ADVERTISEMENT

ಮದ್ರಾಸ್‌ ವಿಶ್ವವಿದ್ಯಾಲಯಕ್ಕೆ ಗೆಲುವು

ಫುಟ್‌ಬಾಲ್‌: ಕ್ಯಾಲಿಕಟ್‌ಗೆ ಮುಖಭಂಗ ತಪ್ಪಿಸಿದ ಶಿಹಾದ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:50 IST
Last Updated 19 ಜನವರಿ 2017, 19:50 IST
ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಲೀಗ್‌ ಪಂದ್ಯದಲ್ಲಿ ಗೋಲು ಆವರಣದ ಬಳಿ ಸಮೀಪ ಕ್ಯಾಲಿಕಟ್‌ ವಿಶ್ವವಿದ್ಯಾಲಯ ತಂಡದ ಮಹಮ್ಮದ್‌ ರೆಹಮಾನ್‌ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯ ತಂಡದ ಮಿಡ್‌ ಫೀಲ್ಡರ್‌ ಜೂಡ್‌ ಫೆಲಿಕ್ಸ್‌ ಚೆಂಡಿಗಾಗಿ ಕಾದಾಡಿದರು  ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಲೀಗ್‌ ಪಂದ್ಯದಲ್ಲಿ ಗೋಲು ಆವರಣದ ಬಳಿ ಸಮೀಪ ಕ್ಯಾಲಿಕಟ್‌ ವಿಶ್ವವಿದ್ಯಾಲಯ ತಂಡದ ಮಹಮ್ಮದ್‌ ರೆಹಮಾನ್‌ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯ ತಂಡದ ಮಿಡ್‌ ಫೀಲ್ಡರ್‌ ಜೂಡ್‌ ಫೆಲಿಕ್ಸ್‌ ಚೆಂಡಿಗಾಗಿ ಕಾದಾಡಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಹಾಲಿ ಚಾಂಪಿಯನ್‌ ಚೆನ್ನೈನ ಮದ್ರಾಸ್‌ ವಿಶ್ವವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಫುಟ್‌ಬಾಲ್‌ ಟೂರ್ನಿಯ ಲೀಗ್‌ನ ಮೊದಲ ಪಂದ್ಯದಲ್ಲಿ ಕಾಟಾಂಕುಳತ್ತೂರಿನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡದ ವಿರುದ್ಧ ಗೆದ್ದು ಮೂರು ಅಂಕಗಳಿಸಿತು.

ಕ್ಯಾಲಿಕಟ್‌ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದ್ದರಿಂದ ಎರಡೂ ತಂಡಗಳು ಒಂದೊಂದು ಅಂಕಕ್ಕೆ ತೃಪ್ತಿಪಟ್ಟವು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಕ್ಯಾಲಿಕಟ್‌ ವಿಶ್ವವಿದ್ಯಾಲಯಕ್ಕೆ ಸೋಲು ಖಚಿತ ಎಂದುಕೊಳ್ಳುತ್ತಿರುವಾಗಲೇ ಎದುರಾಳಿ ತಂಡದ ಭದ್ರಕೋಟೆಯನ್ನು ವಂಚಿಸಿದ ಫಾರ್ವರ್ಡ್‌ ಆಟಗಾರ ಶಿಹಾದ್‌ ನೆಲ್ಲಿದರಂಬನ್‌ (88, 90+2 ನಿಮಿಷ) ಜೋಡಿ ಗೋಲುಗಳಿಸಿ ತಮ್ಮ ತಂಡವನ್ನು ಮುಖಭಂಗದಿಂದ ಪಾರು ಮಾಡಿದರು.

ADVERTISEMENT

ಅತ್ಯುತ್ತಮ ಕಾಲ್ಚಳಕ ತೋರಿದ ಈ ಆಟಗಾರ ಪಂದ್ಯ ಮುಗಿಯಲು ಇನ್ನೆರಡು ನಿಮಿಷ ಬಾಕಿ ಇರುವಾಗ ಮೊದಲ ಗೋಲು ಗಳಿಸಿದರೆ, ಹೆಚ್ಚುವರಿ ಸಮಯದಲ್ಲಿ ಮತ್ತೊಂದು ಗೋಲು ಸಿಡಿಸಿ ಮಹಮ್ಮದ್‌ ಶರೀಫ್‌ ಬಳಗ ನಿಟ್ಟುಸಿರು ಬಿಡುವಂತೆ ಮಾಡಿದರು.

