ADVERTISEMENT

ಭಾರತಕ್ಕೆ ಸರಣಿ ಜಯದ ನಿರೀಕ್ಷೆ

ಕ್ರಿಕೆಟ್‌: ನಾಲ್ಕನೇ ಏಕದಿನ ಪಂದ್ಯ ಇಂದು, ಇಂಗ್ಲೆಂಡ್‌ ಪುಟಿದೇಳುವುದೇ?

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಬರ್ಮಿಂಗ್‌ಹ್ಯಾಮ್‌ (ಪಿಟಿಐ):  ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್‌ ಪಂದ್ಯ ಮಂಗಳವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲುವು ಪಡೆದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರ ಭಾರತ ತಂಡದ್ದಾಗಿದೆ.

ಟೆಸ್ಟ್‌ನಲ್ಲಿ ಹೀನಾಯ ಸೋಲು ಎದುರಾದಾಗ ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ತಂಡ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಎರಡು ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಬಗ್ಗುಬಡಿದು ಭಾರತ ಟೀಕಾಕಾರರಿಗೆ ಉತ್ತರ ನೀಡಿದೆ. ಈಗ ಏಕದಿನ ಸರಣಿ ಗೆದ್ದುಕೊಂಡರೆ, ಟೆಸ್ಟ್‌ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಂತಾಗುತ್ತದೆ. ಅದಕ್ಕಾಗಿ ದೋನಿ ಬಳಗ ಸಜ್ಜಾಗಿದೆ.
ರಾಯುಡು–ರಹಾನೆ ಮೇಲೆ ಭರವಸೆ: ಮೂರನೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿದ್ದ ಅಂಬಟಿ ರಾಯುಡು, ಸುರೇಶ್ ರೈನಾ ಭಾರತ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.

ಸ್ಪಿನ್ನರ್‌ಗಳೇ ಶಕ್ತಿ: ರವೀಂದ್ರ ಜಡೇಜ ಹಾಗೂ ರವಿಚಂದ್ರನ್‌ ಅಶ್ವಿನ್‌ ಅವರನ್ನೊಳಗೊಂಡ ಭಾರತ ಸ್ಪಿನ್‌ ಬೌಲರ್‌ಗಳ ಮೇಲೆ ಅವಲಂಬಿತವಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎರಡು ಪಂದ್ಯಗಳಿಂದ ಐದು ವಿಕೆಟ್‌ ಪಡೆದಿರುವ ಅಶ್ವಿನ್‌ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. 

ಕೊನೆಯ ಅವಕಾಶ: ಸರಣಿ ಸೋಲು ತಪ್ಪಿಸಿಕೊಳ್ಳಲು ಅಲಸ್ಟೇರ್ ಕುಕ್‌ ಸಾರಥ್ಯದ ಆತಿಥೇಯ ತಂಡಕ್ಕೆ ಇದು ಕೊನೆಯ ಅವಕಾಶ ಎನಿಸಿದೆ. ಸರಣಿ ಗೆಲ್ಲುವ ಆಸೆಯಂತೂ ಈಡೇರಲು ಸಾಧ್ಯವಿಲ್ಲ. ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಮಂಗಳವಾರದ ಪಂದ್ಯ ಕುಕ್‌ ಪಡೆಗೆ ಮಹತ್ವವೆನಿಸಿದೆ.

ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಆತಿಥೇಯ ರನ್ನು ಕಾಡುತ್ತಿದೆ. ಕುಕ್‌, ಅಲೆಕ್ಸ್‌ ಹೇಲ್ಸ್‌, ಇಯಾನ್‌ ಬೆಲ್‌ ಹಾಗೂ ಜೋ ರೂಟ್‌ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಆರಂಭಿಕ ಜೋಡಿ ಕುಕ್‌ ಮತ್ತು ಹೇಲ್ಸ್‌ ಮೂರನೇ ಪಂದ್ಯದಲ್ಲಿ ಗಟ್ಟಿ ಬುನಾದಿ ನಿರ್ಮಿಸಿದ್ದರಾದರೂ, ನಂತರದ ಬ್ಯಾಟ್ಸ್‌ಮನ್‌ಗಳು ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವೈಫಲ್ಯ ಅನುಭವಿಸಿದ್ದರು.

ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನುಭವಿಸು ತ್ತಿರುವ ಸೋಲನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕುಕ್‌ ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸು ತ್ತಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ ಸನಿಹದಲ್ಲಿಯೇ ಇರುವ ಕಾರಣ ಬಲಿಷ್ಠ ತಂಡ ಕಟ್ಟಲು ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವ ಕೂಗು ಕೇಳಿ ಬರುತ್ತಿದೆ.

ಆದ್ದರಿಂದ ಕುಕ್‌ ಮೇಲೂ ಒತ್ತಡವಿದೆ. ಹೋದ ವರ್ಷದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ಕೊನೆಯ ಸಲ ಮುಖಾಮುಖಿಯಾಗಿದ್ದವು. ಆಗ, ಭಾರತ ಐದು ರನ್‌ಗಳ ಗೆಲುವು ಸಾಧಿಸಿತ್ತು. ಅದೇ ರೀತಿಯ ಜಯ ಈ ಪಂದ್ಯದಲ್ಲೂ ಸಾಧ್ಯವಾದರೆ, ಸರಣಿ ಗೆಲುವಿನ ಸಂಭ್ರಮ ಭಾರತದ ಪಾಲಾಗಲಿದೆ.
ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ADVERTISEMENT

ಅಗ್ರಸ್ಥಾನಕ್ಕೇರಿದ ಭಾರತ ತಂಡ
ದುಬೈ (ಐಎಎನ್‌ಎಸ್‌): ಏಕದಿನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ತಂಡ ಮತ್ತೆ ಮೊದಲ ಸ್ಥಾನಕ್ಕೆ ಮರಳಿದೆ.ಹರಾರೆಯಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಜಿಂಬಾಬ್ವೆ ತಂಡ ಗೆಲುವು ದಾಖಲಿಸಿರುವ ಕಾರಣ ವಿಶ್ವ ಚಾಂಪಿಯನ್‌ ಭಾರತ ತಂಡಕ್ಕೆ ಮತ್ತೆ ಮೊದಲ ಸ್ಥಾನ ಲಭಿಸಿದೆ ಎಂದು ಐಸಿಸಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಗ್ಲೆಂಡ್‌ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ ಗೆಲುವು ಸಾಧಿಸಿ 114 ರೇಟಿಂಗ್‌ ಪಾಯಿಂಟ್‌ ಪಡೆದು  ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯ 111 ರೇಟಿಂಗ್‌ ಪಾಯಿಂಟ್‌ ಗಳಿಸಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆಸ್ಟ್ರೇಲಿಯ ಮತ್ತು ಜಿಂಬಾಬ್ವೆ ಎದುರು ಸತತ ಗೆಲುವು ಪಡೆದಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಏರಿದೆ. ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.