ADVERTISEMENT

ಭಾರತಕ್ಕೆ ಸರಣಿ ಜಯದ ವಿಶ್ವಾಸ

ಕ್ರಿಕೆಟ್‌: ಇಂದಿನಿಂದ ಟೆಸ್ಟ್‌, 22 ವರ್ಷದ ಬಳಿಕ ಸರಣಿ ಜಯಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2015, 19:52 IST
Last Updated 27 ಆಗಸ್ಟ್ 2015, 19:52 IST
ಮೂರನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಲು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಗುರುವಾರ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವೇಳೆ ಕಂಡು ಬಂದಿದ್ದು ಹೀಗೆ  ಎಪಿ/ಪಿಟಿಐ ಚಿತ್ರ
ಮೂರನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಲು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಗುರುವಾರ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವೇಳೆ ಕಂಡು ಬಂದಿದ್ದು ಹೀಗೆ ಎಪಿ/ಪಿಟಿಐ ಚಿತ್ರ   

ಕೊಲಂಬೊ: ಆತಿಥೇಯ ಶ್ರೀಲಂಕಾ ತಂಡಕ್ಕೆ ಕುಮಾರ ಸಂಗಕ್ಕಾರ  ನಿವೃತ್ತಿಯ ನಂತರದ ಮೊದಲ ಟೆಸ್ಟ್. ಪ್ರವಾಸಿ ಭಾರತ ತಂಡಕ್ಕೆ 22 ವರ್ಷಗಳ ನಂತರ ದ್ವೀಪ ರಾಷ್ಟ್ರದಲ್ಲಿ ಸರಣಿ ಗೆಲುವಿನ ಸಿಹಿ ಸವಿಯುವ ಅವಕಾಶ.


ಶುಕ್ರವಾರ ಇಲ್ಲಿಯ ಎಸ್‌ಎಸ್‌ಸಿ ಮೈದಾನದಲ್ಲಿ  ಆರಂಭವಾಗಲಿರುವ  ಮೂರನೇ ಟೆಸ್ಟ್‌  ಪಂದ್ಯವು ಕುತೂಹಲದ ಕಣಜವಾಗಲು ಈ ಎರಡು ಅಂಶಗಳು ಸಾಕು.

ತಮ್ಮ ದೇಶದ ಶ್ರೇಷ್ಠ ಕ್ರಿಕೆಟಿಗನಿಗೆ ‘ವಿಜಯದ ವಿದಾಯ’ ನೀಡುವಲ್ಲಿ ವಿಫಲರಾಗಿರುವ ಲಂಕಾ ತಂಡ ಈ ಪಂದ್ಯದ ಗೆಲುವಿನತ್ತ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ಗೆದ್ದಿದ್ದ ಲಂಕಾ ತಂಡಕ್ಕೆ ಎರಡನೇ ಪಂದ್ಯದಲ್ಲಿ ದೊಡ್ಡ ಪೆಟ್ಟು ನೀಡಿರುವ ವಿರಾಟ್ ಕೊಹ್ಲಿ ಬಳಗವು ಈಗ ಆತ್ಮವಿಶ್ವಾಸದ ಹೊಳೆ ಯಲ್ಲಿ ತೇಲುತ್ತಿದೆ. 1–1ರಿಂದ ಸಮಸ್ಥಿತಿ ಯಲ್ಲಿರುವ ಸರಣಿಯ ಕೊನೆಯ ಪಂದ್ಯ ವನ್ನು ಗೆಲ್ಲಲು ಎರಡೂ ತಂಡಗಳು  ಎಲ್ಲ ಸಾಮರ್ಥ್ಯವನ್ನು ಹಾಕಲು ಸಿದ್ಧವಾಗಿವೆ.

1993ರಲ್ಲಿ ಮೊಹಮ್ಮದ್ ಅಜರುದ್ದೀನ್ ಬಳಗವು 1–0ಯಿಂದ ಟೆಸ್ಟ್ ಸರಣಿ ಗೆದ್ದಿತ್ತು. ತದನಂತರ ಶ್ರೀಲಂಕಾದಲ್ಲಿ ಸರಣಿ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ. ಪೂರ್ಣಾವಧಿ ನಾಯಕನಾದ ಮೇಲೆ ಮೊದಲ ಜಯದ ಸಂಭ್ರಮ ಆಚರಿಸಿರುವ ಕೊಹ್ಲಿ ಈಗ ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ. 

ಗಾಯದ ಸಮಸ್ಯೆ; ಬದಲಾವಣೆ
ಎರಡನೇ ಟೆಸ್ಟ್‌ನಲ್ಲಿ ಸಂಗಾ ತಮ್ಮ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದರು. ಈ ಟೆಸ್ಟ್‌ನಲ್ಲಿ ಅವರ ಬದಲಿಗೆ ಉಪುಲ್ ತರಂಗಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಸೋತರೂ, ಎರಡನೇ ಪಂದ್ಯದಲ್ಲಿ ಪುಟಿದೆದ್ದು 278 ರನ್‌ಗಳ ಭರ್ಜರಿ ಜಯ ಗಳಿಸಿದ್ದ ಭಾರತ ತಂಡದಲ್ಲಿಯೂ ಕೆಲವು ಅನಿವಾರ್ಯ  ಬದಲಾವಣೆಗಳು ಆಗಿವೆ.  ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಗಳಿಸಿದ್ದ ಶಿಖರ್ ಧವನ್ ಗಾಯಗೊಂಡು ಕೊಲಂಬೊ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅವರ ಬದಲಿಗೆ ಆಡಿದ ಮುರಳಿ ವಿಜಯ್ ಗಾಯಗೊಂಡು ಮೂರನೇ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ.  ಇದರಿಂದಾಗಿ   ಈ ಪಂದ್ಯದಲ್ಲಿ ಸೌರಾಷ್ಟ್ರದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಕರ್ನಾಟಕದ ಕೆ.ಎಲ್. ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಖಚಿತ ವಾಗಿದೆ. ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಪೂಜಾರಗೆ ಕಳೆದ ಎರಡೂ ಪಂದ್ಯಗಳಲ್ಲಿ ಅವಕಾಶ ನೀಡಿರಲಿಲ್ಲ.

