ADVERTISEMENT

ಬಿಸಿಸಿಐಗೆ ₹ 2632 ಕೋಟಿ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಬಿಸಿಸಿಐಗೆ ₹ 2632 ಕೋಟಿ
ಬಿಸಿಸಿಐಗೆ ₹ 2632 ಕೋಟಿ   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ನ ನೂತನ ಆದಾಯ ಹಂಚಿಕೆ ನಿಯಮದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ₹ 2632.5 ಕೋಟಿ ಅನುದಾನ ನೀಡಲಿದೆ.

ಗುರುವಾರ ಲಂಡನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಹೋದ ತಿಂಗಳು ನಡೆದಿದ್ದ ಸಭೆಯಲ್ಲಿ ಐಸಿಸಿಯು ಬಿಸಿಸಿಐಗೆ ₹1904.5 ಕೋಟಿ ನೀಡಲು ನಿರ್ಧರಿಸಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಸಿಸಿಐ ₹ 3705 ಕೋಟಿ ನೀಡುವಂತೆ ಬೇಡಿಕೆ ಸಲ್ಲಿಸಿತ್ತು.  ಆಗ ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ₹ 650 ಕೋಟಿ ಹೆಚ್ಚುವರಿ ಅನುದಾನ ನೀಡಲು ಸಮ್ಮತಿಸಿದ್ದರು. ಅದಕ್ಕೂ ಬಿಸಿಸಿಐ ಒಪ್ಪಿರಲಿಲ್ಲ.

ADVERTISEMENT

ಇದೀಗ ಐಸಿಸಿಯು ತನ್ನ ಪಟ್ಟು ಸಡಿಲಿಸಿದ್ದು ಮೊದಲಿಗಿಂತ ₹ 728 ಕೋಟಿ ಹೆಚ್ಚುವರಿ ಮೊತ್ತ ನೀಡಲು ಸಮ್ಮತಿಸಿದೆ.

₹ 903 ಕೋಟಿ ಪಡೆಯುತ್ತಿರುವ ಇಂಗ್ಲೆಂಡ್‌ ಸಂಸ್ಥೆಗಿಂತ ಭಾರತವು ₹ 1729 ಕೋಟಿಯನ್ನು ಹೆಚ್ಚು ಪಡೆಯುತ್ತಿದೆ.

ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಂಸ್ಥೆಗಳಿಗೆ ತಲಾ ₹ 832 ಕೋಟಿ ನೀಡಲಾಗಿದೆ. ಜಿಂಬಾಬ್ವೆಗೆ ₹ 611 ಕೋಟಿ ನೀಡಲಾಗಿದೆ.

‘ಐಸಿಸಿಯ ನಿರ್ಧಾರಕ್ಕೆ ಬಿಸಿಸಿಐ ಸಮ್ಮತಿ ಸೂಚಿಸಿದೆ’ ಎಂದು ಮಂಡಳಿಯ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ಇದರಿಂದಾಗಿ ಬಿಸಿಸಿಐ ಮತ್ತು ಐಸಿಸಿ ನಡುವಣ ನಡೆದಿದ್ದ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ.

‘ಐಸಿಸಿಗೆ ಅತ್ಯಂತ ಹೆಚ್ಚು ಆದಾಯ ತಂದು ಕೊಡುವ ಸಂಸ್ಥೆ ನಮ್ಮದಾಗಿದೆ. ಆದ್ದರಿಂದ ಹೆಚ್ಚು ಅನುದಾನವನ್ನು ನಮಗೆ ನೀಡಬೇಕು ಎಂಬ ಬೇಡಿಕೆ ಮಂಡಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.  ಐಸಿಸಿಯು ತನ್ನ ಒಟ್ಟು ₹ 9984 ಕೋಟಿ ಆದಾಯದಲ್ಲಿ  ಶೇ 86ರಷ್ಟನ್ನು ಸದಸ್ಯ ಸಂಸ್ಥೆಗಳಿಗೆ   ಹಂಚಿಕೆ ಮಾಡುತ್ತದೆ.  ಅದರಲ್ಲಿ ಬಿಸಿಸಿಐ ಶೇ. 22.8ರಷ್ಟು ಪಾಲು ಪಡೆಯುತ್ತಿದೆ. ಇಂಗ್ಲೆಂಡ್ ಶೇ. 7.8, ಇನ್ನಿತರ ಮಂಡಳಿಗಳು ತಲಾ ಶೇ. 7.2 ರಷ್ಟು ಪಾಲು ಪಡೆಯುತ್ತಿವೆ. ಜಿಂಬಾಬ್ವೆಯು ಶೇ 5.3ರಷ್ಟು ಪಡೆಯುತ್ತಿದೆ.

ಐಸಿಸಿ ಸಭೆಯ ನಿರ್ಧಾರಗಳು
* ಬಿಸಿಸಿಐಗೆ ₹2632.5 ಕೋಟಿ ಆದಾಯ ಹಂಚಿಕೆ.
* ಐಸಿಗೆ ಸಹ ಮುಖ್ಯಸ್ಥರ ನೇಮಕ. ಮುಖ್ಯಸ್ಥ ಶಶಾಂಕ್ ಮನೋಹರ್ ಅವರ ಅನುಪಸ್ಥಿತಿಯಲ್ಲಿ ಅವರು ಕಾರ್ಯನಿರ್ವಹಿಸುವರು.
*ಸ್ವತಂತ್ರ ನಿರ್ದೇಶಕ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಯನ್ನು ನೇಮಕ ಮಾಡಲಾಗುವುದು. ಅವರಿಗೆ   ಮತ ಚಲಾವಣೆ ಹಕ್ಕು ನೀಡಲಾಗುವುದು.
* ಪೂರ್ಣ ಮತ್ತು ಸಹ ಸದಸ್ಯತ್ವ ಹೊಂದಿರುವ ಸಂಸ್ಥೆಗಳನ್ನು ಉಳಿಸಿಕೊಳ್ಳಲಾಗುವುದು. ಕೇವಲ ಮಾನ್ಯತೆ ಪಡೆದಿರುವ ಸಂಸ್ಥೆಗಳಿಗೆ ಸಹ ಸದಸ್ಯತ್ವ ನೀಡಲಾಗುವುದು.
* ಪೂರ್ಣ ಸದಸ್ಯ, ಸಹ ಸದಸ್ಯತ್ವ ಸಂಸ್ಥೆಗಳ ನಿರ್ದೇಶಕರು, ಸ್ವತಂತ್ರ ಮುಖ್ಯಸ್ಥ ಮತ್ತು ಸ್ವತಂತ್ರ ನಿರ್ದೇಶಕರಿಗೆ ಸಮಾನ ಮತದಾನದ ಹಕ್ಕು.* ಯಾವುದೇ ನಿರ್ಣಯದ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಸದಸ್ಯರ ಒಪ್ಪಿಗೆ ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.