ADVERTISEMENT

ಭಾರತಕ್ಕೆ ಮೊದಲ ಅಗ್ನಿಪರೀಕ್ಷೆ

ಇಂದಿನಿಂದ ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೆಂಗಳೂರು: ಎರಡು ವಾರಗಳಿಂದ ಉದ್ಯಾನನಗರಿಯಲ್ಲಿ ತರಬೇತಿ ಪಡೆದಿರುವ ಭಾರತ ಬ್ಯಾಸ್ಕೆಟ್‌ಬಾಲ್‌ ತಂಡ ಮೊದಲ ಸವಾಲಿಗೆ ಸಜ್ಜಾಗಿದೆ. ಶುಕ್ರವಾರ ಆರಂಭವಾಗಲಿರುವ ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ ಷಿಪ್‌ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ಎದುರು ಪೈಪೋಟಿ ನಡೆಸಲಿದೆ.

ಈ ಟೂರ್ನಿಗೆ ಮೊದಲ ಬಾರಿಗೆ ಆತಿಥ್ಯ ವಹಿಸಿರುವ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಎಲೆಕ್ಟ್ರಾನಿಕ್‌ ಸ್ಕೋರ್‌ ಬೋರ್ಡ್‌ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಾಲಿ ಚಾಂಪಿಯನ್ ಕೂಡಾ ಆಗಿರುವ ರಿಕಿನ್‌ ಪೇಟನಿ ನಾಯಕತ್ವದ ಭಾರತ ತಂಡ  ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವೆನಿಸಿದೆ. ಮೂರು ದಿನ ಜರುಗಲಿರುವ ಟೂರ್ನಿಯಲ್ಲಿ  ಅಗ್ರಸ್ಥಾನ ಗಳಿಸುವ ತಂಡ ಚೀನಾದಲ್ಲಿ ನಡೆಯುವ 28ನೇ ಫಿಬಾ ಏಷ್ಯಾ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಪಡೆಯಲಿದೆ.

2002ರಲ್ಲಿ ಮೊದಲ ಬಾರಿಗೆ ಈ  ಚಾಂಪಿಯನ್‌ಷಿಪ್‌ ನಡೆದಿತ್ತು. ಆಗ ಭಾರತ ಚಾಂಪಿಯನ್ ಆಗಿತ್ತು. 2013ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಬಾಂಗ್ಲಾದೇಶ ಪ್ರಶಸ್ತಿ ಜಯಿಸಿತ್ತು. ಹೋದ ವರ್ಷದ ಫೈನಲ್‌ನಲ್ಲಿ ಬಾಂಗ್ಲಾ ತಂಡವನ್ನು ಮಣಿಸಿ ಭಾರತ ಚಾಂಪಿಯನ್‌ ಆಗಿತ್ತು. ಬಾಂಗ್ಲಾ, ನೇಪಾಳ, ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಭೂತಾನ್‌ ತಂಡಗಳು ಈಗಾಗಲೇ ನಗರಕ್ಕೆ ಬಂದಿವೆ.

ಆರು ತಂಡಗಳ ನಡುವಿನ ಪೈಪೋಟಿ  ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ. ಭಾರತ ತಂಡಕ್ಕೆ ಶ್ರೀಲಂಕಾ ಪ್ರಬಲ ಪೈಪೋಟಿ ಒಡ್ಡಬಲ್ಲ ಸಾಮರ್ಥ್ಯ ಹೊಂದಿದೆ. ವಿಜಯಾ ಬ್ಯಾಂಕ್‌ ಉದ್ಯೋಗಿ ಕರ್ನಾಟಕದ ಅರವಿಂದ್ ರಾಷ್ಟ್ರೀಯ ತಂಡದಲ್ಲಿದ್ದಾರೆ.

ಸಂಜೆ ಉದ್ಘಾಟನೆ: ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮ ದಲ್ಲಿ ಐಪಿಎಸ್ ಅಧಿಕಾರಿ ಓಂಪ್ರಕಾಶ್‌ ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ. ಬ್ಕಾಸ್ಕೆಟ್‌ಬಾಲ್‌ ಮಾಜಿ ಆಟಗಾರ ಕೆ. ರಾಜಗೋಪಾಲ್‌ ಅತಿಥಿಯಾಗಿ ಬರಲಿದ್ದಾರೆ.

