ADVERTISEMENT

ಬಿಸಿಸಿಐಗೆ 400 ಕೋಟಿ ನಷ್ಟ?

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಮುಂಬೈ: ವೆಸ್ಟ್‌ ಇಂಡೀಸ್‌ ತಂಡ ಭಾರತ ವಿರುದ್ಧದ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸುಮಾರು ₨ 400 ಕೋಟಿಯಷ್ಟು ನಷ್ಟ ಉಂಟಾಗಿದೆ.

ವಿಂಡೀಸ್‌ ಕ್ರಿಕೆಟ್‌ ಮಂಡಳಿಯೇ (ಡಬ್ಲ್ಯುಐಸಿಬಿ) ಈ ಮೊತ್ತವನ್ನು ಭರಿಸಬೇಕೆಂದು ಬಿಸಿಸಿಐ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಹೈದರಾ ಬಾದ್‌ನಲ್ಲಿ ಮಂಗಳವಾರ ನಡೆಯು ವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ‘ಕ್ರಿಕ್‌ಇನ್ಫೊ’ ವೆಬ್‌ಸೈಟ್‌ ವರದಿ ಮಾಡಿದೆ.

ವೆಸ್ಟ್ ಇಂಡೀಸ್‌ ತಂಡ ಐದು ಏಕದಿನ, ಒಂದು ಟ್ವೆಂಟಿ–20 ಮತ್ತು ಮೂರು ಟೆಸ್ಟ್‌ ಪಂದ್ಯಗಳನ್ನು ಆಡಲು ಒಪ್ಪಿಕೊಂಡಿತ್ತು. ಆದರೆ ನಾಲ್ಕು ಏಕದಿನ ಪಂದ್ಯಗಳ ಬಳಿಕ ಈ ಸರಣಿ ರದ್ದಾಗಿದೆ. ಇದರಿಂದ 17 ದಿನಗಳ ಆಟ (ಐದು ಟೆಸ್ಟ್‌, ತಲಾ ಒಂದು ಏಕದಿನ ಮತ್ತು ಟಿ–20) ನಷ್ಟವಾಗಿದೆ. ಶ್ರೀಲಂಕಾ ತಂಡ ಭಾರತ ವಿರುದ್ಧ ಐದು ಏಕದಿನ ಪಂದ್ಯವನ್ನಾಡಲು ಒಪ್ಪಿದೆ. ಆದರೂ 12 ದಿನಗಳ ಆಟ ನಷ್ಟವಾಗುತ್ತದೆ.

ವಿಂಡೀಸ್‌– ಭಾರತ ನಡುವಿನ ಸರಣಿಯ ಪ್ರತಿದಿನದ ಆಟ ಬಿಸಿಸಿಐಗೆ ₨ 33 ಕೋಟಿ ವರಮಾನ ತರುತ್ತಿತ್ತು ಎಂದು ಅಂದಾಜಿಸಲಾಗಿದೆ. ಅಂದರೆ 12 ದಿನಗಳ ಆಟದ ವರಮಾನ ಕೈತಪ್ಪಿಹೋಗಿದೆ. ಇದರಿಂದ ಮಂಡ ಳಿಗೆ ಸುಮಾರು ₨ 396 ಕೋಟಿ ನಷ್ಟವಾಗಿದೆ ಎಂದು ಲೆಕ್ಕಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.