ADVERTISEMENT

ಭಾರತ ಮೂಲದ ಗುಲಾಟಿ ಆಕಾಂಕ್ಷಿ

ಫಿಫಾ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST
ಸುನಿಲ್‌ ಗುಲಾಟಿ
ಸುನಿಲ್‌ ಗುಲಾಟಿ   

ವಾಷಿಂಗ್ಟನ್‌/ಜ್ಯೂರಿಕ್‌ (ಪಿಟಿಐ/ ಎಎಫ್‌ಪಿ): ಫಿಫಾ ಅಧ್ಯಕ್ಷ ಸ್ಥಾನಕ್ಕೆ ಸೆಪ್‌ ಬ್ಲಾಟರ್ ರಾಜೀನಾಮೆ ನೀಡುತ್ತಿದ್ದಂತೆ ಈ ಸ್ಥಾನಕ್ಕೆ ಏರಲು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ಆರಂಭಗೊಂಡಿದೆ. ಅಮೆರಿಕ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷರಾಗಿರುವ ಭಾರತ ಮೂಲದ ಸುನಿಲ್‌ ಗುಲಾಟಿ ಕೂಡಾ ಫಿಫಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫಿಫಾದಲ್ಲಿ ಗಮನಾರ್ಹ ಬದಲಾವಣೆಗಳು ಆಗಲು ಕಾರಣರಾದ 55 ವರ್ಷದ ಗುಲಾಟಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಒಲವು ತೋರಿದ್ದಾರೆ.  ಬ್ಲಾಟರ್‌ ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಅಮೆರಿಕ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಆದ್ದರಿಂದ ಬ್ಲಾಟರ್‌ ರಾಜೀನಾಮೆ ನೀಡಿರುವ ಕಾರಣ ಈ ಸ್ಥಾನಕ್ಕೇರಲು ಅಮೆರಿಕ ಭಾರಿ ಕಸರತ್ತು ನಡೆಸುತ್ತಿದೆ.

‘ಫಿಫಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗುಲಾಟಿ ತುಂಬಾ ಉತ್ಸುಕರಾಗಿದ್ದಾರೆ. ಈ ಬಗ್ಗೆ ಅಮೆರಿಕ ಫುಟ್‌ಬಾಲ್‌ ಫೆಡರೇಷನ್‌ ಸಾಕಷ್ಟು ಆಸಕ್ತಿ ಹೊಂದಿದೆ’ ಎಂದು ಎನ್‌ಬಿಎ ಸ್ಪೋರ್ಟ್ಸ್ ತಿಳಿಸಿದೆ.

17 ವರ್ಷಗಳಿಂದ ಫಿಫಾದ ಆಡಳಿತ ನೋಡಿಕೊಂಡು ಬಂದಿದ್ದ ಬ್ಲಾಟರ್‌ ಹೋದ ವಾರವಷ್ಟೇ ಫಿಫಾ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿದ್ದರು. ಆದರೆ, ಮಂಗಳವಾರ ರಾತ್ರಿ ಅವರು ರಾಜೀನಾಮೆ ನೀಡಿದ್ದರು.

ಜ್ಯೂರಿಕ್‌ನಲ್ಲಿ ಕಾಂಗ್ರೆಸ್‌ ಸಭೆ ಆಯೋಜನೆಯಾಗಿದ್ದ ವೇಳೆ ಫುಟ್‌ಬಾಲ್‌ ಟೂರ್ನಿಗಳನ್ನು ಸಂಘಟಿಸುವಲ್ಲಿ ಭ್ರಷ್ಟಾ ಚಾರವಾಗಿದೆ ಎನ್ನುವ ಸುದ್ದಿ ಬಹಿರಂಗ ವಾಗಿತ್ತು. ಆದ್ದರಿಂದ ಪೊಲೀಸರು ಹೋಟೆಲ್‌ ಮೇಲೆ ದಾಳಿ ನಡೆಸಿ ಫಿಫಾದ ಪ್ರಮುಖ ಹತ್ತು ಅಧಿಕಾರಿಗಳನ್ನು ಬಂಧಿಸಿದ್ದರು. ಆದ್ದರಿಂದ ಬ್ಲಾಟರ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡಿದ್ದರು. ಗುಲಾಟಿ ಮಾತ್ರವಲ್ಲದೇ ಬೇರೆ ರಾಷ್ಟ್ರಗಳ ಫುಟ್‌ ಬಾಲ್‌ ಫೆಡರೇಷನ್‌ಗಳ ಮುಖ್ಯಸ್ಥ ರಿಂದಲೂ ಫಿಫಾ ಅಧ್ಯಕ್ಷ ಸ್ಥಾನಕ್ಕೇರಲು ಪೈಪೋಟಿ ನಡೆಯುತ್ತಿದೆ. ಯುಇ ಎಫ್‌ಎನ ಅಧ್ಯಕ್ಷ ಸ್ಪರ್ಧೆಯಲ್ಲಿದ್ದಾರೆ.

‘ಬ್ಲಾಟರ್‌ ರಾಜೀನಾಮೆ ನೀಡಿದ್ದು ಒಳ್ಳೆಯದೇ ಆಯಿತು. ಅವರ ನಿರ್ಧಾರ ಸ್ವಾಗತಾರ್ಹ. ಫಿಫಾ ಅಧ್ಯಕ್ಷ ಸ್ಥಾನಕ್ಕೆ ಈಗ ಹೊಸ ನಾಯಕತ್ವ ಬೇಕಿದೆ’ ಎಂದು ಆಸ್ಟ್ರೇಲಿಯಾ ಫುಟ್‌ಬಾಲ್ ಫೆಡರೇಷನ್‌ ಹೇಳಿದೆ. ಆದರೆ, ಬ್ಲಾಟರ್ ನಿರ್ಧಾರಕ್ಕೆ ಕೆನ್ಯಾ ಬೇಸರಗೊಂಡಿದೆ.
‘ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಬ್ಲಾಟರ್‌ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಅಧಿಕಾರದಲ್ಲಿದ್ದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದವು’ ಎಂದು ಕೆನ್ಯಾ ಫುಟ್‌ಬಾಲ್‌ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

ರಹದಾರಿ: ‘ಬ್ಲಾಟರ್‌ ರಾಜೀನಾಮೆ ನೀಡಿರುವುದನ್ನು ಗೌರವಿಸುತ್ತೇವೆ. ಆದ್ದರಿಂದ ಫಿಫಾ ಆಡಳಿತದಲ್ಲಿ ಹೊಸ ನಾಯಕ ಹುಟ್ಟಿಕೊಳ್ಳಲು ಇದು ಸರಿಯಾದ ಸಮಯ’ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ. ಬ್ಲಾಟರ್‌ 1999ರಿಂದ ಐಒಸಿ ಸದಸ್ಯರಾಗಿದ್ದಾರೆ.

ಯಾರು ಈ ಸುನಿಲ್‌ ಗುಲಾಟಿ?
ಅಲಹಾಬಾದ್‌ನ ಗುಲಾಟಿ ಫಿಫಾ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ. ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ನಂತರ ಇದೇ ವಿ.ವಿ.ಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದರು. ಗುಲಾಟಿ ಐದು ವರ್ಷದವರಿದ್ದಾಗ ಅವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.