಎಲ್‌ನಲ್ಲೂ ಅದೇ ರೀತಿಯ ಸಾಧನೆ ಮಾಡುವ ಗುರಿ. ಈ ಹಾದಿಯಲ್ಲಿ ಹೆಜ್ಜೆ ಇರಿಸಿರುವ ತಂಡ ಆರು ಪಂದ್ಯಗಳಲ್ಲಿ ಐದನ್ನು ಗೆದ್ದು ಪಾಯಿಂಟ್ಸ್‌ ಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ.

ಐಎಸ್ಎಲ್‌ನ ಚೊಚ್ಚಲ ಪಂದ್ಯವನ್ನು ಈ ತಂಡ ಇಲ್ಲೇ ಆಡಿತ್ತು. ಆ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು ಏಕಪಕ್ಷೀಯವಾದ ಎರಡು ಗೋಲುಗಳಿಂದ ಮಣಿಸಿ ಜೈತ್ರಯಾತ್ರೆ ಆರಂಭಿಸಿತ್ತು. ಎರಡನೇ ಪಂದ್ಯದಲ್ಲಿ ಡೆಲ್ಲಿ ಡೈನಾಮೊಸ್ ತಂಡವನ್ನು 4–1ರಿಂದ ಮಣಿಸಿದ್ದು ಕೂಡ ಇಲ್ಲೇ.

ADVERTISEMENT

ಲೀಗ್‌ನಲ್ಲಿ ಆಲ್ಬರ್ಟ್ ರೋಕಾ ಹೆಣೆಯುತ್ತಿರುವ ತಂತ್ರಗಳೆಲ್ಲವೂ ಫಲ ಕಾಣುತ್ತಿವೆ. ಕಳೆದ ಪಂದ್ಯದಲ್ಲಿ ಬಲಿಷ್ಠ ಪುಣೆ ಎಫ್‌ಸಿ ವಿರುದ್ಧ ಗಳಿಸಿದ ಅಮೋಘ ಜಯವೇ ಇದಕ್ಕೆ ಉದಾಹಣೆ. ಮಧ್ಯಂತರ ಅವಧಿ ವರೆಗೆ ತಂಡ 0–1ರ ಹಿನ್ನಡೆ ಅನುಭಿವಿಸಿತ್ತು. ಆದರೂ ದ್ವಿತೀಯಾರ್ಧದಲ್ಲಿ ತಂಡದಲ್ಲಿ ಬದಲಾವಣೆ ಮಾಡದೆ ರೋಕಾ ಅವರು ಆಟಗಾರರ ಮೇಲಿನ ವಿಶ್ವಾಸವನ್ನು ಉಳಿಸಿದ್ದರು. ಇದಕ್ಕೆ ಫಲವೂ ಸಿಕ್ಕಿತ್ತು. ಕೊನೆಯ 26 ನಿಮಿಷಗಳಲ್ಲಿ ಮೂರು ಗೋಲು ಗಳಿಸಿ ಸ್ಥಳೀಯ ತಂಡಕ್ಕೆ ಪೆಟ್ಟು ನೀಡಿತ್ತು.

ಗುರುಪ್ರೀತ್‌ ಸಿಂಗ್, ಮಿಕು ಮೇಲೆ ಕಣ್ಣು: ಅಮಾನತಿಗೆ ಒಳಗಾಗಿ ಎರಡು ಪಂದ್ಯಗಳಿಂದ ದೂರ ಉಳಿದಿದ್ದ ಗೋಲ್‌ ಕೀಪರ್‌ ಗುರುಪ್ರೀತ್ ಸಿಂಗ್ ಸಂಧು ವಾಪಸಾಗಿರುವುದು ಬಿಎಫ್‌ಸಿಯ ಗೋಲು ಪೆಟ್ಟಿಗೆಗೆ ಬಲ ಬಂದಿದೆ. ವೆನೆಜುವೆಲಾದ ಮಿಕು ಉತ್ತಮ ಲಯದಲ್ಲಿದ್ದು ಬಿಎಫ್‌ಸಿಯ ಈ ವರೆಗಿನ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಒಟ್ಟು ಆರು ಗೋಲು ಗಳಿಸಿರುವ ಅವರು ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿದ್ದಾರೆ. ಸುನಿಲ್ ಚೆಟ್ರಿ ನೇತೃತ್ವದ ಫಾರ್ವರ್ಡ್‌ ವಿಭಾಗದ ಶಕ್ತಿ ಎನಿಸಿರುವ ಮಿಕು ಬೆಂಗಳೂರಿನಲ್ಲೂ ಮಿಂಚುವ ಭರವಸೆ ಇದೆ.

