ADVERTISEMENT

ಬೆವರು ಹರಿಸಿದ ಕೊಹ್ಲಿ ಬಳಗ

30ರಿಂದ ಎರಡನೇ ಟೆಸ್ಟ್: ಬಿಸಿಲಿನಲ್ಲಿ ಕಠಿಣ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಭಾರತ ತಂಡದ ನೂತನ ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ವಿರಾಟ್‌ ಕೊಹ್ಲಿ
ಭಾರತ ತಂಡದ ನೂತನ ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ವಿರಾಟ್‌ ಕೊಹ್ಲಿ   

ಜಮೈಕಾ (ಪಿಟಿಐ): ಮೈಗೆ ಚುರುಕು ಮುಟ್ಟಿಸುವ ತಾಪದ ವಾತಾವರಣವಿದ್ದ ಸಬೀನಾ ಪಾರ್ಕ್ ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿ ಬಳಗವು ಕಠಿಣ ಅಭ್ಯಾಸ ನಡೆಸಿತು. ಬುಧವಾರ ಮಧ್ಯಾಹ್ನ ಕಿಂಗ್ಸ್‌ಟನ್‌ಗೆ ಬಂದಿಳಿದ ಭಾರತ ತಂಡದ ಆಟಗಾರರು ಹೋಟೆಲ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಅಭ್ಯಾಸಕ್ಕೆ ತೆರಳಿದರು.

ವೆಸ್ಟ್ ಇಂಡೀಸ್ ಸರಣಿಯ ಮೊದಲ ಟೆಸ್ಟ್‌ ನಲ್ಲಿ ಭಾರತ ಭರ್ಜರಿ ಜಯಗಳಿಸಿತ್ತು. ಜುಲೈ 30ರಂದು ಇಲ್ಲಿ ಎರಡನೇ ಟೆಸ್ಟ್ ಆಡಲಿದೆ. ಅದಕ್ಕಾಗಿ ಅಭ್ಯಾಸ ಆರಂಭಿಸಿತು.

ವೃದ್ಧಿಮಾನ್ ಸಹಾ ಅವರು ವಿಕೆಟ್ ಕೀಪಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಡೈವಿಂಗ್, ಕ್ಯಾಚಿಂಗ್ ಮತ್ತು ಸ್ಟಂಪಿಂಗ್‌ ಗಳನ್ನು ಮಾಡುವ ಅಭ್ಯಾಸ ನಡೆಸಿದರು.

ಆ್ಯಂಟಿಗಾ ಟೆಸ್ಟ್‌ನಲ್ಲಿ ಕೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ  ಮುರಳಿ ವಿಜಯ್ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಕಠಿಣ ಅಭ್ಯಾಸ ಮಾಡುವ ಬದಲಿಗೆ ಲಘು ವ್ಯಾಯಾಮಗಳನ್ನು ಮಾಡಿದರು.

ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮಾತ್ರ ನೆಟ್ಸ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸುವಲ್ಲಿ ತಲ್ಲೀನರಾಗಿದ್ದರು.  ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಪಾಲು ದಾರಿಕೆ ಆಟವಾಡಿದ್ದರು. ಒಂದು ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ನಂತರ ಫೀಲ್ಡಿಂಗ್, ಕ್ಯಾಚಿಂಗ್ ತಾಲೀಮು ನಡೆಸಿದರು. ‘ಇಲ್ಲಿ ಹೆಚ್ಚು ಹೊತ್ತು ಅಭ್ಯಾಸ ನಡೆಸಿದ್ದರಿಂದ ವಾತಾವರಣಕ್ಕೆ ಒಗ್ಗಿಕೊಳ್ಳಲು ನೆರವಾಗಿದೆ. ತಾಪಮಾನ ಹೆಚ್ಚಾಗಿದ್ದು ಫಿಟ್‌ನೆಸ್‌ಗೆ ಸವಾಲೊಡ್ಡಲಿದೆ. 

ADVERTISEMENT

ಆದ್ದರಿಂದ ಅದಕ್ಕಾಗಿ ನಾವು ಸಂಪೂರ್ಣ ಸಿದ್ಧವಾಗಿದ್ದೇವೆ. ಸಮಸ್ಯೆಗಳು ಬಂದರೂ ಎದುರಿಸುತ್ತೇವೆ’ ಎಂದು ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಸುದ್ದಿಗಾರರಿಗೆ ಹೇಳಿದರು.

‘ಪಂದ್ಯಕ್ಕೆ ಇನ್ನೂ ಎರಡು ದಿನಗಳ ಸಮಯಾವಕಾಶ ಇದೆ. ಪಿಚ್ ಕೂಡ ಇನ್ನೂ ಸಂಪೂರ್ಣವಾಗಿ ಸಿದ್ದಗೊಂಡಿ ಲ್ಲ.   ಈಗಲೇ ಅದರ ಬಗ್ಗೆ ಮಾತನಾಡು ವುದು ಸೂಕ್ತವಲ್ಲ’ ಎಂದರು.

ಮುಖ್ಯಾಂಶಗಳು
* ಮೊದಲ ಟೆಸ್ಟ್‌ನಲ್ಲಿ ಭಾರತ ಗೆಲುವು ಪಡೆದಿದೆ.
* ಇನ್ನು ಮೂರು ಪಂದ್ಯಗಳು ಬಾಕಿಯಿವೆ.
* ಕೋಚ್‌ ಅನಿಲ್‌ ಕುಂಬ್ಳೆ ಅವರಿಗೆ ಮೊದಲ ಸರಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.