ಎರಡನೇ ಟೆಸ್ಟ್‌ನ ‘ಪಂದ್ಯಶ್ರೇಷ್ಠ’ ರಾಹುಲ್ ಮತ್ತು ಅದೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಅಜಿಂಕ್ಯ ರಹಾನೆ ಉತ್ತಮ ಫಾರ್ಮ್‌ನಲ್ಲಿರುವುದು ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.

ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ, ಟೆಸ್ಟ್ ಪದಾರ್ಪಣೆಯ ನಿರೀಕ್ಷೆ ಯಲ್ಲಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ ಮನ್ ನಮನ್ ಓಜಾ ತಂಡಕ್ಕೆ ರನ್ನುಗಳ ಕಾಣಿಕೆ ನೀಡಬಲ್ಲ ಸಮರ್ಥರು.  ಪೂಜಾರ ಸ್ಥಾನ ಪಡೆದಿರುವುದರಿಂದ ಕರ್ನಾಟಕದ ಕರುಣ್ ನಾಯರ್‌ಗೆ ಪದಾರ್ಪಣೆ ಅವಕಾಶ ಸಿಗುವುದು ಅನುಮಾನ.

ಎರಡೂ ಪಂದ್ಯಗಳಲ್ಲಿ ವಿಜೃಂಭಿಸಿರುವ ಸ್ಪಿನ್ ಜೋಡಿ ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಮತ್ತೊಮ್ಮೆ ತಮ್ಮ ಕೈಚಳಕ ತೋರಲು ಸಿದ್ಧರಾಗಿದ್ದಾರೆ.

ಇಬ್ಬರು ಸ್ಪಿನ್ನರ್ ಮತ್ತು ಮೂವರು ಮಧ್ಯಮವೇಗದ ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯುವುದು ಬಹುತೇಕ ಖಚಿತ. ಇಶಾಂತ್ ಶರ್ಮಾ, ಉಮೇಶ್ ಯಾದವ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಆತಿಥೇಯ ತಂಡ ಕೂಡ ಇದೇ ತಂತ್ರವನ್ನು ಅನುಸರಿಸುವ ನಿರೀಕ್ಷೆ ಇದೆ.  ಕಳೆದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡವು ದೊಡ್ಡ ಅಂತರದ ಸೋಲು ಅನುಭವಿಸಿತ್ತು. ಆದರೆ, ನಾಯಕ ಏಂಜೆಲೊ ಮ್ಯಾಥ್ಯೂಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೌಶಲ್ ಸಿಲ್ವಾ, ಕರುಣಾರತ್ನೆ,  ಚಾಂಡಿಮಾಲ್, ಲಾಹಿರು ತಿರಿಮಾನ್ನೆ  ಭಾರತದ ಬೌಲರ್‌ಗಳ ತಂತ್ರಗಳಿಗೆ ತಕ್ಕ ಶಾಸ್ತಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಪಿಚ್ ಮರ್ಮ ಏನು?
ಕಳೆದ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ವಿಜೃಂಭಿಸಿದ್ದಾರೆ. ಆದರೆ, ಸ್ಪೋರ್ಟಿಂಗ್ ವಿಕೆಟ್ ಎನಿಸಿರುವ ಎಸ್‌ಎಸ್‌ಸಿ ಮೈದಾನವು ಮೊದಲ ಎರಡು ದಿನ ವೇಗಿಗಳಿಗೂ ಉತ್ತಮ ನೆರವು ನೀಡಬಹುದು.

ತಂಡಗಳು ಇಂತಿವೆ
ಭಾರತ:
ವಿರಾಟ್ ಕೊಹ್ಲಿ (ನಾಯಕ), ಚೇತೇಶ್ವರ ಪೂಜಾರ, ಕೆ.ಎಲ್. ರಾಹುಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ನಮನ್ ಓಜಾ (ವಿಕೆಟ್‌ಕೀಪರ್), ಸ್ಟುವರ್ಟ್ ಬಿನ್ನಿ, ಆರ್. ಅಶ್ವಿನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ .

ಶ್ರೀಲಂಕಾ: ಏಂಜೆಲೊ ಮ್ಯಾಥ್ಯೂಸ್‌ (ನಾಯಕ), ದಿಮುತ್ ಕರುಣಾರತ್ನೆ, ಕೌಶಲ್ ಸಿಲ್ವಾ, ಉಪುಲ್ ತರಂಗಾ, ಲಾಹಿರು ತಿರಿಮಾನ್ನೆ, ದಿನೇಶ್ ಚಾಂಡಿಮಲ್, ಕೌಶಲ್ ಪೆರೇರಾ (ವಿಕೆಟ್‌ಕೀಪರ್), ಧಮ್ಮಿಕಾ ಪ್ರಸಾದ್, ರಂಗನಾ ಹೆರಾತ್,  ತರಿಂದು ಕೌಶಲ್, ದಿಲ್‌ರುವಾನ್ ಪೆರೇರಾ, ನುವಾನ್ ಪ್ರದೀಪ್.

ಪಂದ್ಯದ ಆರಂಭ: ಬೆಳಿಗ್ಗೆ 10
ನೇರಪ್ರಸಾರ: ಸೋನಿ ಸಿಕ್ಸ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.