ADVERTISEMENT

ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಕಶ್ಯಪ್‌, ಸಮೀರ್‌

ಪಿಟಿಐ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಕಶ್ಯಪ್ ಆಟದ ವೈಖರಿ
ಕಶ್ಯಪ್ ಆಟದ ವೈಖರಿ   

ಅನಹೀಮ್‌: ಭಾರತದ ಭರವಸೆಯ ಆಟಗಾರ ರಾದ ಪರುಪಳ್ಳಿ ಕಶ್ಯಪ್‌, ಸಮೀರ್‌ ವರ್ಮಾ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಕಶ್ಯಪ್‌ 21–19, 21–10ರ ನೇರ ಗೇಮ್‌ಗಳಿಂದ ಶ್ರೀಲಂಕಾದ ನಿಲುಕಾ ಕರುಣಾರತ್ನೆ ಅವರ ಸವಾಲು ಮೀರಿ ನಿಂತರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದ ಕಶ್ಯಪ್‌ ಅವರು ನಿಲುಕಾ ವಿರುದ್ಧ ಅಮೋಘ ಆಟ ಆಡಿದರು. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ಬಾರಿಸಿದ ಷಟಲ್‌ ಅನ್ನು ಹಿಂತಿರುಗಿಸುತ್ತಿದ್ದ ಭಾರತದ ಆಟಗಾರ, ಅಮೋಘ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಂಗಳದಲ್ಲಿ ಮಿಂಚು ಹರಿಸಿದರು. ಈ ಮೂಲಕ ಸುಲಭವಾಗಿ ಪಾಯಿಂಟ್ಸ್‌ ಹೆಕ್ಕಿ ಗೆಲುವು ಒಲಿಸಿಕೊಂಡರು.

ADVERTISEMENT

ಆರಂಭಿಕ ಗೇಮ್‌ನಲ್ಲಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಕಶ್ಯಪ್‌, ಎರಡನೇ ಗೇಮ್‌ನಲ್ಲೂ ಗರ್ಜಿಸಿದರು. ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿ ಎದುರಾಳಿಯ ಮೇಲೆ ಒತ್ತಡ ಹೇರಿದ ಅವರು ಏಕಪಕ್ಷೀಯವಾಗಿ ಜಯದ ತೋರಣ ಕಟ್ಟಿದರು.

ಇದಕ್ಕೂ ಮುನ್ನ ನಡೆದಿದ್ದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಕಶ್ಯಪ್‌ 21–18, 17–6ರಿಂದ ಹಂಗರಿಯ ಜಾರ್ಜೆಲಿ ಕ್ರಾವುಸ್‌ ಅವರನ್ನು ಮಣಿಸಿದ್ದರು.

ಮೊದಲ ಗೇಮ್‌ನಲ್ಲಿ ನಿರಾಯಾಸ ವಾಗಿ ಗೆದ್ದಿದ್ದ ಕಶ್ಯಪ್‌, ಎರಡನೇ ಗೇಮ್‌ನಲ್ಲಿ 17–6ರಿಂದ ಮುನ್ನಡೆ ಹೊಂದಿದ್ದರು. ಈ ವೇಳೆ ಎದುರಾಳಿ ಆಟಗಾರ ಅಂಗಳ ತೊರೆದರು. ಎಂಟರ ಘಟ್ಟದ ಹಣಾಹಣಿಯಲ್ಲಿ ಕಶ್ಯಪ್‌ ಅವರು ಭಾರತದ ಸಮೀರ್‌ ವರ್ಮಾ ವಿರುದ್ಧ ಆಡಲಿದ್ದಾರೆ.

16ರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸಮೀರ್‌ 18–21, 21–14, 21–18ರಲ್ಲಿ ಬ್ರೆಜಿಲ್‌ನ ಯಗೊರ್‌ ಕೊಯೆಲ್ಹೊ ಅವರನ್ನು ಮಣಿಸಿದರು.

ಮೊದಲ ಗೇಮ್‌ನಲ್ಲಿ ನಿರಾಸೆ ಕಂಡಿದ್ದ ಭಾರತದ  ಆಟಗಾರ ನಂತರದ ಎರಡೂ ಗೇಮ್‌ಗಳಲ್ಲೂ ಗುಣಮಟ್ಟದ ಆಟ ಆಡಿ ಗೆಲುವು ತಮ್ಮದಾಗಿಸಿ ಕೊಂಡರು. ಮೊದಲ ಸುತ್ತಿನ ಪೈಪೋಟಿಯಲ್ಲಿ ಸಮೀರ್‌ 21–19, 25–27, 21–15ರಲ್ಲಿ ಕ್ರೊವೇಷ್ಯಾದ ಜ್ವೊನಿಮಿರ್‌ ಡುರ್ಕಿನ್‌ ಜಾಕ್‌ ಅವರನ್ನು ಸೋಲಿಸಿದ್ದರು.