ಭಾರತ ತಂಡ :  ರಿಕಿನ್‌ ಪೇಟನಿ (ನಾಯಕ, ತಮಿಳುನಾಡು), ಜೋಗಿಂದರ್‌ ಸಿಂಗ್‌ ಸಮ್ರಾನ್‌ (ಸರ್ವಿಸಸ್‌), ನರೇಂದರ್‌ ಕೆ. ಗ್ರೆವಾಲ್‌ (ಸರ್ವಿಸಸ್‌), ಪಾರಿ ಅಖಿಲನ್‌ (ತಮಿಳು ನಾಡು), ವಿಕಾಸ್‌ ಕುಮಾರ್ (ಹರಿಯಾಣ), ಪ್ರಥಮ್‌ ಸಿಂಗ್ (ತಮಿಳುನಾಡು), ಅರವಿಂದ್ ಎ(ಕರ್ನಾಟಕ), ವಿನಯ್‌ ಕೌಶಿಕ್‌ (ಗುಜರಾತ್‌), ಆಕಾಶದೀಪ್‌ (ರೈಲ್ವೇಸ್‌), ಗುರ್ವಿಂದರ್‌ ಸಿಂಗ್‌ ಗಿಲ್‌ (ಪಂಜಾಬ್), ಎ. ಅರವಿಂದ್‌ ಹಾಗೂ ಎಸ್‌. ಪ್ರಸನ್ನ ವೆಂಕಟೇಶ್‌ (ಇಬ್ಬರೂ ತಮಿಳುನಾಡು). ಜಿಎಲ್‌ಆರ್‌ ಪ್ರಸಾದ್‌ (ಕೋಚ್‌), ಗೌತಮ್‌ ಗಂಗೂಲಿ (ಮ್ಯಾನೇಜರ್‌).

‘ಟೂರ್ನಿಗೆ ಸಕಲ ಸಿದ್ಧತೆ’
‘ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಯಾಗಿದೆ. ಇದು ಭಾರತದ  ಬ್ಯಾಸ್ಕೆಟ್‌ ಬಾಲ್‌ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯೆನಿಸಿದೆ. ದೇಶದಲ್ಲಿ ಈ ಕ್ರೀಡೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ’ ಎಂದು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಕೆ. ಗೋವಿಂದರಾಜ್‌  ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿದೇಶಿ ಕೋಚ್‌ಗಳಿಂದ ತರಬೇತಿ ಕೊಡಿಸಿ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಯತ್ನಿಸುತ್ತೇನೆ. 16 ವರ್ಷದ ಒಳಗಿನವರ ಮಹಿಳಾ ತಂಡಕ್ಕೆ ವಿದೇಶಿ ಕೋಚ್‌ ನೇಮಿಸಲಾಗಿದೆ’ ಎಂದೂ ವಿವರಿಸಿದರು. ಬಿಎಫ್‌ಐ ಕಾರ್ಯದರ್ಶಿ ಚಂದ್ರಮುಖಿ ಶರ್ಮಾ, ಭಾರತ ತಂಡದ ಆಯ್ಕೆ ಸಮಿತಿ ಸದಸ್ಯ ಎ. ರಾಜನ್‌, ತಂಡದ ಮ್ಯಾನೇಜರ್‌ ಗೌತಮ್ ಗಂಗೂಲಿ  ಉಪಸ್ಥಿತರಿದ್ದರು.
*
ಇಂದಿನ ಪಂದ್ಯಗಳು
* ಬಾಂಗ್ಲಾದೇಶ–ಮಾಲ್ಡೀವ್ಸ್‌ (ಬೆಳಿಗ್ಗೆ 8ಕ್ಕೆ)
* ಭಾರತ–ನೇಪಾಳ (ಬೆ. 9.30)
* ಶ್ರೀಲಂಕಾ–ಭೂತಾನ್‌ (ಬೆ. 11)
* ಭಾರತ–ಬಾಂಗ್ಲಾದೇಶ (ಸಂಜೆ 5)
* ಭೂತಾನ್‌–ನೇಪಾಳ್‌ (ಸಂಜೆ 6.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.