ಪ್ರೇಕ್ಷಕರಿಗೆ ‘ಲೋಕಲ್‌ ಡರ್ಬಿ’ಯ ರಸಗವಳ
ಭಾನುವಾರದ ಪಂದ್ಯದಲ್ಲಿ ಪ್ರಬಲ ಪೈಪೋಟಿಯ ನಿರೀಕ್ಷೆ ಇದೆ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಬಿಎಫ್‌ಸಿಗೆ ಚೆನ್ನೈಯಿನ್‌ ಸುಲಭವಾಗಿ ಮಣಿಯದು. ಸಂದರ್ಭಕ್ಕೆ ತಕ್ಕಂತೆ ಆಡುವ ಸಾಮರ್ಥ್ಯ ಹೊಂದಿರುವ ಆ ತಂಡದ ರಕ್ಷಣಾ ಗೋಡೆಯನ್ನು ಕೆಡವಲು ಸುನಿಲ್ ಚೆಟ್ರಿ ಪಡೆ ಭಾರಿ ಬೆವರು ಸುರಿಸಬೇಕಾದೀತು. ‘ಲೋಕಲ್‌ ಡರ್ಬಿ’ ಎಂದೇ ಪರಿಗಣಿಸಲಾಗಿರುವ ‍ಪಂದ್ಯದ ರಸಗವಳ ಸವಿಯಲು ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

ಎಫ್‌ಸಿ ಗೋವಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ತಂಡ ನಂತರ ಹ್ಯಾಟ್ರಿಕ್ ಜಯ ಗಳಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿಗೆ ಮಣಿದಿತ್ತು. ಮತ್ತೊಂದು ಸೋಲಿನಿಂತ ತಪ್ಪಿಸಿಕೊಳ್ಳುವುದು ಈಗ ಆ ತಂಡದ ಆದ್ಯತೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಚೆನ್ನೈಯಿನ್‌ ಅಗ್ರ ಸ್ಥಾನದ ಕನಸು ಕಾಣುತ್ತಿದ್ದು ಆ ದೃಷ್ಟಿಯಿಂದಲೂ ಇಲ್ಲಿ ಗೆಲುವು ಅನಿವಾರ್ಯ.

ಚೆನ್ನೈಯಿನ್‌ ಉತ್ತಮ ಸಮತೋಲನ ಹೊಂದಿರುವ ತಂಡ. ಇಂಥ ತಂಡವನ್ನು ಎದುರಿಸುವುದು ಸುಲಭವಲ್ಲ. ವಿಶೇಷ ತಂತ್ರ ಅಳವಡಿಸಬೇಕಾಗಿದೆ.
–ಆಲ್ಬರ್ಟ್ ರೋಕಾ, ಬಿಎಫ್‌ಸಿ ಮುಖ್ಯ ಕೋಚ್‌

ಅಗ್ರ ಕ್ರಮಾಂಕದಲ್ಲಿರುವ ಯಾವುದೇ ತಂಡ ಆ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ ಇರುವುದಿಲ್ಲ. ಬಿಎಫ್‌ಸಿಯನ್ನು ಮಣಿಸಲು ಭಾರಿ ಶ್ರಮ ಹಾಕಬೇಕಾದೀತು.
–ಜಾನಿ ಗ್ರೆಗರಿ, ಚೆನ್ನೈಯಿನ್‌ ಎಫ್‌ಸಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.