ADVERTISEMENT

ಬೌಲರ್‌ಗಳು ದೇಶಿ ಕ್ರಿಕೆಟ್‌ನಲ್ಲಿ ಹೆಚ್ಚು ಆಡಬಾರದು: ದೋನಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಮೆಲ್ಬರ್ನ್‌ (ಪಿಟಿಐ): ‘ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ನ ಏಳು ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ವೇಗಿಗಳು  ಕಾರಣ.  ಆದರೆ ಅವರು ದೇಶಿ ಕ್ರಿಕೆಟ್‌ನಲ್ಲಿ ಹೆಚ್ಚು ಆಡಬಾರದು’ ಎಂದು ದೋನಿ ಹೇಳಿದ್ದಾರೆ.

‘ವೇಗಿಗಳಾದ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಮೋಹಿತ್‌ ಶರ್ಮ ಅವರನ್ನು ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡುವಂತೆ ಒತ್ತಾಯ ಮಾಡಬಾರದು’ ಎಂದು ದೋನಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ ಪಂದ್ಯಗಳಲ್ಲಿ ಯಾದವ್ (18), ಶಮಿ (17), ಮೋಹಿತ್‌ (13) ವಿಕೆಟ್ ಪಡೆದಿದ್ದಾರೆ. ಒಟ್ಟು 72 ವಿಕೆಟ್‌ಗಳಲ್ಲಿ ವೇಗಿಗಳು 48 ವಿಕೆಟ್‌ ಗಳಿಸಿದ್ದಾರೆ.‌ ಭಾರತ ಸೆಮಿಫೈನಲ್‌ನಲ್ಲಿ 95ರನ್‌ಗಳಿಂದ ಆಸ್ಟ್ರೇಲಿಯಾದ ಎದುರು ಸೋಲು ಕಂಡಿತ್ತು. ಈ ಪಂದ್ಯದಲ್ಲಿ ವೇಗಿಗಳು ಬೇಗನೆ ವಿಕೆಟ್‌ ಪಡೆಯಲು ವಿಫಲರಾಗಿದ್ದರು.

‘ವೇಗಿಗಳು  ದೇಶಿ ಕ್ರಿಕೆಟ್‌ನಲ್ಲಿ ಹೆಚ್ಚು ಆಡದಂತೆ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗಳಿಗೆ ಬಿಸಿಸಿಐ ಮನವಿ ಮಾಡಿಕೊಳ್ಳಬೇಕು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಒತ್ತಾಯ ಮಾಡಬಾರದು’ ಎಂದೂ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಪಂದ್ಯಗಳನ್ನು ಮುಗಿಸಿ ಬೌಲರ್‌ಗಳು ಅವರ ಊರಿಗೆ ತೆರಳಿದ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆಯವರು ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಬಂದು ಬೌಲಿಂಗ್ ಮಾಡುವಂತೆ ಆಹ್ವಾನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಪ್ರತಿ ಓವರ್‌ಗೆ ಇಷ್ಟು ಎಂದು ಹಣ ಅಥವಾ ಚೆಕ್‌ ಅನ್ನು ಕೂಡ ಕೊಡುವುದಿಲ್ಲ’ ಎಂದು ದೋನಿ ಆರೋಪಿಸಿದ್ದಾರೆ.

‘ಶಮಿ ಮತ್ತು ಯಾದವ್‌ ಅವರನ್ನು ಅವರ ರಾಜ್ಯ ಕ್ರಿಕೆಟ್ ಸಂಸ್ಥೆಗಳು ರಣಜಿ ಟ್ರೋಫಿ, ವಿಜಯ್‌ ಹಜಾರೆ ಮತ್ತು ಸಯ್ಯದ್ ಮಷ್ತಾಕ್ ಅಲಿ ಟೂರ್ನಿಗಳಲ್ಲಿ ಆಡಲು ಪದೇ ಪದೇ ಪೀಡಿಸುತ್ತಿದ್ದರು. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ’ ಎಂದು ಹೇಳಿದ್ದಾರೆ.

‘ಬೌಲರ್‌ಗಳು ಅಥವಾ ಬ್ಯಾಟ್ಸ್‌ಮನ್‌ಗಳು ದೇಶಿ ಕ್ರಿಕೆಟ್‌ನಲ್ಲಿ ಆಡಲು ವಿರೋಧಿಸಿದರೆ ಸ್ಥಳೀಯ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸುತ್ತವೆ. ಭಾರತ ತಂಡಕ್ಕೆ ಆಡಿದ ಮಾತ್ರಕ್ಕೆ ನಮ್ಮೊಂದಿಗೆ ಆಡಬಾರದು ಎಂದೇನು ಇಲ್ಲ ಎಂದು ಹೇಳಲು ಪ್ರಾರಂಭಿಸುತ್ತಾರೆ’ ಎಂದು ದೋನಿ ಹೇಳಿದ್ದಾರೆ.

‘ಭಾರತ  ಕ್ರಿಕೆಟ್‌ ಹಿತಾಸಕ್ತಿಗಾಗಿ ವೇಗದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡುವುದು ಮುಖ್ಯ. ಅದಕ್ಕಾಗಿ ಬೌಲರ್‌ಗಳ ಮೇಲೆ ಒತ್ತಡ ಹೇರುವುದು ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.