ಕ್ವಾರ್ಟರ್‌ಗೆ ಪ್ರಣಯ್‌: ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಎಚ್‌. ಎಸ್‌ ಪ್ರಣಯ್‌ ಕೂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ  ಇಟ್ಟಿದ್ದಾರೆ.

16ರ ಘಟ್ಟದ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ ಪ್ರಣಯ್‌ 21–8, 14–21, 21–16ರಲ್ಲಿ  ನೆದರ್ಲೆಂಡ್ಸ್‌ನ 12ನೇ ಶ್ರೇಯಾಂಕಿತ ಆಟಗಾರ ಮಾರ್ಕ್‌ ಕ್ಯಾಲ್‌ಜುವಾ ಅವರ ಸವಾಲು ಮೀರಿ ನಿಂತರು. ಈ ಹೋರಾಟ 48 ನಿಮಿಷಗಳ ಕಾಲ ನಡೆಯಿತು. ಮುಂದಿನ ಸುತ್ತಿನಲ್ಲಿ ಪ್ರಣಯ್‌ ಅವರು ಜಪಾನ್‌ನ ಕಂಟಾ ಸುನೆಯಾಮ  ವಿರುದ್ಧ ಆಡುವರು.

ಸಿಂಗಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ವಿಯೆಟ್ನಾಂನ ತಿಯೆನ್‌ ಮಿನ್ಹ್‌ ಜುಯೆನ್‌ 27–25, 21–9ರಲ್ಲಿ ಹರ್ಷಿಲ್‌ ದಾನಿ ಎದುರು ಗೆದ್ದರು.
ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಕೊರಿಯಾದ ಐದನೇ ಶ್ರೇಯಾಂಕಿತೆ ಜಾಂಗ್‌ ಮಿ ಲೀ 21–11, 21–10ರಲ್ಲಿ ಶ್ರೀ ಕೃಷ್ಣ ಪ್ರಿಯಾ ಕುದುರವಳ್ಳಿ ಎದುರೂ, ಡೆನ್ಮಾರ್ಕ್‌ನ ಏಳನೇ ಶ್ರೇಯಾಂಕಿತೆ ನತಾಲಿಯ ಕೊಚ್‌ ರೊಹೆಡೆ 21–15, 22–20ರಲ್ಲಿ ರಿತುಪರ್ಣ ದಾಸ್‌ ವಿರುದ್ಧವೂ ಗೆಲುವು ಒಲಿಸಿಕೊಂಡರು.

ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಜೋಡಿ ಮನು ಅತ್ರಿ ಮತ್ತು ಬಿ. ಸುಮಿತ್‌ ರೆಡ್ಡಿ 21–16, 21–9ರಲ್ಲಿ ಇಂಡೊನೇಷ್ಯಾದ ಹೆಂಡ್ರಾ ಟಂಡ್‌ಜಯ  ಮತ್ತು ಆ್ಯಂಡ್ರ್ಯೂ ಯುನಾಟೊ ಅವರನ್ನು ಮಣಿಸಿತು.

ಮುಂದಿನ ಸುತ್ತಿನಲ್ಲಿ ಮನು ಮತ್ತು ಸುಮೀತ್‌ ಅವರು ಜಪಾನ್‌ನ ಹಿರೋಕಿ ಒಕಾಮುರಾ ಮತ್ತು ಮಸಾಯುಕಿ ಒನೊಡೆರಾ ವಿರುದ್ಧ ಆಡುವರು.
ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸಿನ್‌ ಅಲ್ವಿನ್‌ ಮತ್ತು ತರುಣ್‌ ಕೋನಾ ಅವರು 19–21, 21–9, 14–21ರಲ್ಲಿ ಜಪಾನ್‌ನ ಹಿರೊಕಿ ಒಕಾಮುರಾ ಮತ್ತು ಮಸಾಯುಕಿ ಒನೊಡೆರಾ ವಿರುದ್ಧ ಸೋತರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್‌. ರಾಮ್‌ 18–21, 9–21ರಲ್ಲಿ ಮಯು ಮತ್ಸುಮೊಟೊ  ಮತ್ತು ವಾಖನ  ನಗಹರಾ ಅವರಿಗೆ ಶರಣಾದರು.

ಮಿಶ್ರಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಮನು ಮತ್ತು ಮನೀಷಾ 16–21, 12–21ರಲ್ಲಿ ಮಲೇಷ್ಯಾದ ಗೊಹ್‌ ಸೂನ್‌ ಹುವಾತ್‌ ಮತ್ತು ಶೆವೊನ್‌ ಜೆಮಿ ಲೈ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.