ಇದಕ್ಕೂ ಮುನ್ನ ಪಂದ್ಯದ ಮೊದ ಲಾರ್ಧ ಸಮಬಲದ ಹೋರಾಟಕ್ಕೆ ಸಾಕ್ಷಿ ಯಾಯಿತು. ದ್ವಿತೀಯಾರ್ಧದಲ್ಲಿ ಅಣ್ಣಾ ಮಲೈ ಪರ ಮಿಡ್‌ಫೀಲ್ಡರ್‌ ನೈಜೀರಿ ಯಾದ ಜಿವೆ ಕೆಲೆಚಿ ಎಡಭಾಗದಿಂದ ಸಿಕ್ಕ ಪಾಸ್‌ ಅನ್ನು ನಿಖರವಾಗಿ ‘ನೆಟ್‌’ನೊಳಗೆ ಸೇರಿಸುವ ಮೂಲಕ ಫಿನು ಫಾವಸ್‌ ಬಳಗಕ್ಕೆ ಮೇಲುಗೈ ಒದಗಿಸಿಕೊಟ್ಟರು. ಮುನ್ನಡೆಯ ಸಂಭ್ರಮದಲ್ಲಿದ್ದ ಈ ತಂಡಕ್ಕೆ ಮತ್ತೊಬ್ಬ ಮಿಡ್‌ಫೀಲ್ಡರ್‌ ಜೂಡ್‌ ಫಿಲಿಕ್ಸ್‌ ಇನ್ನೊಂದು ಗೋಲು ಸಿಡಿಸಿ ಗೆಲುವಿನ ಆಸೆ ಮತ್ತಷ್ಟು ಉಜ್ವಲಿಸುವಂತೆ ಮಾಡಿದ್ದರು.

ಒಟ್ಟಾರೆ ಮೂವರು ಆಟಗಾರರನ್ನು ಬದಲಾಯಿಸಿದರೂ ಕ್ಯಾಲಿಕಟ್‌ ತಂಡದ ಕೋಚ್‌ ಎಸ್‌. ಬಾಲನ್‌ ಅವರ ತಂತ್ರ ಗೆಲುವು ತರಲಿಲ್ಲ. ಈ ನಡುವೆ ಎದುರಾಳಿ ಆಟಗಾರರ ಮೇಲೆ ಮುಗಿಬೀಳುತ್ತಿದ್ದ ಅಣ್ಣಾಮಲೈ ತಂಡದ ನಾಯಕ ಫಿನು ಫಾವಸ್‌, ಪ್ರದೀಶ್‌ ಹಾಗೂ ಶ್ಯಾಮ್‌ ಮೊರ್ಟಾನ್‌ ಹಳದಿ ಕಾರ್ಡ್‌ ಎಚ್ಚರಿಕೆಗೆ ಗುರಿಯಾದರು. 

ಎರಡನೇ ಪಂದ್ಯದಲ್ಲಿ ಪ್ರತಾಪ್‌ (38) ಹಾಗೂ ಅರುಣ್‌ ಸುರೇಶ್‌ (78) ಗಳಿಸಿದ ಗೋಲುಗಳ ನೆರವಿನಿಂದ ಮದ್ರಾಸ್‌ ತಂಡ ಗೆಲುವಿನ ನಗೆ ಬೀರಿತು. ನಾಕೌಟ್‌ನಿಂದ ಲೀಗ್‌ಗೆ ಅರ್ಹತೆ ಪಡೆದಿರುವ ಎಸ್‌ಆರ್‌ಎಂ ತಂಡದ ಆಟಗಾರರು ಪ್ರಬಲ ವಿರೋಧ ತೋರಿದರಾದರೂ ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಈ ತಂಡದ ವಿಜಯನ್‌ ಹಾಗೂ ಮಾರ್ತುತು ಪಂಡಿ ಹಾಗೂ ಮದ್ರಾಸ್‌ ತಂಡದ ಪ್ರತಾಪ್‌ ಹಳದಿ ಕಾರ್ಡ್‌ ಎಚ್ಚರಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.