ADVERTISEMENT

ಭಾರತ ತಂಡಕ್ಕೆ ನಿರಾಸೆ

ಅಮೆರಿಕ ವಿರುದ್ಧದ ಹಾಕಿ ಸರಣಿಯ ಮೊದಲ ಪಂದ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ಅಮೆರಿಕ ಮತ್ತುಭಾರತ ತಂಡಗಳ ನಡುವಣ ಪಂದ್ಯ
ಅಮೆರಿಕ ಮತ್ತುಭಾರತ ತಂಡಗಳ ನಡುವಣ ಪಂದ್ಯ   

ಮನಿಮ್‌, ಅಮೆರಿಕ (ಪಿಟಿಐ): ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ  2–3 ಗೋಲುಗಳಿಂದ ಪರಾಭವಗೊಂಡಿದೆ.

ಮಂಗಳವಾರ ನಡೆದ ಹಣಾಹಣಿಯಲ್ಲಿ ಅಮೆರಿಕದ ಕಥಾಲಿನ್‌  ಶರ್ಕೆ ಆರನೇ ನಿಮಿಷದಲ್ಲಿ ಗೋಲು ಗಳಿಸಿದರು. ಕೆಥಿಯೆ ಬಾಮ್‌ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಚೆಂಡನ್ನು ಗುರಿ ಸೇರಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಚುರು ಕಾದ ಭಾರತ ತಂಡದ  ಪ್ರೀತಿ ದುಬೆ 33ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು.  ನಂತರ ದೀಪಿಕಾ 38ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 2–2ರಲ್ಲಿ ಸಮಬಲಕ್ಕೆ ಕಾರಣರಾದರು. ನಂತರ ಎರಡೂ ತಂಡಗಳಿಂದ ಗೋಲು ಗಳಿಕೆಗಾಗಿ ಚುರುಕಿನ ಹೋರಾಟ ಕಂಡು ಬಂದಿತು. 48ನೇ ನಿಮಿಷದಲ್ಲಿ ಅಮೆರಿಕದ ಕೆಲ್ಸಿ ಕೊಲೊಜೆಜೆಚಿಕ್‌ ಸೊಗಸಾಗಿ ಗೋಲು ಬಾರಿಸಿ ಮುನ್ನಡೆ ಕಾರಣರಾದರು. ಇದರಿಂದ ಒತ್ತಡಕ್ಕೆ ಒಳಗಾದ ಭಾರತ ತಂಡದವರು ಗೋಲು ಬಾರಿಸಲು ಪದೇ ಪದೇ ಯತ್ನಿಸಿ ವಿಫಲರಾದರು.

‘ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಈ ಟೂರ್ನಿ ನಮಗೆ ಕೊನೆಯ ಅವಕಾಶ. ಆದ್ದರಿಂದ ಪ್ರತಿ ಪಂದ್ಯ ಕೂಡ ಮುಖ್ಯ. ಅಮೆರಿಕ ವಿರುದ್ಧದ ಈ ಪಂದ್ಯದಲ್ಲಿ ಕಠಿಣ ಪೈಪೋಟಿ ಕಂಡು ಬಂದಿತು. ನಮ್ಮ ತಂಡದ ಆಟಗಾರ್ತಿಯರು ಚೆನ್ನಾಗಿ ಆಡಿದರು.

ಆದರೂ ಈ ಪಂದ್ಯದಲ್ಲಿ ಆದ ತಪ್ಪುಗಳನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ಟೂರ್ನಿಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಭಾರತ ತಂಡದ ಕೋಚ್‌ ನೀಲ್‌ ಹಾವುಡ್‌ ಹೇಳಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ (ಭಾರತದ ಕಾಲಮಾನ) ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡ ಅಮೆರಿಕದ ವಿರುದ್ಧ  ಪೈಪೋಟಿ ನಡೆಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.