ADVERTISEMENT

ಬಿಎಫ್‌ಸಿ–ಮುಂಬೈ ಇಂದು ಪೈಪೋಟಿ

ಐ ಲೀಗ್ ಫುಟ್‌ಬಾಲ್‌: ಜಯಕ್ಕಾಗಿ ಪರದಾಡುತ್ತಿರುವ ಚೆಟ್ರಿ ಬಳಗ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   
ಮುಂಬೈ: ಹಿಂದಿನ ಮೂರೂ ಪಂದ್ಯಗಳಲ್ಲಿ ಗೆಲುವಿನ ಅವಕಾಶ ಹಾಳು ಮಾಡಿಕೊಂಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಈ ಬಾರಿಯ ಐ ಲೀಗ್ ಟೂರ್ನಿಯಲ್ಲಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲಕ್ಕೇರುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಶನಿವಾರ ಇಲ್ಲಿ ಮುಂಬೈ ಎಫ್‌.ಸಿ. ಎದುರು ಪೈಪೋಟಿ ನಡೆಸಲಿದೆ.
 
ಹಾಲಿ ಚಾಂಪಿಯನ್‌ ಬಿಎಫ್‌ಸಿ  ತವರಿನಲ್ಲಿ ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದು  ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆ ಮೂಡಿಸಿತ್ತು. ಆದರೆ ಹೊರ ರಾಜ್ಯದಲ್ಲಿ ಕ್ರಮವಾಗಿ ಈಸ್ಟ್‌ ಬೆಂಗಾಲ್‌ ಮತ್ತು ಚರ್ಚಿಲ್ ಬ್ರದರ್ಸ್‌ ವಿರುದ್ಧ ಸೋತಿದೆ. ನಂತರದ  ಪಂದ್ಯಗಳು ಡಿ.ಎಸ್‌.ಕೆ. ಶಿವಾಜಿಯನ್ಸ್‌, ಮಿನರ್ವ ಮತ್ತು ಐಜ್ವಾಲ್‌ ಎದುರು ಡ್ರಾ ಆಗಿವೆ.
 
ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ಹಿಂದಿನ ಮೂರೂ ಪಂದ್ಯಗಳಲ್ಲಿ ಗೋಲು ಗಳಿಸುವ ಪ್ರಮಖ ಅವಕಾಶಗಳನ್ನು ಕೈಚೆಲ್ಲಿತ್ತು. ಆರಂಭದ ಪಂದ್ಯಗಳಲ್ಲಿ ಸಿ.ಕೆ. ವಿನೀತ್ ನಂತರ ಚೆಟ್ರಿ ಮಾತ್ರ ಗೋಲು ದಾಖಲಿಸಿದ್ದಾರೆ. ಉಳಿದ ಆಟಗಾರರಿಂದ ಗಮನಾರ್ಹ ಸಾಮರ್ಥ್ಯ ಮೂಡಿಬರದ ಕಾರಣ ತಂಡ ಗೆಲುವಿಗಾಗಿ ಚಡಪಡಿಸುತ್ತಿದೆ. ಗಾಯಗೊಂಡಿರುವ  ಜಾನ್‌ ಜಾನ್ಸನ್‌  ಮುಂಬೈ ಎದುರು ಕಣಕ್ಕಿಳಿಯುತ್ತಿಲ್ಲ.
 
ಎಂಟು ಪಂದ್ಯಗಳನ್ನಾಡಿರುವ ಬಿಎಫ್‌ಸಿ 12 ಪಾಯಿಂಟ್ಸ್‌ ಮಾತ್ರ ಹೊಂದಿದೆ. ಈಸ್ಟ್‌ ಬೆಂಗಾಲ್ ಮತ್ತು ಮೋಹನ್ ಬಾಗನ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. 
 
ಸಂಕಷ್ಟದಲ್ಲಿ ಮುಂಬೈ: ಹಿಂದಿನ ಪಂದ್ಯದಲ್ಲಿ ಬಾಗನ್ ಎದುರು ಡ್ರಾ ಮಾಡಿಕೊಂಡು ಅದರ ಹಿಂದಿನ ಆರು ಪಂದ್ಯಗಳನ್ನು ಸೋತಿರುವ  ಮುಂಬೈ ತಂಡ ಕೂಡ ಗೆಲುವಿನ ಅನಿವಾರ್ಯತೆಯಿದೆ. ಜೊತೆಗೆ ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೂ ತಿರುಗೇಟು ನೀಡಲು ಕಾಯುತ್ತಿದೆ.
 
ಈ ಬಾರಿಯ ಟೂರ್ನಿಯಲ್ಲಿ ಉಭಯ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಆಗ ಬಿಎಫ್‌ಸಿ ತಂಡದ ವಿನೀತ್ ಹ್ಯಾಟ್ರಿಕ್‌ ಗೋಲು ಗಳಿಸಿದ್ದರು.
 
‘ಹಿಂದಿನ ಪಂದ್ಯಗಳಲ್ಲಿ  ಗುಣಮಟ್ಟದ ಆಟವನ್ನೇ ಆಡಿದ್ದೇವೆ. ಈ ಮೊದಲು ಮುಂಬೈ ತಂಡವನ್ನು ಸೋಲಿಸಿರುವ ಕಾರಣ ಮತ್ತೆ ಇಲ್ಲಿಯೂ ಅದೇ ಫಲಿತಾಂಶ ಬರುವಂತೆ ಆಡುತ್ತೇವೆ’ ಎಂದು ಬಿಎಫ್‌ಸಿ ತಂಡದ ಮುಖ್ಯ ಕೋಚ್‌ ಅಲ್ಬರ್ಟ್‌ ರೋಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರಂಭ: ಸಂಜೆ 7.05ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.