ADVERTISEMENT

ಬ್ಯಾಡ್ಮಿಂಟನ್‌: ಸೈನಾ, ಕಶ್ಯಪ್‌ಗೆ ಪ್ರಶಸ್ತಿ

ಸೈಯದ್‌ ಮೋದಿ ಟೂರ್ನಿ: ಸಿಂಗಲ್ಸ್‌ನಲ್ಲಿ ಭಾರತದ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 20:06 IST
Last Updated 25 ಜನವರಿ 2015, 20:06 IST

ಲಖನೌ (ಪಿಟಿಐ): ಅಪೂರ್ವ ಪ್ರದರ್ಶನ ತೋರಿದ ಅಗ್ರ ಶ್ರೇಯಾಂಕದ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಹಾಗೂ ಪಿ. ಕಶ್ಯಪ್‌ ಭಾನುವಾರ  ಸೈಯದ್ ಮೋದಿ ಗ್ರ್ಯಾಂಡ್‌ ಪ್ರೀ  ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಾಬು ಬನಾರಸಿ ದಾಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳೆಯರ ಫೈನಲ್‌ ಪಂದ್ಯದಲ್ಲಿ ವಿಶ್ವದ ಮೂರನೇ ರ್‍ಯಾಂಕಿಂಗ್ ಆಟಗಾರ್ತಿ ಸೈನಾ 19–21, 25–23,  21–16 ರಲ್ಲಿ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕರೋಲಿನಾ ಮರಿನ್‌ ಎದುರು ಒಂದು ಗಂಟೆ 19 ನಿಮಿಷ ಹೋರಾಟ ನಡೆಸಿ ಪ್ರಶಸ್ತಿ ಗೆದ್ದರು. ಹೋದ ಸಲವೂ ಹೈದರಾಬಾದ್ ಆಟಗಾರ್ತಿ ಚಾಂಪಿಯನ್‌ ಆಗಿದ್ದರು.
ಹೋದ ವರ್ಷ ಇದೇ ಟೂರ್ನಿಯಲ್ಲಿ ಸೈನಾ ಫೈನಲ್‌ನಲ್ಲಿ ಪಿ.ವಿ ಸಿಂಧು ಅವರನ್ನು ಮಣಿಸಿದ್ದರು.

ಮೊದಲ ಗೇಮ್‌ನಲ್ಲಿ 2–5ರಲ್ಲಿ ಹಿನ್ನಡೆ ಅನುಭವಿಸಿದ್ದ ಸೈನಾ ಸತತ ಪಾಯಿಂಟ್ಸ್‌ ಕಲೆ ಹಾಕಿ  15–7ರ ಮುನ್ನಡೆ ಗಳಿಸಿದರು. ಮರು ಹೋರಾಟ ತೋರಿದ  ಸ್ಪೇನ್‌ನ ಆಟಗಾರ್ತಿ 21–19 ರಲ್ಲಿ ಮೊದಲ ಗೇಮ್‌ ಗೆದ್ದುಕೊಂಡರು.

ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾಗೆ ಎರಡನೇ ಗೇಮ್‌ನಲ್ಲೂ ಕರೋಲಿನಾ ಪ್ರಬಲ ಪೈಪೋಟಿ ನೀಡಿದರು. ಆದರೆ ಕರಾರುವಾಕ್ಕಾದ ಸ್ಮಾಷ್‌ಗಳ ಮೂಲಕ ಗಮನ ಸೆಳೆದ ಸೈನಾ 25–23ರಲ್ಲಿ ಗೇಮ್‌ ಗೆದ್ದುಕೊಂಡರು.

ಮೂರನೇ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಹೈದರಾಬಾದ್‌ನ ಆಟಗಾರ್ತಿ  ಆರಂಭದಲ್ಲೇ 15–7ರಲ್ಲಿ ಮುನ್ನಡೆ ಪಡೆದುಕೊಂಡು ಪ್ರಶಸ್ತಿ ಖಚಿತಪಡಿಸಿಕೊಂಡರು.

ಕಶ್ಯಪ್‌ಗೆ ಜಯ: ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಕಶ್ಯಪ್‌ 23–21, 23–21ರಲ್ಲಿ ಭಾರತದವರೇ ಆದ ಕೆ. ಶ್ರೀಕಾಂತ್‌ಗೆ ಆಘಾತ ನೀಡಿದರು.

ಮೊದಲ ಗೇಮ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಶ್ರೀಕಾಂತ್‌ ತೀವ್ರ ಪೈಪೋಟಿ ನೀಡಿದರು. ಒಂದು ಹಂತದಲ್ಲಿ 16–16 ಹಾಗೂ 21–21 ರಲ್ಲಿ ಸಮಬಲದ ಪೈಪೋಟಿ ಕಂಡು ಬಂದಿತು. ನಂತರ ಚುರುಕಿನ ಆಟ ಪ್ರದರ್ಶಿಸಿದ ಕಶ್ಯಪ್‌ 23–21 ರಲ್ಲಿ ಗೇಮ್‌ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಎರಡನೇ ಗೇಮ್‌ನಲ್ಲಿ 13–13ರಲ್ಲಿ ಸಮಬಲ ಸಾಧಿಸಿದರು. ವಿಶ್ವದ 15ನೇ ರ್‍ಯಾಂಕಿಂಗ್‌ನ ಆಟಗಾರ ಕಶ್ಯಪ್‌ ನಾಲ್ಕು ಪಾಯಿಂಟ್‌ ಪಡೆದು 17–13ಕ್ಕೆ ಮುನ್ನಡೆ ಹೆಚ್ಚಿಸಿಕೊಂಡರು. ಮತ್ತೆ ತಿರುಗೇಟು ನೀಡಿದ ಶ್ರೀಕಾಂತ್‌ 19–19ರಲ್ಲಿ ಸಮಬಲ ಸಾಧಿಸಿದರು. 21–21ರಲ್ಲಿ ಪಂದ್ಯ ಕುತೂಹಲ ಘಟ್ಟದಲ್ಲಿದ್ದಾಗ ಅಮೋಘ ಆಟ ಪ್ರದರ್ಶಿಸಿದ ಕಶ್ಯಪ್‌ 2 ಪಾಯಿಂಟ್ ಪಡೆದುಕೊಂಡು ಗೇಮ್‌ ಗೆಲ್ಲುವ ಮೂಲಕ ಸಂಭ್ರಮಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಸೋಲು: ಭಾರತದ ಮನು ಅತ್ರಿ ಹಾಗೂ ಕೆ. ಮನೀಷಾ ಜೋಡಿ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ 17–21, 17–21ರಲ್ಲಿ ಇಂಡೊನೇಷ್ಯಾದ ರಿಕ್ಕಿ ವಿಡಿಯಂಟೊ ಹಾಗೂ ಪುಷ್ಪಿತಾ ರಿಚಿ ದಿಲಿ ಎದುರು ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.