ADVERTISEMENT

ಭಾರತ ವನಿತೆಯರಿಗೆ ಪ್ರಶಸ್ತಿ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಭಾರತ ವನಿತೆಯರಿಗೆ ಪ್ರಶಸ್ತಿ
ಭಾರತ ವನಿತೆಯರಿಗೆ ಪ್ರಶಸ್ತಿ   

ಪೊಚೆಸ್ಟಾರ್ಮ್‌, ದಕ್ಷಿಣ ಆಫ್ರಿಕಾ: ಪೂನಮ್ ರಾವತ್ (70), ಮಿಥಾಲಿ ರಾಜ್ (62) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾನುವಾರ ಪ್ರಶಸ್ತಿ ಎತ್ತಿಹಿಡಿದಿದೆ.

ಸಂಘಟಿತ ಆಟ ಆಡಿದ ಭಾರತ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 8 ವಿಕೆಟ್‌ಗಳ ಗೆಲುವು ಪಡೆದಿದೆ. ಲೀಗ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಿದ್ದ ಭಾರತ ಈಗ ಸೇಡು ತೀರಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಆತಿಥೇಯ ಬಳಗ 40.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಮಿಥಾಲಿ ರಾಜ್ ಪಡೆ 33 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸುಲಭ ಗುರಿ ಬೆನ್ನಟ್ಟಿದ ಪ್ರವಾಸಿ ತಂಡ ಆರಂಭದಲ್ಲೇ ದೀಪ್ತಿ ಶರ್ಮಾ (8) ಅವರ ವಿಕೆಟ್ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಆಡಿದ ಮೋನಾ ಮೆಷ್ರಮ್ ಕೂಡ 2 ರನ್ ಗಳಿಸಿ ಡಗ್‌ಔಟ್ ಸೇರಿಕೊಂಡರು.

ADVERTISEMENT

ಬಳಿಕ ಜತೆಯಾದ ಪೂನಮ್ ರಾವತ್‌ (70) ಹಾಗೂ ಮಿಥಾಲಿ ರಾಜ್‌ (62)  ಅಮೋಘ ಇನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್‌ಗೆ ಮುರಿಯದ ಜತೆಯಾಟದಲ್ಲಿ ಈ ಜೋಡಿ 127 ರನ್ ಕಲೆಹಾಕಿತು. 92 ಎಸೆತಗಳನ್ನು ಎದುರಿಸಿದ ಪೂನಮ್ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿ ಮಿಂಚಿದರು. ಇವರಿಗೆ ಮಿಥಾಲಿ ಉತ್ತಮ ಸಾಥ್ ನೀಡಿದರು. ಹತ್ತು ಬೌಂಡರಿಗಳು ಅವರ ಬ್ಯಾಟ್‌ನಿಂದ ಹೊರಹೊಮ್ಮಿದವು.

ಏಳು ಬೌಲರ್‌ಗಳನ್ನು ಆಡಿಸಿದ ದಕ್ಷಿಣ ಆಫ್ರಿಕಾ ಪಡೆ ವಿಕೆಟ್ ಪಡೆಯಲು ಸಾಕಷ್ಟು ಬೆವರು ಹರಿಸಿತು. ಜೂಲನ್, ಪೂನಮ್‌ ಮಿಂಚು:  ವೇಗದ ಬೌಲರ್ ಜೂಲನ್ ಗೋಸ್ವಾಮಿ (22ಕ್ಕೆ3), ಮತ್ತು ಪೂನಮ್ ಯಾದವ್‌ (32ಕ್ಕೆ3) ಮಿಂಚು ಹರಿಸಿದರು.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ವುಮನ್ ಸುನೆ ಲುಸ್ (55) ಉತ್ತಮ ಆರಂಭ ನೀಡಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳಿಂದ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಕೆಳಕ್ರಮಾಂಕದ ನಾಲ್ವರು ಬ್ಯಾಟ್ಸ್‌ವುಮನ್‌ಗಳು ಸೊನ್ನೆ ಸುತ್ತಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ:  40.2 ಓವರ್‌ಗಳಲ್ಲಿ 156 (ಲುಸ್‌ 55; ಜೂಲನ್ ಗೋಸ್ವಾಮಿ 22ಕ್ಕೆ3, ಪೂನಮ್ ಯಾದವ್‌ 32ಕ್ಕೆ3). ಭಾರತ: 33 ಓವರ್‌ಗಳಲ್ಲಿ 2 ವಿಕೆಟ್‌ಗೆ 160 (ಪೂನಮ್ ರಾವತ್ ಅಜೇಯ 70, ಮಿಥಾಲಿ ರಾಜ್‌ ಅಜೇಯ 62). ಫಲಿತಾಂಶ: ಭಾರತಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.